
ನವದೆಹಲಿ(ಫೆ.26): ಪತ್ರಿಕೆಗಳ ಸುದ್ದಿ ಬಳಸಿಕೊಂಡು ಸಂಪಾದಿಸಿದ ಆದಾಯ ಹಂಚಿಕೊಳ್ಳಲು ಯುರೋಪ್, ಆಸ್ಪ್ರೇಲಿಯಾ ಮತ್ತು ಫ್ರಾನ್ಸ್ ರಾಷ್ಟ್ರಗಳ ಜೊತೆ ಗೂಗಲ್ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ, ಭಾರತದಲ್ಲೂ ಇಂಥದ್ದೇ ನೀತಿ ಅಳವಡಿಸಿಕೊಳ್ಳುವಂತೆ ಗೂಗಲ್‌ಗೆ ಭಾರತೀಯ ಪತ್ರಿಕೆಗಳ ಸಂಘಟನೆಯಾದ ‘ದ ನ್ಯೂಸ್ ಪೇಪರ್ ಸೊಸೈಟಿ (ಐಎನ್‌ಎಸ್)’ ಸೂಚಿಸಿದೆ. ಅಲ್ಲದೆ ಜಾಹೀರಾತು ಆದಾಯದಲ್ಲಿ ಪ್ರಕಾಶಕರಿಗೆ ಶೇ.85ರಷ್ಟುಪಾಲು ನೀಡಬೇಕು ಮತ್ತು ಜಾಹೀರಾತು ನೀತಿಯನ್ನು ಇನ್ನಷ್ಟುಪಾರದರ್ಶಕಗೊಳಿಸಬೇಕು ಎಂದು ಆಗ್ರಹ ಮಾಡಿದೆ.
ಈ ಸಂಬಂಧ ಭಾರತದಲ್ಲಿನ ಗೂಗಲ್ ವ್ಯವಸ್ಥಾಪಕ ಸಂಜಯ್ ಗುಪ್ತಾ ಅವರಿಗೆ ಗುರುವಾರ ಪತ್ರ ಬರೆದಿರುವ ಐಎನ್‌ಎಸ್ ಅಧ್ಯಕ್ಷ ಎಲ್.ಆದಿಮೂಲಂ, ‘ಪತ್ರಿಕೆಗಳು ಸುದ್ದಿಯನ್ನು ಸಂಗ್ರಹಿಸಿ ಮುದ್ರಿಸುವುದಕ್ಕೆ ಸಾಕಷ್ಟುವೆಚ್ಚ ಮಾಡುತ್ತವೆ. ಆರಂಭದಿಂದಲೂ ವಿಶ್ವಾಸಾರ್ಹ ಸುದ್ದಿಯನ್ನು ಪತ್ರಿಕೆಗಳು ಗೂಗಲ್‌ಗೆ ನೀಡುತ್ತಲೇ ಬಂದಿವೆ. ಖಚಿತ ಸುದ್ದಿ, ಪ್ರಚಲಿತ ವಿದ್ಯಮಾನ, ವಿಶ್ಲೇಷಣೆ, ಮಹಿತಿ ಮತ್ತು ಮನೋರಂಜನೆಗೆ ಸಂಬಂಧಿಸಿದಂತೆ ಗುಣಮಟ್ಟದ ಪತ್ರಿಕೋದ್ಯಮಕ್ಕೆ ಗೂಗಲ್‌ಗೆ ಸಂಪೂರ್ಣ ಪ್ರವೇಶ ನೀಡಲಾಗಿದೆ. ಗುಣಮಟ್ಟದ ಪ್ರಕಾಶನ ಸಂಸ್ಥೆಗಳಿಂದ ಹೊರಹೊಮ್ಮುವ ವಿಶ್ವಾಸಾರ್ಹ ಸುದ್ದಿಗಳಿಗೂ ಮತ್ತು ಇತರೆ ಮಾಧ್ಯಮಗಳಲ್ಲಿ ಹರಡುವ ಊಹಾಪೋಹದ ಸುದ್ದಿಗಳಿಗೂ ಸಾಕಷ್ಟುವ್ಯತ್ಯಾಸವಿದೆ. ಜಾಹೀರಾತು, ಸುದ್ದಿ ವಲಯದ ಬೆನ್ನಲುಬು. ಆದರೆ ಡಿಜಿಟಲ್ ವಲಯದ ಪ್ರವೇಶದ ಬಳಿಕ ಪತ್ರಿಕೆಗಳ ಜಾಹೀರಾತು ಆದಾಯ ಕಡಿತವಾಗಿದೆ, ಅದರಲ್ಲೂ ಗೂಗಲ್ ಜಾಹೀರಾತಿನಲ್ಲಿ ದೊಡ್ಡ ಪಾಲನ್ನು ಪಡೆದುಕೊಳ್ಳುತ್ತಿದೆ, ತನ್ಮೂಲಕ ಮುದ್ರಕರಿಗೆ ಸಣ್ಣ ಪಾಲನ್ನು ಮಾತ್ರವೇ ಉಳಿಸುತ್ತಿದೆ.’
‘ಈ ಪ್ರಮುಖ ವಿಷಯದ ಬಗ್ಗೆ ನಾವು ಗೂಗಲ್ ಜೊತೆ ಸಾಕಷ್ಟುಚರ್ಚೆ ನಡೆಸಿದ್ದೇವೆ. ಭಾರತೀಯ ಮುದ್ರಣ ಮಾಧ್ಯಮವು ದೇಶದಲ್ಲೇ ಸುದ್ದಿ ಮತ್ತು ಮಾಹಿತಿಗೆ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ ಮತ್ತು ದೇಶ ಕಟ್ಟುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೊರೋನಾ ಸಾಂಕ್ರಾಮಿಕ ಮತ್ತು ಪ್ರಸಕ್ತ ಡಿಜಿಟಲ್ ಉದ್ಯಮ ಮಾದರಿಯು ಮುದ್ರಕರ ಪಾಲಿಗೆ ನ್ಯಾಯಸಮ್ಮತವಾಗಿ ವರ್ತಿಸುತ್ತಿಲ್ಲ. ಈ ಮೂಲಕ ಮುದ್ರಣ ಮಾಧ್ಯಮವು ಕಾರ್ಯಸಾಧುವಾಗಿ ಉಳಿಯದಂತೆ ಮಾಡುತ್ತಿವೆ. ಆದರೆ ಗೂಗಲ್ ಇತ್ತೀಚೆಗೆ ಫ್ರಾನ್ಸ್, ಯುರೋಪಿಯನ್ ಒಕ್ಕೂಟ ಮತ್ತು ಆಸ್ಪ್ರೇಲಿಯಾ ದೇಶಗಳಲ್ಲಿ ಹೆಚ್ಚಿನ ಆದಾಯ ಹಂಚಿಕೆ ಮತ್ತು ಜಾಹೀರಾತು ಆದಾಯದಲ್ಲಿ ಹೆಚ್ಚಿನ ಪಾಲು ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಇದೇ ನೀತಿಯನ್ನು ಭಾರತದಲ್ಲೂ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದೇವೆ’ ಎಂದು ಪತ್ರದಲ್ಲಿ ಆದಿಮೂಲಂ ಆಗ್ರಹ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ