
ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಜಮ್ಮುಕಾಶ್ಮೀರದ ಕರ್ನಾಟಕದ ಕರಾವಳಿ ಮಲೆನಾಡು ಸೇರಿದಂತ ದೇಶದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಜಮ್ಮುಕಾಶ್ಮೀರದ ಕಥುವಾದಲ್ಲಿ ಸಂಭವಿಸಿದ ಮೇಘ ಸ್ಫೋಟ ಹಾಗೂ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಒಂದೇ ಕುಟುಂಬದ ನಾಲ್ವರು ಸೇರಿ 7ಜನ ಮೃತಪಟ್ಟಿದ್ದಾರೆ. ಇಲ್ಲೆಲ್ಲಾ ಸೇನೆ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಹಲವು ಕಡೆಗಳಲ್ಲಿ ರಸ್ತೆಗಳೇ ಕೊಚ್ಚಿ ಹೋಗಿದ್ದು, ಯೋಧರು ಪರಿಹಾರ ಕಾರ್ಯ ಸುಗಮವಾಗಿ ನಡೆಯಲು ವೇಗವಾಗಿ ಸೇತುವೆ ನಿರ್ಮಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಸೇನೆಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್:
ಕಿಶ್ತ್ವಾರ್‌ನ ಚಿಸೋಟಿ ಗ್ರಾಮದ ವೀಡಿಯೋ ಇದಾಗಿದೆ. ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು ಅಲ್ಲಿನ, ನಾಗರಿಕ ಸಂಸ್ಥೆಗಳ ಸಮನ್ವಯದೊಂದಿಗೆ ಸಂಪರ್ಕವನ್ನು ಪುನಃಸ್ಥಾಪಿಸಲು ಮತ್ತು ಜನರ ಸ್ಥಳಾಂತರಿವನ್ನು ವೇಗವಾಗಿ ನಡೆಸಲು ಎಂಜಿನಿಯರ್ ತಂಡಗಳು ಚಿಸೋಟಿ ನಾಲಾ ಮೇಲೆ ಸೇತುವೆಯನ್ನು ನಿರ್ಮಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಮೇಘ ಸ್ಫೋಟದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಕಥುವಾದಲ್ಲಿ ಸಂಭವಿಸಿದ ಮಳೆ ಅನಾಹುತದಲ್ಲಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಅನಾಹುತದಲ್ಲಿ ಬದುಕುಳಿದ ಮಕ್ಕಳು, ವಯಸ್ಕರು ವೃದ್ಧರನ್ನು ಭಾರತೀಯ ಸೇನೆಯ ಯೋಧರು ಕಡಿದಾದ ಪ್ರದೇಶದಲ್ಲಿ ಎತ್ತಿಕೊಂಡು ಹೋಗಿ ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮನೆ: ದೆಹಲಿಯಲ್ಲಿ ಪ್ರವಾಹ ಭೀತಿ:
ಹಾಗೆಯೇ ದೆಹಲಿಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನೀರು ತುಂಬಿದ ರಸ್ತೆಗಳಲ್ಲೇ ವಾಹನ ಸವಾರರು ಓಡಾಡುತ್ತಿರುವ ದೃಶ್ಯ ವೈರಲ್ ಆಗಿದೆ. ತೊಡೆಯಷ್ಟು ನೀರು ತುಂಬಿರುವ ರಸ್ತೆಯಲ್ಲೇ ಬ್ಲಿಂಕಿಟ್ ಡೆಲಿವರಿ ಬಾಯ್ ಒಬ್ಬ ಪ್ರಾಣದ ಹಂಗು ತೊರೆದು ನಡೆದುಕೊಂಡು ಬಂದು ಡೆಲಿವರಿ ನೀಡ್ತಿರುವ ದೃಶ್ಯ ಸೆರೆಯಾಗಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ 205.33 ಮೀಟರ್ ದಾಟಿ ಹರಿಯುತ್ತಿದ್ದು, ಆಗಸ್ಟ್ 19 ರ ವೇಳೆಗೆ 206 ಮೀಟರ್ ತಲುಪುವ ನಿರೀಕ್ಷೆಯಿದೆ. ಭಾರೀ ಮಳೆ ಮತ್ತು ಮೇಲ್ಭಾಗದ ಬ್ಯಾರೇಜ್‌ಗಳಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಿಂದಾಗಿ ಅಧಿಕಾರಿಗಳು ರಕ್ಷಣಾ ತಂಡಕ್ಕೆ ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಜಲ ಆಯೋಗದ (CWC)ಪ್ರಕಾರ, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಹಳೆ ರೈಲ್ವೆ ಸೇತುವೆಯಲ್ಲಿ ನದಿಯ ನೀರಿನ ಮಟ್ಟ 204.60 ಮೀಟರ್ ತಲುಪಿದ್ದು, ಎಚ್ಚರಿಕೆಯ ಮಟ್ಟ 204.50 ಮೀಟರ್ ದಾಟಿದೆ. ಅಪಾಯದ ಗುರುತು 205.33 ಮೀಟರ್ ಆಗಿದ್ದು, ನೀರಿನ ಮಟ್ಟ 206 ಮೀಟರ್ ದಾಟಿದ ನಂತರ ಸ್ಥಳಾಂತರಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆಗಸ್ಟ್ 17 ರಂದು ಹತ್ನಿಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರಿನ ಪ್ರಮಾಣ ಮತ್ತು ಮೇಲಿನ ಯಮುನಾ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ದೆಹಲಿ ರೈಲ್ವೆ ಸೇತುವೆಯ ನೀರಿನ ಮಟ್ಟವು ಆಗಸ್ಟ್ 19, 2025 ರಂದು ಬೆಳಗ್ಗೆ 02 ಗಂಟೆಯ ಸುಮಾರಿಗೆ 206.00 ದಾಟಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರಗಳ ಕಾಲ ಮುಂದುವರೆಯಲಿರುವ ಮಳೆ:
ಮುಂಬರುವ ದಿನಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ