
ಮುಂಬೈ: ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳ ಮಾದರಿಯಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂಬೈ ಮಹಾನಗರ ಸಜ್ಜಾಗಿದೆ. ಚೆನ್ನೈ ನಂತರ ಈ ತಂತ್ರಜ್ಞಾನದ ಮೂಲಕ ಬೃಹತ್ ಪ್ರಮಾಣದಲ್ಲಿ ತಲೆದೂರಿದ ನೀರಿನ ಕೊರತೆ ನೀಗಿಸಿಕೊಳ್ಳಲಿರುವ ಭಾರತದ ಎರಡನೇ ನಗರವಾಗಿ ಮುಂಬೈ ಹೊರಹೊಮ್ಮಲಿದೆ. 2029ರ ವೇಳೆಗೆ ನಗರದಲ್ಲಿ ಎದುರಾಗಬಹುದಾದ ಭೀಕರ ನೀರಿನ ಅಭಾವವನ್ನು ಕಮ್ಮಿ ಮಾಡಲು ಬೃಹನ್‌ಮುಂಬೈ ಮಹಾನಗರ ಪಾಲಿಕೆ ₹4,007 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
2009ರಲ್ಲಿ ಮುಂಬೈ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದಾಗ ನಗರದ ಸರೋವರಗಳು ಬತ್ತಿ ಹೋಗಿದ್ದವು. ಅಂದಿನಿಂದ ಪ್ರತಿದಿನ ನೀರಿನ ಕೊರತೆ ಎದುರಿಸುತ್ತಿದ್ದ ಮುಂಬೈ ಮಹಾನಗರ ಪಾಲಿಕೆ, ಮಾನ್ಸೂನ್ ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಮುದ್ರದ ನೀರನ್ನು ಶುದ್ಧೀಕರಿಸುವ ಪ್ರಸ್ತಾಪ ಇಟ್ಟಿತ್ತು. ತದನಂತರ ಸುಮಾರು 15 ವರ್ಷಗಳ ಕಾಲ ನಾನಾ ಹಂತಗಳಲ್ಲಿ ಚರ್ಚೆಯಲ್ಲಿದ್ದ ಈ ಯೋಜನೆಗೆ ಇದೀಗ ಅಂತಿಮ ರೂಪ ಸಿಕ್ಕಿದೆ. ವಾಯುವ್ಯ ಮುಂಬೈನ ಮಲಾಡ್ ಬಳಿಯ ಕರಾವಳಿ ಗ್ರಾಮವಾದ ಮನೋರಿಯಲ್ಲಿ 12 ಎಕರೆ ಜಾಗದಲ್ಲಿ ಈ ಬೃಹತ್ 'ಉಪ್ಪುನೀರು ಶುದ್ಧೀಕರಣ ಘಟಕ' (Desalination Plant) ನಿರ್ಮಾಣವಾಗಲಿದೆ.
ಮೊದಲ ಹಂತವಾಗಿ ನಿತ್ಯ 200 ಮಿಲಿಯನ್ ಲೀಟರ್ (20 ಕೋಟಿ ಲೀಟರ್) ನೀರು ಸಂಸ್ಕರಣೆ. ಎರಡನೇ ಹಂತವಾಗಿ ಯೋಜನೆ ಪೂರ್ಣಗೊಂಡಾಗ ನಿತ್ಯ 400 ಮಿಲಿಯನ್ ಲೀಟರ್ (40 ಕೋಟಿ ಲೀಟರ್) ನೀರು ಪೂರೈಕೆ ಆಗಲಿದೆ. 2030ರ ಮಧ್ಯಭಾಗದ ವೇಳೆಗೆ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಭಾರತದಲ್ಲೇ ಅತ್ಯಂತ ದೊಡ್ಡ ಉಪ್ಪುನೀರು ಶುದ್ಧೀಕರಣ ಘಟಕ ಎನಿಸಿಕೊಳ್ಳಲಿದೆ.
ಈ ಬೃಹತ್ ಘಟಕದ ಉಪ್ಪುನೀರು ನಿರ್ಮೂಲನ ವ್ಯವಸ್ಥೆಯನ್ನು ಇಸ್ರೇಲ್ ಮೂಲದ ಪ್ರಸಿದ್ಧ ಐಡಿಇ ಟೆಕ್ನಾಲಜೀಸ್ ಸಂಸ್ಥೆಯು ನಿರ್ಮಿಸಲಿದ್ದು, ಮುಂದಿನ 20 ವರ್ಷಗಳ ಕಾಲ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ. ಮೂಲಸೌಕರ್ಯ ಹಾಗೂ ನಾಗರಿಕ ಕಾಮಗಾರಿಗಳನ್ನು ಹೈದರಾಬಾದ್ ಮೂಲದ ಜಿವಿಪಿಆರ್ ಎಂಜಿನಿಯರ್ಸ್ ಸಂಸ್ಥೆ ನಡೆಸಿಕೊಡಲಿದೆ.
ಈ ಯೋಜನೆಗೆ ರಾಜ್ಯ ಮತ್ತು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳಿಂದ (CRZ) ಕಠಿಣ ಷರತ್ತುಗಳೊಂದಿಗೆ ಅನುಮತಿ ದೊರೆತಿದೆ. ತ್ಯಾಜ್ಯ ಉಪ್ಪುನೀರನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಮರಳಿಸುವುದು. ಕಡಲಾಚೆಯ ಪೈಪ್‌ಲೈನ್‌ಗಳಿಗಾಗಿ ವಿಶೇಷ ಟನಲ್ ಬೋರಿಂಗ್ ಬಳಸುವುದು. ಪ್ಲಾಂಟ್‌ಗೆ ಅಗತ್ಯವಿರುವ ವಿದ್ಯುತ್ ಶಕ್ತಿಯ ಒಂದು ಭಾಗವನ್ನು ನವೀಕರಿಸಬಹುದಾದ ಇಂಧನದಿಂದ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಮಳೆಗಾಲದ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಅಭಿಜಿತ್ ಬಂಗಾರ್ ತಿಳಿಸಿದ್ದಾರೆ.
ಸಮುದ್ರದಿಂದ ಪೈಪ್‌ಲೈನ್ ಮೂಲಕ ಉಪ್ಪು ನೀರನ್ನು ಘಟಕಕ್ಕೆ ತರಲಾಗುತ್ತದೆ. ಬಳಿಕ ಮರಳು, ಪಾಚಿ ಹಾಗೂ ಕಸವನ್ನು ಮೊದಲ ಹಂತದಲ್ಲೇ ತಡೆಯಲಾಗುತ್ತದೆ. ಅತ್ಯಂತ ಹೆಚ್ಚಿನ ಒತ್ತಡದಲ್ಲಿ ನೀರನ್ನು ವಿಶೇಷ ಸೂಕ್ಷ್ಮ ಪೊರೆಗಳ (Semi-permeable Membranes) ಮೂಲಕ ತಳ್ಳಲಾಗುತ್ತದೆ. ಇವು ಕರಗಿದ ಲವಣಗಳು ಮತ್ತು ಕಲ್ಮಶಗಳನ್ನು ತಡೆದು, ಶುದ್ಧ ನೀರಿನ ಅಣುಗಳನ್ನು ಒಂದು ಕಡೆ ಶೇಖರಣೆ ಮಾಡುತ್ತದೆ. ಕೊನೆಯಲ್ಲಿ ನೀರನ್ನು ಕುಡಿಯಲು ಯೋಗ್ಯವಾಗಿಸಲು ಅಗತ್ಯವಾದ ಖನಿಜಗಳನ್ನು ಪುನಃ ಸೇರಿಸಲಾಗುತ್ತದೆ.
ಮುಂಬೈ ನಗರಕ್ಕೆ ಏಳು ಪ್ರಮುಖ ಸರೋವರಗಳಿಂದ ನಿತ್ಯ ಸುಮಾರು 4,100 ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಣಿಜ್ಯ ಅಗತ್ಯಗಳಿಗೆ ನಿತ್ಯ ಕನಿಷ್ಠ 4,664 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಅಂದರೆ ಪ್ರಸ್ತುತವೇ ನಿತ್ಯ 500 ರಿಂದ 600 ಮಿಲಿಯನ್ ಲೀಟರ್ ನೀರಿನ ಕೊರತೆ ಇದೆ.
ಮಾನ್ಸೂನ್ ಮಳೆ ವಿಳಂಬವಾದರೆ ಅಥವಾ ಕಡಿಮೆಯಾದರೆ ನಗರದಲ್ಲಿ ಹಾಹಾಕಾರ ಸೃಷ್ಟಿಯಾಗುತ್ತದೆ. ಜಲಾಶಯಗಳ ಮಟ್ಟ ಶೇ. 23.5ಕ್ಕೆ ಕುಸಿದಾಗ ನಗರದಾದ್ಯಂತ ಶೇ. 10ರಷ್ಟು ನೀರು ಕಡಿತ ಮಾಡುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಈ ನೂತನ 'ಸಮುದ್ರ ನೀರು ಶುದ್ಧೀಕರಣ ಘಟಕ'ವು ಮುಂಬೈ ನಗರಕ್ಕೆ ಜೀವಜಲದ ಹೊಸ ಜೀವ ತುಂಬಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ