ನೀಲಂ ಕಣಿವೆ ಮೇಲೆ ಭಾರತ ದಾಳಿ, ಪಿಒಕೆ ಉಗ್ರ ಶಿಬಿರ ಧ್ವಂಸ!

By Suvarna NewsFirst Published Dec 22, 2019, 8:35 AM IST
Highlights

ಪಿಒಕೆ ಉಗ್ರ ಶಿಬಿರ ಧ್ವಂಸ| ನೀಲಂ ಕಣಿವೆ ಮೇಲೆ ಭಾರತ ದಾಳಿ| ಹಲವು ಉಗ್ರರು ಸಾವನ್ನಪ್ಪಿರುವ ಶಂಕೆ

ನವದೆಹಲಿ[ಡಿ.22]: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನೀಲಂ ಕಣಿವೆಯಲ್ಲಿನ ಭಯೋತ್ಪಾದಕ ಶಿಬಿರವೊಂದನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರ ಶಿಬಿರ ಎನ್ನಲಾದ ಸ್ಥಳವು ದಾಳಿಯಿಂದಾಗಿ ಹೊತ್ತಿ ಉರಿಯುತ್ತಿರುವ ಚಿತ್ರಗಳೂ ಲಭಿಸಿವೆ.

ಪಾಕಿಸ್ತಾನವು ಶನಿವಾರ ಮಧ್ಯಾಹ್ನ ಗುರೇಜ್‌ ಸೆಕ್ಟರ್‌ನಲ್ಲಿ ಕದನವಿರಾಮ ಉಲ್ಲಂಘಿಸಿತ್ತು. ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿತು. ಆಗ ಉಗ್ರ ಶಿಬಿರವೊಂದನ್ನು ಸೇನೆಯು ಪತ್ತೆ ಮಾಡಿತ್ತು. ಈ ಶಿಬಿರವನ್ನು ಗಡಿ ನಿಯಂತ್ರಣ ರೇಖೆಯ ಸಮೀಪವೇ ಸ್ಥಾಪಿಸಿ ಉಗ್ರರನ್ನು ಭಾರತದ ಒಳಗೆ ನುಸುಳಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿತ್ತು. ಆದರೆ ಭಾರತದ ಸೇನೆಯು ಆ ಶಿಬಿರವನ್ನು ದಾಳಿಯಲ್ಲಿ ಧ್ವಂಸಗೊಳಿಸಿತು ಎಂದು ಮೂಲಗಳನ್ನು ಉಲ್ಲೇಖಿಸಿ ‘ರಿಪಬ್ಲಿಕ್‌ ಟೀವಿ’ ವರದಿ ಮಾಡಿದೆ.

ಇದೇ ವೇಳೆ, ಗಾಯಾಳುಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳನ್ನು ಆಕ್ರಮಿತ ಕಾಶ್ಮೀರದಲ್ಲಿ ನೋಡಿದ್ದಾಗಿಯೂ ಮೂಲಗಳು ಹೇಳಿವೆ.

ಗಡಿ ದಾಟಿಲ್ಲ ದಾಳಿ ಮಾಡಿಲ್ಲ- ಸೇನೆ:

ಈ ನಡುವೆ, ‘ಗಡಿ ನಿಯಂತ್ರಣ ರೇಖೆಯನ್ನು ತೆರೆದು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತ ಸೇನೆಯು ಅಲ್ಲಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಸುಳ್ಳು. ಪಾಕಿಸ್ತಾನವು ಈ ರೀತಿ ಸುಳ್ಳು ಸುದ್ದಿ ಹರಡಿಸುತ್ತಿದೆ’ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿವೆ.

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!