
ಕಠ್ಮಂಡು, ನೇಪಾಳ (ಏಪ್ರಿಲ್ 19, 2023): ಭಾರತೀಯ ಪ್ರಮುಖ ಮಹಿಳಾ ಆರೋಹಿ ಬಲ್ಜೀತ್ ಕೌರ್ ಮತ್ತು 2010 ರಲ್ಲಿ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಅರ್ಜುನ್ ವಾಜಪೇಯಿ ಅವರನ್ನು ನೇಪಾಳದ ಅನ್ನಪೂರ್ಣ ಪರ್ವತದಿಂದ ಮಂಗಳವಾರ ರಕ್ಷಿಸಲಾಗಿದೆ ಎಂದು ಸಂಘಟಕರ ಅಧಿಕಾರಿಗಳು ತಿಳಿಸಿದ್ದಾರೆ. ಪೂರಕ ಆಮ್ಲಜನಕವನ್ನು ಬಳಸದೆ ವಿಶ್ವದ 10 ನೇ ಅತಿ ಎತ್ತರದ ಶಿಖರವನ್ನು ಏರಿದ 27 ವರ್ಷದ ಮಹಿಳೆ ಬಲ್ಜೀತ್ ಕೌರ್ ,ಸೋಮವಾರ ಶಿಖರ ಬಿಂದುವಿನಿಂದ ಇಳಿಯುವಾಗ ಕ್ಯಾಂಪ್ 4 ರ ಬಳಿ ನಾಪತ್ತೆಯಾಗಿದ್ದರು.
ವೈಮಾನಿಕ ಶೋಧ ತಂಡವು ಬಲ್ಜೀತ್ ಕೌರ್ ರನ್ನು ಪತ್ತೆ ಮಾಡಿದ ನಂತರ ಆಕೆ 7,363 ಮೀ ನಿಂದ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ತೀವ್ರ ಚಳಿಯಿಂದ ಆಕೆ ಫ್ರಾಸ್ಟ್‌ಬೈಟ್‌ನಿಂದ ಬಳಲುತ್ತಿದ್ದು, ಬಲ್ಜೀತ್ ಕೌರ್‌ರನ್ನು ಚಿಕಿತ್ಸೆಗಾಗಿ ಕಠ್ಮಂಡುವಿನ CIWEC ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: Travel Tips : ಹಿಲ್ ಸ್ಟೇಶನ್ ಗೆ ಹೋದ್ರೆ ವಾಂತಿ ಆಗೋ ಭಯವಿದ್ದರೆ, ಇಲ್ಲಿದೆ ಪರಿಹಾರ
ಕ್ಯಾಂಪ್ 4ರ ಕಡೆಗೆ ಬಲ್ಜೀತ್ ಕೌರ್ ಏಕಾಂಗಿಯಾಗಿ ಇಳಿಯುತ್ತಿರುವುದನ್ನು ವೈಮಾನಿಕ ಶೋಧ ತಂಡವು ನೋಡಿ ಆಕೆಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಶಿಖರ ಬಿಂದುವಿನ ಕೆಳಗೆ ಏಕಾಂಗಿಯಾಗಿದ್ದ ಪ್ರಮುಖ ಭಾರತೀಯ ಮಹಿಳಾ ಪರ್ವತಾರೋಹಿ ಮಂಗಳವಾರ ಬೆಳಗ್ಗೆಯವರೆಗೂ ರೇಡಿಯೋ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ವರದಿ ತಿಳಿಸಿದೆ.
'ತಕ್ಷಣದ ಸಹಾಯ' ಕೇಳುವ ರೇಡಿಯೋ ಸಿಗ್ನಲ್ ಅನ್ನು ಕಳುಹಿಸುವಲ್ಲಿ ಯಶಸ್ವಿಯಾದ ನಂತರವೇ ಮಂಗಳವಾರ ಬೆಳಗ್ಗೆ ವೈಮಾನಿಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. 7,375m (24,193ft) ಎತ್ತರದಲ್ಲಿ ಆಕೆಯ ಜಿಪಿಎಸ್ ಸ್ಥಳ ಪತ್ತೆಯಾಗಿದ್ದು, ಅವರು ಸೋಮವಾರ ಸಂಜೆ 5:15 ರ ಸುಮಾರಿಗೆ ಇಬ್ಬರು ಶೆರ್ಪಾ ಮಾರ್ಗದರ್ಶಿಗಳೊಂದಿಗೆ ಅನ್ನಪೂರ್ಣ ಪರ್ವತವನ್ನು ಏರಿದರು. ಆಕೆಯನ್ನು ಪತ್ತೆಹಚ್ಚಲು ಕನಿಷ್ಠ ಮೂರು ಹೆಲಿಕಾಪ್ಟರ್‌ಗಳನ್ನು ಸಜ್ಜುಗೊಳಿಸಲಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಏಕಾಂಗಿಯಾಗಿ ಸೈಕಲ್ ಜಾಥಾ ಹೊರಟ ಯುವತಿ
ಕಳೆದ ವರ್ಷ ಮೇ ತಿಂಗಳಲ್ಲಿ, ಹಿಮಾಚಲ ಪ್ರದೇಶದ ಬಲ್ಜೀತ್ ಕೌರ್, ಮೌಂಟ್ ಲೋಟ್ಸೆಯನ್ನು ಏರಿದರು ಮತ್ತು ಒಂದೇ ಋತುವಿನಲ್ಲಿ 8000 ಮೀಟರ್ ಹಾಗೂ ಅದಕ್ಕಿಂತಲೂ ಎತ್ತರದ 4 ಶಿಖರಗಳನ್ನು ಏರಿದ ಮೊದಲ ಭಾರತೀಯ ಆರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಈ ಮಧ್ಯೆ, ಭಾರತೀಯ ಪರ್ವತಾರೋಹಿ ಅರ್ಜುನ್ ವಾಜಪೇಯಿ ಅವರನ್ನು ಸಹ 6,800 ಮೀಟರ್‌ಗಳಿಂದ ರಕ್ಷಿಸಲಾಗಿದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್‌ನ ಎಕ್ಸ್‌ಪೆಡಿಶನ್ ನಿರ್ದೇಶಕ ಚಾವಾಂಗ್ ದಾವಾ ಶೆರ್ಪಾ ಹೇಳಿದ್ದಾರೆ. "ಅವರಿಗೆ ಗಾಯಗಳಾಗಿವೆ" ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಯುಬ್ರಾಜ್ ಖತಿವಾಡ ಅವರು ಕಠ್ಮಂಡು ಪೋಸ್ಟ್ ಪತ್ರಿಕೆಯಲ್ಲಿ ಹೇಳಿದ್ದಾರೆ. 29 ವರ್ಷದ ವಾಜಪೇಯಿ ಅವರನ್ನು ವಿಮಾನದಲ್ಲಿ ಕಠ್ಮಂಡುವಿಗೆ ಸಾಗಿಸಿದ ನಂತರ ಹ್ಯಾಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: RSS ದಸರಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ಮುಖ್ಯ ಅತಿಥಿಯಾದ ಮಹಿಳೆ
ಇವರು, 2010 ರಲ್ಲಿ ಮೌಂಟ್ ಎವರೆಸ್ಟ್ ಮತ್ತು ಮೇ 2011 ರಲ್ಲಿ ಮೌಂಟ್ ಲೋಟ್ಸೆ ಎಂಬ 8000 ಮೀಟರ್‌ಗೂ ಹೆಚ್ಚು ಎತ್ತರದ 2 ಶಿಖರಗಳನ್ನು ಏರಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದು, 2022 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನೂ ಪಡೆದರು. ವಾಜಪೇಯಿ ಅವರು ಈಗಾಗಲೇ ಮೌಂಟ್ ಎವರೆಸ್ಟ್, ಲೋಟ್ಸೆ, ಮೌಂಟ್ ಮಕಾಲು, ಕಾಂಚನಜುಂಗಾ, ಮೌಂಟ್ ಮನಸ್ಲು ಮತ್ತು ಚೋ-ಓಯು ಪರ್ವತಾರೋಹಣ ಮಾಡಿದ್ದು, ಹಲವಾರು ವಿಶ್ವ ದಾಖಲೆಗಳು ಈಗಾಗಲೇ ಅವರ ಹೆಸರಿನಲ್ಲಿವೆ. ಸೋಮವಾರ, ರಾಜಸ್ಥಾನದ ಕಿಶನ್‌ಗಡ್‌ನ ನಿವಾಸಿ ಅನುರಾಗ್ ಮಾಲು, ಅನ್ನಪೂರ್ಣ ಮೌಂಟ್ ಕ್ಯಾಂಪ್ 3 ನಿಂದ ಇಳಿಯುವಾಗ ನಾಪತ್ತೆಯಾಗಿದ್ದರು.
ಅನ್ನಪೂರ್ಣ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದ್ದು, ಸಮುದ್ರ ಮಟ್ಟದಿಂದ 8,091 ಮೀಟರ್ ಎತ್ತರದಲ್ಲಿದೆ. ಪರ್ವತಾರೋಹಿಗಳಿಗೆ ಇದು ತೊಂದರೆ ಮತ್ತು ಅಪಾಯಕ್ಕೆ ಹೆಸರುವಾಸಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ