ಮಾರ್ಚ್ ಅಂತ್ಯದೊಳಗೆ HAL ಚಾಪರ್ ಘಟಕದಲ್ಲಿ ತಯಾರಾಗಲಿದೆ ಮೊದಲ ಹೆಲಿಕಾಪ್ಟರ್!

* ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ HAl ಘಟಕ

* 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನ ಮಂತ್ರಿ ಮೋದಿ

* ಮಾರ್ಚ್ ಅಂತ್ಯಕ್ಕೆ ಗಡುವು ವಿಸ್ತರಣೆ

HAL Gubbi First batch of helicopters to be rolled out from Tumkur pod

ಗಿರೀಶ್ ಲಿಂಗಣ್ಣ 

ತುಮಕೂರು(ನ.18): ತುಮಕೂರು ಜಿಲ್ಲೆಯ ಗುಬ್ಬಿ (Gubbi, Tumakuru) ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (Hindustan Aeronautics Limited) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಾಪಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ರಸ್ತೆಯ ಮೂಲಕ ಇಲ್ಲಿಗೆ ಎರಡು ಗಂಟೆಗಳ ಪ್ರಯಾಣ ಮಾತ್ರವಿದೆ.

ಅದರಂತೆ, 610 ಎಕರೆ ಜಾಗದಲ್ಲಿ ಸ್ಥಾಪನೆಯಾಗುತ್ತಿರುವ ಈ ಹೊಸ ಹೆಲಿಕಾಪ್ಟರ್ (Helicapter) ವಿಭಾಗವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕನಿಷ್ಠ 4,000 ಕುಟುಂಬಗಳಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಘೋಷಿಸಲಾಯಿತು. ಮೊದಲ ಹೆಲಿಕಾಪ್ಟರ್ ಅನ್ನು 2018ರ ವೇಳೆಗೆ ಇಲ್ಲಿ ತಯಾರಿಸಲಾಗುವುದು ಎಂದು ಊಹಿಸಲಾಗಿತ್ತು. ಆದರೆ ಪ್ರಗತಿಯ ವೇಗವು ಬಸವನ ಹುಳುವಿನ ಅವತಾರ ತಾಳಿದ್ದರಿಂದ, ಇದು ಕೇವಲ ಕಾಗದಗಳಲ್ಲಿ ಉಳಿದಿದೆ. ಇಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವ ಗಡುವನ್ನು ಈಗ ಮಾರ್ಚ್ 2022ಕ್ಕೆ ವಿಸ್ತರಿಸಲಾಗಿದೆ. 

ಇಂಡೋ-ರಷ್ಯನ್ ಜಂಟಿ ಯೋಜನೆಯಾಗಿರುವ KA 226T, ಅವಳಿ ಎಂಜಿನ್ ಹೆಲಿಕಾಪ್ಟರ್ ಮತ್ತು 3-ಟನ್ ಹೊಸ-ಪೀಳಿಗೆಯ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (LUH) ಗಳನ್ನು ತಯಾರಿಸಲು ಪ್ರತ್ಯೇಕವಾಗಿ ಉದ್ದೇಶಿಸಿದೆ.

HAL Gubbi First batch of helicopters to be rolled out from Tumkur pod

ಅಜ್ಞಾತ ಕಾರಣಗಳಿಗಾಗಿ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಅಗತ್ಯವಿರುವ ಯೋಜನೆಯು ಹೇಗೆ ರಾಜಿ ಮಾಡಿಕೊಂಡಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಗುಬ್ಬಿ ಸ್ಥಾವರವು ರಾಜ್ಯಾದ್ಯಂತ ಕೈಗಾರಿಕಾ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ ಗುರಿಯನ್ನು ಹೊಂದಿದ್ದು, ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಜತೆಗೆ, ಸ್ಥಳೀಯ ಮಟ್ಟದಲ್ಲಿ ಕೌಶಲಪೂರ್ಣ ಕಾರ್ಮಿಕ ಮತ್ತು ತಾಂತ್ರಿಕ ಪರಿಣತಿಯ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುತ್ತದೆ.

ಗುಬ್ಬಿಯಲ್ಲಿರುವ ಈ ಚಾಪರ್ ಘಟಕವು ಒಂದು ವರ್ಷದಲ್ಲಿ 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 175 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ LUH ನ ಆದೇಶವನ್ನು HAL ನಿರೀಕ್ಷಿಸುತ್ತಿತ್ತು. ಇದನ್ನು ಬೆಂಗಳೂರು ಮತ್ತು ತುಮಕೂರು ವಿಭಾಗಗಳಿಂದ ಏಕಕಾಲದಲ್ಲಿ ಉತ್ಪಾದಿಸಲಾಗುತ್ತದೆ.

ಇತ್ತೀಚೆಗೆ ರಕ್ಷಣಾ ಸಚಿವಾಲಯವು 12 LUH ಗಳನ್ನು ಖರೀದಿಸಲು ಆದೇಶವನ್ನು ನೀಡಿದೆ, ಒಟ್ಟು 500 ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ತಯಾರಿಸಲು Kamov-226T ಲೈಟ್ ಹೆಲಿಕಾಪ್ಟರ್ ಅಭಿವೃದ್ಧಿಪಡಿಸುವುದಕ್ಕಾಗಿ ರಷ್ಯಾದೊಂದಿಗೆ ಸಹಯೋಗ ವಹಿಸಲು ಭಾರತವು ಉತ್ಸುಕವಾಗಿದೆ.

ಯೋಜನೆಯು ದೊಡ್ಡ ಗುರಿಯನ್ನು ಹೊಂದಿದ್ದರೂ, ಅಡೆತಡೆಗಳು ಹಲವು ಇವೆ

ಮೊದಲನೆಯದಾಗಿ, ಎಂಜಿನಿಯರಿಂಗ್ ಕಾಲೇಜುಗಳು ನೀಡುವ ಶಿಕ್ಷಣ ಅಥವಾ ಕೋರ್ಸ್ ಅವರನ್ನು ಕೈಗಾರಿಕೆಗಳಿಗಾಗಿ ಸಿದ್ಧಗೊಳಿಸುತ್ತಿದ್ದರೂ ವಿಶೇಷ ತರಬೇತಿಯು ಇನ್ನೂ ದೂರದ ಕನಸಾಗಿದೆ. ಏರೋಸ್ಪೇಸ್ ಕ್ಷೇತ್ರವು ಹೊಸ ತಂತ್ರಜ್ಞಾನದ ಹರಿವಿನೊಂದಿಗೆ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಈ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಮೀಸಲಾದ ಕೇಂದ್ರವು ಸದ್ಯದ ಅಗತ್ಯವಾಗಿದೆ. ಇಂತಹ ತಾಂತ್ರಿಕ ಅರ್ಹತೆ ಇರುವವರು ಇಡೀ ತುಮಕೂರು ಜಿಲ್ಲೆಯಲ್ಲೇ ಇಲ್ಲ ಎಂದು ಇದು ಹೇಳುತ್ತಿದೆ. 
ಎರಡನೆಯದಾಗಿ, ಪೂರಕ ಘಟಕಗಳೊಂದಿಗೆ ನಿರಂತರವಾಗಿ ಬೆಂಬಲಿಸಬೇಕಾದ ಉದ್ಯಮವು ಸುತ್ತಮುತ್ತಲಿನ ಅಗತ್ಯವಾಗಿದೆ. ಜನರಲ್ಲಿ ಈ ಬಗ್ಗೆ ಸ್ವಲ್ಪ ತಿಳಿವಳಿಕೆ ಇದೆ ಅಥವಾ ಅಂತಹ ಘಟಕಗಳು ಬೆರಳೆಣಿಕೆ ಸಂಖ್ಯೆಯಲ್ಲಿವೆ. ಹೀಗಾಗಿ, ಗುಬ್ಬಿ ಘಟಕವು ಬೆಂಗಳೂರಿನಂತಹ ಮಹಾನಗರಗಳನ್ನು ಅವಲಂಬಿಸಬೇಕಾಗುತ್ತದೆ.

ಬೆಂಗಳೂರು ನಗರದ ಕೈಗಾರಿಕೆಗಳ ದಟ್ಟಣೆಯು ವಿವಿಧ ಕಾರಣಗಳಿಂದ ಪರಿಣಾಮಕಾರಿಯಾಗಿಲ್ಲ. ಜಿಲ್ಲೆಯು ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದ್ದರೂ, ರಸ್ತೆಗಳು ಮತ್ತು ರೈಲುಮಾರ್ಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೂ, ಶುಷ್ಕ ಜಿಲ್ಲೆ ಎನಿಸಿರುವ ತುಮಕೂರಿನಲ್ಲಿ 'ಕೈಗಾರಿಕೆಗಳಿಗೆ ಸಾಕಷ್ಟು ನೀರು' ಇಲ್ಲ.

HAL Gubbi First batch of helicopters to be rolled out from Tumkur pod

ಸ್ಮಾರ್ಟ್ ಸಿಟಿ ಟ್ಯಾಗ್ ಹೊರತಾಗಿಯೂ, ಬೆಳವಣಿಗೆಯು ಬೆಂಗಳೂರಿನ ವೇಗವನ್ನು ಅನುಸರಿಸಲು ವಿಫಲವಾಗಿದೆ. ಇದಕ್ಕೆ ಪೂರಕವೆಂಬಂತೆ HAL ನಲ್ಲಿ ಕೆಲಸ ಮಾಡುತ್ತಿರುವ, ಭಾರತದ ನಾನಾ ಭಾಗಗಳಿಂದ ಬಂದಿರುವ ಅನೇಕ ಎಂಜಿನಿಯರ್‌ಗಳು ಮತ್ತು ಉದ್ಯೋಗಿಗಳಿಗೆ ‘ಗುಬ್ಬಿ’ ತಾಲೂಕು ಮಹಾನಗರವಾಗಿರುವ ಬೆಂಗಳೂರಿನಷ್ಟು ಲಾಭದಾಯಕವಾಗಿ ಕಾಣುತ್ತಿಲ್ಲ.

ಯಾವುದೇ ಪ್ರಮುಖ ನದಿಗಳಿಲ್ಲದ ತುಮಕೂರು, ತನ್ನ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸುವುದಕ್ಕೂ ಹೇಮಾವತಿ ಜಲಾಶಯದ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಕರ್ನಾಟಕವು ತುಮಕೂರು ಸೇರಿದಂತೆ ಐದು ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ತರಲು ಆಶಿಸುತ್ತಿದೆ. ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಹೂಡಿಕೆಯನ್ನು ಆಹ್ವಾನಿಸಲು ರಾಜ್ಯವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ? ರಸ್ತೆಗಳು, ನೀರು ಮತ್ತು ಖಚಿತವಾದ ವಿದ್ಯುತ್ ಸರಬರಾಜು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳು, ಹಾಗೆಯೇ ಏರೋಸ್ಪೇಸ್ ಉದ್ಯಮದಲ್ಲಿ ಛಾಪು ಮೂಡಿಸಲು ತರಬೇತಿ ಪಡೆದ ಮಾನವ ಸಂಪನ್ಮೂಲಗಳ ಕೊರತೆ ತುಮಕೂರಿನಲ್ಲಿ ಇದೆ.
 
SEZ ಅಥವಾ ಕೈಗಾರಿಕಾ ಪಾರ್ಕ್ ಅನ್ನು ಅಭಿವೃದ್ಧಿಪಡಿಸುವುದು ಸಮಗ್ರ ಪ್ಯಾಕೇಜ್ ಆಗಿರಬೇಕು - ಮೂಲಸೌಕರ್ಯ ಮತ್ತು ಸಹಾಯಕ ಘಟಕಗಳನ್ನು ಬೆಂಬಲಿಸುವುದು. ಇದಕ್ಕಾಗಿ ಒಂದು ಸಮಗ್ರ ವಿಧಾನ ಅತ್ಯಗತ್ಯವಾಗಿದೆ. 'ಮೇಕ್ ಇನ್ ಇಂಡಿಯಾ' ಮತ್ತು 'ವೋಕಲ್ ಫಾರ್ ಲೋಕಲ್' ಕೇವಲ ಘೋಷಣೆ ಆಗದಿರಲಿ.

- ಲೇಖಕರು- ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.

Latest Videos
Follow Us:
Download App:
  • android
  • ios