Indian Navy: ಭಾರತೀಯ ನೌಕಾಪಡೆಗೆ ಬೇಕಿದೆ ಖಾಸಗಿ ಸಹಯೋಗ!

By Suvarna News  |  First Published Nov 24, 2021, 11:37 PM IST

* ಫ್ರಾನ್ಸ್ ಮತ್ತೆ ಪರಮಾಣು ಜಲಾಂತರ್ಗಾಮಿ ತಂತ್ರಜ್ಞಾನವನ್ನು ಹಂಚಿಕೊಳ್ಳುವ ನಿರೀಕ್ಷೆ

* 2017ರಲ್ಲಿ, ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಭಾರತವು ಫ್ರಾನ್ಸ್ ಅನ್ನು ಸಂಪರ್ಕಿಸಿತ್ತು

* ಭಾರತೀಯ ನೌಕಾಪಡೆಗೆ ಬೇಕಿದೆ ಖಾಸಗಿ ಸಹಯೋಗ 


ಗಿರೀಶ್ ಲಿಂಗಣ್ಣ 

ನವದೆಹಲಿ(ನ.24): ಅಮೆರಿಕಾ ಮುಖ ಮುರಿದ ಮೇಲೆ ಮೇಲೆ, ಫ್ರಾನ್ಸ್ ದೇಶವು ಈಗ ನಮ್ಮೊಂದಿಗೆ ಪರಮಾಣು ಜಲಾಂತರ್ಗಾಮಿ ತಂತ್ರಜ್ಞಾನವನ್ನು ಹಂಚಿಕೊಳ್ಳಬಹುದು ಎಂದು ಭಾರತವು ಆಶಿಸುತ್ತಿದೆ. 2017ರಲ್ಲಿ, ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಭಾರತವು ಫ್ರಾನ್ಸ್ ಅನ್ನು ಸಂಪರ್ಕಿಸಿತ್ತು. ಆದರೆ ಅದು ವ್ಯರ್ಥ ಪ್ರಯತ್ನವಾಗಿತ್ತು. ಈಗ, ಪರಿಸ್ಥಿತಿ ವಿಭಿನ್ನವಾಗಿದೆ. ಏಕೆಂದರೆ, ಆಸ್ಟ್ರೇಲಿಯಾವು ಜಲಾಂತರ್ಗಾಮಿ ಒಪ್ಪಂದಕ್ಕೆ ಅಮೆರಿಕ ಮತ್ತು ಬ್ರಿಟನ್‌ಗೆ ಆದ್ಯತೆ ನೀಡುವಾಗ ಫ್ರಾನ್ಸ್ ಅನ್ನು ಹೊರಹಾಕಿತು. ಆದರೆ ಸುಧಾರಿತ ಪರಮಾಣು ಜಲಾಂತರ್ಗಾಮಿ ನೌಕೆಗಳಿಂದ ಸಶಕ್ತವಾಗಿರುವ ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ - ಈ ಬಿಗ್ 5 ದೇಶಗಳಿಗಿಂತ ಭಾರತವು ಎಷ್ಟು ಸಮಯದವರೆಗೆ ಹಿಂದುಳಿಯಲು ಸಾಧ್ಯ ಹೇಳಿ? ಸುಧಾರಿತ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಪಡೆಯಲು ಭಾರತವು ಇತರ ದೇಶಗಳನ್ನು ಅವಲಂಬಿಸುತ್ತ ಎಷ್ಟು ದಿನ ಉಳಿಯಬಹುದು? ಸದ್ಯಕ್ಕೆ, ಈ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳು ಸಿಗುವುದಿಲ್ಲ. ಮೊದಲನೆಯದಾಗಿ, ಭೌಗೋಳಿಕ ರಾಜಕೀಯ ಶಕ್ತಿಯು ನೌಕಾ ಶಕ್ತಿಯಲ್ಲಿ ನಿರ್ಣಾಯಕ ಅಂಶವಾಗಿದೆ. ಎರಡನೆಯದಾಗಿ, ಸುಧಾರಿತ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಲು ಭಾರತವು ಇನ್ನೂ ಸಾಕಷ್ಟು ದೂರ ಸಾಗಬೇಕಾಗಿದೆ. ಮೂರನೆಯದಾಗಿ, ನಿಷೇಧಿತ ವೆಚ್ಚದ ಅಂಶ.

Tap to resize

Latest Videos

ಭಾರತೀಯ ವಾಯುಸೇನೆಗೆ ಶಕ್ತಿ ತುಂಬಲಿದೆ AMCA!

ಪುಷ್ಟೀಕರಿಸಿದ ಯುರೇನಿಯಂ ಕೊರತೆಯಿಂದಾಗಿ ಭಾರತವು ಸ್ಥಳೀಯ ನೌಕಾ ಪರಮಾಣು ರಿಯಾಕ್ಟರ್‌ಗಳನ್ನು ಹೊಂದುವುದು ಸದ್ಯಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಖಂಡಿತವಾಗಿಯೂ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ದೃಢವಾಗಿ ಸ್ಥಾಪಿಸಲು ಮತ್ತು ತನ್ನ ಕ್ವಾಡ್ ಪಾಲುದಾರರಾದ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳೊಂದಿಗೆ ಸಮಾನವಾಗಿರಲು ಸಮರ್ಥ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಭಾರತವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಬಹುದು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ತನ್ನ ಹೆಜ್ಜೆ ಗುರುತುಗಳನ್ನು ತೀವ್ರವಾಗಿ ಹೆಚ್ಚಿಸುತ್ತಿದೆ. ಚೀನಾ ತನ್ನ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದಿಡುತ್ತಿರುವ ಕಾರಣ ಭಾರತಕ್ಕೆ ತೃಪ್ತಿ ಪಟ್ಟುಕೊಂಡು ಸುಮ್ಮನಿರಲು ಸಾಧ್ಯವಿಲ್ಲ, ಅದಕ್ಕೆ ಸಮಯವೂ ಇದಲ್ಲ.

ಸಂಖ್ಯಾ ಬಲವನ್ನು ನಾವು ನೋಡುವುದಾದರೆ, 14 ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ನೌಕೆಗಳು (SSBM) ಮತ್ತು 54 ದಾಳಿ ಜಲಾಂತರ್ಗಾಮಿ ನೌಕೆಗಳು (SSN) ಸೇರಿದಂತೆ 68 ಜಲಾಂತರ್ಗಾಮಿಗಳೊಂದಿಗೆ ಅಮೆರಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಷ್ಯಾವು 29 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ, ಅದರಲ್ಲಿ 11 ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ನೌಕೆಗಳು (SSBM) ಮತ್ತು 18 ದಾಳಿ ಜಲಾಂತರ್ಗಾಮಿ ನೌಕೆಗಳು (SSN). ಸರ್ವಶಕ್ತ ಚೀನಾವು 12 ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ-ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ನೌಕೆಗಳು ಮತ್ತು ದಾಳಿಯ ಜಲಾಂತರ್ಗಾಮಿಗಳು-ತಲಾ 6. ಯುಕೆ 11 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ, ಅದರಲ್ಲಿ 4 ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ನೌಕೆಗಳು (SSBM) ಮತ್ತು ಉಳಿದವು ದಾಳಿ ಜಲಾಂತರ್ಗಾಮಿಗಳು (SSN). ಮುಂದಿನ ಸ್ಥಾನದಲ್ಲಿ ಫ್ರಾನ್ಸ್ ಇದೆ. ಇದು ಕೇವಲ ನಾಲ್ಕು ಬ್ಯಾಲಿಸ್ಟಿಕ್ ಜಲಾಂತರ್ಗಾಮಿಗಳನ್ನು (SSBM) ಹೊಂದಿದೆ. ಮತ್ತು ಅಂತಿಮವಾಗಿ, ಭಾರತವು ಕೇವಲ ಒಂದು ಬ್ಯಾಲಿಸ್ಟಿಕ್ ಜಲಾಂತರ್ಗಾಮಿ SSBM - INS ಅರಿಹಂತ್ ಅನ್ನು ಹೊಂದಿದೆ. ಪರಮಾಣು ದಾಳಿ ಜಲಾಂತರ್ಗಾಮಿ ನೌಕೆಗಳು ಅದರ ಬಳಿ ಇಲ್ಲ. ಬಿಗ್ 5 ದೇಶಗಳು ಭೂಮಿ, ಸಮುದ್ರ ಮತ್ತು ಗಾಳಿಯಲ್ಲಿ ಹೇಗೆ ಬಲಶಾಲಿಯಾಗಿವೆ ಎಂಬುದನ್ನು ಈ ಸಂಖ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಮಾರ್ಚ್ ಅಂತ್ಯದೊಳಗೆ HAL ಚಾಪರ್ ಘಟಕದಲ್ಲಿ ತಯಾರಾಗಲಿದೆ ಮೊದಲ ಹೆಲಿಕಾಪ್ಟರ್!

ಭಾರತವು 15 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ, ಅವುಗಳಲ್ಲಿ ಎಂಟು ರಷ್ಯಾದ ಕಿಲೋ ಕ್ಲಾಸ್, ನಾಲ್ಕು ಜರ್ಮನ್ HDW ಗಳು, ಮತ್ತು ಮೂರು ಸ್ಕಾರ್ಪೀನ್‌ಗಳು. ಇವುಗಳನ್ನು ಫ್ರಾನ್ಸ್ ಮತ್ತು ಸ್ಪೇನ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಕಾರ್ಗಿಲ್ ಯುದ್ಧ ಸಂಭವಿಸಿ ಒಂದು ದಶಕದ ಬಳಿಕ 2009ರಲ್ಲಿ INS ಅರಿಹಂತ್ ಅನ್ನು ಪರಿಚಯಿಸಲಾಯಿತು. ರಷ್ಯಾದ ಅಕುಲಾ-1 ದರ್ಜೆಯ ಜಲಾಂತರ್ಗಾಮಿ ನೌಕೆಯ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. INS ಅರಿಹಂತ್‌ಗಾಗಿ ಪರಮಾಣು ರಿಯಾಕ್ಟರ್ ಅನ್ನು ನಿರ್ಮಿಸಲು ಭಾರತ 4 ವರ್ಷಗಳಿಗಿಂತ ಹೆಚ್ಚು ಸಮಯವನ್ನೇ ತೆಗೆದುಕೊಂಡಿತು. ಇದಕ್ಕೂ ಮೊದಲು, ರಷ್ಯಾದಿಂದ ಭಾರತವು ದಾಳಿ ಪರಮಾಣು ಜಲಾಂತರ್ಗಾಮಿ ನೌಕೆಯಾದ INS ಚಕ್ರವನ್ನು 10 ವರ್ಷಗಳ ಬಾಡಿಗೆ ಆಧಾರದಲ್ಲಿ ತೆಗೆದುಕೊಂಡಿತ್ತು. ಐದು ದೊಡ್ಡ ರಾಷ್ಟ್ರಗಳ ಪೈಕಿ ಯಾವುದೂ ಭಾರತದೊಂದಿಗೆ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳ ಬಗ್ಗೆ ಜ್ಞಾನವನ್ನು ಹಂಚಿಕೊಂಡಿಲ್ಲ. ಭವಿಷ್ಯದಲ್ಲಿಯೂ ಅವರು ಹಂಚಿಕೊಳ್ಳುವುದಿಲ್ಲ. ಹೆಚ್ಚೆಂದರೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನವನ್ನು ವರ್ಗಾಯಿಸಲಾಗುತ್ತದೆ.

ಈಗ, ಪರಮಾಣು ಜಲಾಂತರ್ಗಾಮಿ ಶಕ್ತಿಯನ್ನು ಹೆಚ್ಚಿಸಲು ಭಾರತದ ಸಿದ್ಧತೆ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ದೇಶವೀಗ ಎರಡನೇ ಪರಮಾಣು ಜಲಾಂತರ್ಗಾಮಿಯಾದ INS ಅರಿಘಾತ್‌ ಸಲುವಾಗಿ ಕೆಲಸ ಮಾಡುತ್ತಿದೆ. ಇದನ್ನು 2022ರಲ್ಲಿ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಮುಖ್ಯವಾಗಿ ಪರಮಾಣು ರಿಯಾಕ್ಟರ್‌ಗಳ ದಕ್ಷತೆಯ ವ್ಯತ್ಯಾಸದಿಂದಾಗಿ ಇದು ಅಮೆರಿಕದ ಜಲಾಂತರ್ಗಾಮಿ ನೌಕೆಗಳಷ್ಟು ಪರಿಣಾಮಕಾರಿಯಾಗಿಲ್ಲ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಲು ಭಾರತವು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರಬೇಕಾದ್ದು ಅವಶ್ಯವಾಗಿದೆ. ಚೀನಾವನ್ನು ಎದುರಿಸಲು ಸನ್ನದ್ಧವಾಗಬೇಕಿದ್ದರೆ, ಅದು ಪರಮಾಣು ದಾಳಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರಬೇಕಾಗುತ್ತದೆ. ಪರಮಾಣು ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸುವುದು ಸಹಜವಾಗಿಯೇ ದೊಡ್ಡ ತಾಂತ್ರಿಕ ಸವಾಲಾಗಿದೆ. ನೀರೊಳಗೆ ಪ್ರಚಂಡ ವೇಗದೊಂದಿಗೆ, ಅವು ಡೀಸೆಲ್ ಅಥವಾ ವಿದ್ಯುತ್ ಮೇಲೆ ಅವಲಂಬಿತವಾಗಿರುವ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗಿಂತ ಸಾಕಷ್ಟು ಸುಧಾರಿತವಾಗಿವೆ. ಸಾಂಪ್ರದಾಯಿಕ ಜಲಾಂತರ್ಗಾಮಿಗಳಿಗೆ ಹೋಲಿಸಿದರೆ ಅವು ಎರಡು ಪಟ್ಟು ಆಯುಧದ ಭಾರವನ್ನು ಹೊತ್ತೊಯ್ಯಬಲ್ಲವು. ಆದರೆ ಅಂತಿಮವಾಗಿ ಅವು ಮಿತವ್ಯಯಕಾರಿಯಾಗಿರುತ್ತವೆ.

ಸುಧಾರಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಭಾರತವು ಎರವಲು ಪಡೆದ ಅಥವಾ ಹಳೆಯ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರಬಾರದು. ಸ್ವಾವಲಂಬನೆ ಮತ್ತು ಸ್ವಯಂಪೂರ್ಣತೆ- ಆತ್ಮನಿರ್ಭರ ಭಾರತದ ಗುರಿಗಳು-ನೌಕಾ ಶಕ್ತಿಯನ್ನು ಹೆಚ್ಚಿಸಲು ಇವು ಪೂರ್ಣವಾಗಿ ಅಗತ್ಯವಿರುತ್ತವೆ. ನೌಕಾಪಡೆಯ ಬಲವನ್ನು, ನಿರ್ದಿಷ್ಟವಾಗಿ ಪರಮಾಣು ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡಲು ಭಾರತವು ಖಾಸಗಿ ಪಾಲುದಾರರನ್ನು ಪ್ರೋತ್ಸಾಹಿಸಬೇಕು. ನಾವು ಅಮೆರಿಕದಲ್ಲಿ ಉತ್ತಮ ಉದಾಹರಣೆಯನ್ನು ಹೊಂದಿದ್ದೇವೆ. ಅದು ನೌಕಾಪಡೆಯಲ್ಲಿ ಖಾಸಗಿ ಕಂಪನಿಗಳಿಗೆ ಪಾತ್ರ ವಹಿಸಲು ಅವಕಾಶ ಮಾಡಿಕೊಟ್ಟಿದೆ. ವರ್ಜೀನಿಯಾದ ಖಾಸಗಿ ಸಂಸ್ಥೆ BWX ಟೆಕ್ನಾಲಜೀಸ್ (BWXT), ಅಮೆರಿಕದ ನೌಕಾ ಜಲಾಂತರ್ಗಾಮಿ ನೌಕೆಗಳು ಮತ್ತು ವಿಮಾನವಾಹಕಗಳ ಪರಮಾಣು ರಿಯಾಕ್ಟರ್ ಘಟಕಗಳಲ್ಲಿ ಸಕ್ರಿಯವಾಗಿದೆ. ಇದು 1950ರ ದಶಕದಿಂದಲೂ ನೌಕಾ ಪರಮಾಣು ಘಟಕಗಳು ಮತ್ತು ರಿಯಾಕ್ಟರ್‌ಗಳನ್ನು ತಯಾರಿಸುತ್ತಿದೆ. ಇದರ ಎಂಜಿನಿಯರ್‌ಗಳು ಅನೇಕ ಜಲಾಂತರ್ಗಾಮಿ ನೌಕೆಗಳಿಗೆ ಘಟಕಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ತಯಾರಿಸಿದ್ದಾರೆ. 1960ರ ದಶಕದಲ್ಲಿಯೇ, ಅಮೆರಿಕದ ನೌಕಾಪಡೆಯು USS ಎಂಟರ್‌ಪ್ರೈಸ್ (CVN 65) ಅನ್ನು ಹೊಂದಿತ್ತು, ಇದು ಎಂಟು ಪರಮಾಣು ರಿಯಾಕ್ಟರ್‌ಗಳನ್ನು ಹೊಂದಿರುವ ಮೊದಲ ಪರಮಾಣು-ಚಾಲಿತ ವಿಮಾನ ನೌಕಾ ವಾಹಕವಾಗಿದೆ. ಇದು 2012ರವರೆಗೆ ಸಕ್ರಿಯವಾಗಿತ್ತು. ಹಾಗಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರೂ ಆಗಿರುವ ಬಿಗ್ ಫೈವ್ ರಾಷ್ಟ್ರಗಳು ರಾತ್ರಿ ಬೆಳಗಾಗುವಷ್ಟರಲ್ಲಿ ತಮ್ಮ ನೌಕಾಬಲವನ್ನು ಬೆಳೆಸಿಕೊಂಡಿದ್ದಲ್ಲ. ಈ ದೇಶಗಳು ತಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಏಕೆ ಹಿಂಜರಿಯುತ್ತಿವೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಜ್ಞಾನವೇ ಶಕ್ತಿಯಾಗಿದೆ.

Bengaluru Aviation| ಬೆಂಗಳೂರು ವಿಮಾನಯಾನ ಕ್ಷೇತ್ರಕ್ಕೆ ಬೇಕಿದೆ ಉತ್ತೇಜನ!

ವಿಸ್ತರಣೆ ಕಾರ್ಯಕ್ರಮ

ನೌಕಾ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ, ಪ್ರಾಜೆಕ್ಟ್ 75 ಆಲ್ಫಾ (Project 75 Alpha) ಅಡಿಯಲ್ಲಿ ಆರು ಪರಮಾಣು-ಚಾಲಿತ ದಾಳಿ ಜಲಾಂತರ್ಗಾಮಿ ನೌಕೆ (SSN) ಗಳನ್ನು ನಿರ್ಮಿಸಲು ಭಾರತವು ಯೋಜಿಸುತ್ತಿದೆ. ಮೊದಲ ಘಟಕವು 2032ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಮೊದಲ ಮೂರನ್ನು ಸ್ಥಳೀಯವಾಗಿ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತದೆ. ಅವು ಭಾರತದಲ್ಲಿ ದೇಶೀಯವಾಗಿ ತಯಾರಿಸಿದ 95% ಘಟಕಗಳನ್ನು ಹೊಂದಿರಬಹುದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಿರ್ಮಿಸಲಿರುವ ಮೂರು ದಾಳಿ ಜಲಾಂತರ್ಗಾಮಿ ನೌಕೆಗಳ ಹಣಕಾಸು ಪ್ರಸ್ತಾವನೆ 50,000 ಕೋಟಿ ರೂ. ಆಗಿದೆ. ಇದರ ಜೊತೆಗೆ, ಆರು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಅರಿಹಂತ್ ಸರಣಿಯಿದೆ, ಇದು ಸಿಡಿತಲೆ ಕ್ಷಿಪಣಿಗಳನ್ನು ಉಡಾವಣೆ ಮಾಡಲು ಅನುಕೂಲವಾಗುತ್ತದೆ. ಒಟ್ಟಾರೆಯಾಗಿ, 24 ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿವೆ. 
ನೌಕಾಪಡೆಯ ಬಲವರ್ಧನೆಯಲ್ಲಿ ಉತ್ತಮ ಪಾತ್ರ ವಹಿಸಲು ಖಾಸಗಿ ಉದ್ಯಮಿಗಳನ್ನು ಹುಡುಕಲು ಮತ್ತು ಪ್ರೋತ್ಸಾಹಿಸಲು ಭಾರತಕ್ಕೆ ಇದು ಸಕಾಲ. ಎಲ್ & ಟಿ, ಟಾಟಾ ಮತ್ತು ವಾಲ್‌ಚಂದನಗರ ಇಂಡಸ್ಟ್ರೀಸ್ ಸೇರಿದಂತೆ ಕೆಲವು ಬೃಹತ್ ಖಾಸಗಿ ಸಂಸ್ಥೆಗಳು ಈಗಾಗಲೇ ಜಲಾಂತರ್ಗಾಮಿಗಳ ನಿರ್ಮಾಣದಲ್ಲಿ ನೌಕಾಪಡೆಗೆ ಸಹಕರಿಸುತ್ತಿವೆ. ಆದರೆ ಈ ಪ್ರಯತ್ನಗಳು ಸಾಕಾಗುವುದಿಲ್ಲ. ಆರ್ಥಿಕತೆಯು ಅವರಿಗೆ ಅನುಕೂಲವಾದರೆ ಮಾತ್ರ ಖಾಸಗಿ ಪಾಲುದಾರರು ಉಳಿಯುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿದಾಗ ಇದು ಸಂಭವಿಸಬಹುದು.

ಖಾಸಗಿ ಭಾಗವಹಿಸುವಿಕೆಯನ್ನು ಆಕರ್ಷಿಸಲು ವಿನ್-ವಿನ್ ಪರಿಸ್ಥಿತಿಯನ್ನು ರಚಿಸುವಲ್ಲಿ ನಂಬಿಕೆ ಮತ್ತು ಪ್ರೋತ್ಸಾಹಗಳು ತುಂಬ ಮಹತ್ವದ್ದಾಗಿರುತ್ತವೆ. ಭಾರತದಲ್ಲಿ, ರಾಜಕೀಯ ಮತ್ತು ಅಧಿಕಾರಶಾಹಿಯ ಪ್ರಮುಖ ಅಡೆತಡೆಗಳನ್ನು ದಾಟುವುದು ಅಷ್ಟು ಸುಲಭವಲ್ಲ. ಆದರೆ ಸ್ವಾವಲಂಬಿಯಾಗಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡರೆ, ಆಗ ಯಾವುದೂ ಅಸಾಧ್ಯವಲ್ಲ. ಕೆಲವೇ ತಿಂಗಳುಗಳಲ್ಲಿ ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಭಾರತವು ಜಗತ್ತಿಗೆ ಮಾದರಿಯಾಗಬಹುದಾದರೆ, ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಮಿಷನ್ ಅನ್ನು ಕಾರ್ಯಗತಗೊಳಿಸುವುದು ಅಸಾಧ್ಯವೇ? ಹೂಡಿಕೆ, ನಾವೀನ್ಯ ಮತ್ತು ಪ್ರಯೋಗಗಳು ಮುಂಬರುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತವೆ. ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಪ್ರಾಯೋಗಿಕವಾಗಿರುವುದು ಮತ್ತು ಕೆಲವೊಮ್ಮೆ ನಿರ್ದಯವಾಗಿಯೂ ಇರುವುದು ಆವಶ್ಯಕ. ರಕ್ಷಣಾ ಉತ್ಪಾದನಾ ವಲಯಕ್ಕೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದರಿಂದ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂಬ ಆತಂಕವನ್ನು ಭಾರತ ಮೊದಲಿಗೆ ನಿವಾರಿಸಿಕೊಳ್ಳಬೇಕು.

- ಲೇಖಕರು- ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.

click me!