ಭಾರತ ಜೊತೆ ತಾಲಿಬಾನ್ ಪ್ರತಿನಿಧಿಗಳ ಸಭೆ; ಭಯೋತ್ಪಾದನೆ ಇಲ್ಲ, ಶಾಂತಿ ಮಂತ್ರದ ಭರವಸೆ!

By Suvarna NewsFirst Published Aug 31, 2021, 7:05 PM IST
Highlights
  • ತಾಲಿಬಾನ್ ಮನವಿ ಮೇರೆಗೆ ಪ್ರತಿನಿಧಿಗಳ ಜೊತೆ ಭಾರತ ಸಭೆ
  • ದೋಹಾದ ತಾಲಿಬಾನ್ ರಾಜಕೀಯ ಕಚೇರಿಯಲ್ಲಿ ಮಹತ್ವದ ಸಭೆ
  • ಭಾರತದ ವಿರುದ್ಧ ಭಯೋತ್ಪಾದನೆ, ಭಾರತ ವಿರೋಧಿ ಚಟುವಟಿ ಇಲ್ಲ
  • ಭಾರತದ ಕಾಳಜಿಯನ್ನು ಪರಿಹರಿಸುವ ಭರವಸೆ ನೀಡಿದ ತಾಲಿಬಾನ್

ದೋಹಾ(ಆ.31): ಆಫ್ಘಾನಿಸ್ತಾನ ಇದೀಗ ಸಂಪೂರ್ಣ ತಾಲಿಬಾನ್ ಕೈವಶವಾಗಿದೆ. ಅಮೆರಿಕ ಮಿಲಿಟರಿ ಸೈನ್ಯ ಕಾಲ್ಕಿತ್ತ ಬೆನ್ನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಕೂಡ ತಾಲಿಬಾನ್ ಹಿಡಿತದಲ್ಲಿದೆ. ಈ ಘಟನೆ ಬೆನ್ನಲ್ಲೇ ತಾಲಿಬಾನ್ ಮನವಿ ಮೇರೆಗೆ ಭಾರತ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರವಾದ, ಭಾರತ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದೆ.

ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

ಖತಾರ್‌ನ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮನವಿ ಮೇರೆಗೆ ಭಾರತದ ಖತಾರ್ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ದೀಪಕ್ ಮಿತ್ತಲ್ ಹಲವು ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ. ಭಾರತದ ಎಲ್ಲಾ ಕಾಳಜಿಯನ್ನು ಸೂಕ್ತವಾಗಿ ಪರಿಹರಿಸುವ ಭರವಸೆಯನ್ನು ತಾಲಿಬಾನ್ ಪ್ರತಿನಿಧಿಗಳು ನೀಡಿದ್ದಾರೆ.

ತಾಲಿಬಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಹಾಗೂ ಭಾರತಕ್ಕೆ ಆಗಮಿಸಲು ಇಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಸ್ಥಳಾಂತರ ಕುರಿತು ದೋಹಾ ಕಚೇರಿಯಲ್ಲಿ ಚರ್ಚಿಸಲಾಯಿತು. ಈ ಮಾತುಕತೆಯಲ್ಲಿ ಆಫ್ಘಾನಿಸ್ತಾನ ನೆಲವನ್ನು ಯಾವುದೇ ಕಾರಣಕ್ಕೂ ಭಾರತ ವಿರೋಧಿ ಚಟುವಟಿಕೆ, ಭಾರತ ವಿರುದ್ದ ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ದೀಪಕ್ ಮಿತ್ತಲ್ ತಾಲಿಬಾನ್‌ಗಳಿಗೆ ಸೂಚನೆ ನೀಡಿದ್ದಾರೆ.

ಕಾಬೂಲ್‌ ಏರ್‌ಪೋರ್ಟ್‌ ಮೇಲೆ ಮತ್ತೆ ರಾಕೆಟ್‌ ದಾಳಿ ಯತ್ನ: ವಿಫಲಗೊಳಿಸಿದ ಅಮೆರಿಕ ಪಡೆ!

ಭಾರತದ ರಾಯಭಾರಿ ದೀಪಕ್ ಮಿತ್ತಲ್ ಎತ್ತಿದ ಹಲವು ಕಾಳಜಿ ಹಾಗೂ ಸೂಚನೆಗಳನ್ನು ಸೂಕ್ತವಾಗಿ ಪರಿಹರಿಸುವುದಾಗಿ ತಾಲಿಬಾನ್‌ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಭಾರತದ ಜೊತೆ ಸೌಹಾರ್ಧಯುತ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.

ಆಗಸ್ಟ್ 30ರೊಳಗೆ ಅಮೆರಿಕ ಮಿಲಿಟರಿ ಸೇನೆ ಆಫ್ಘಾನಿಸ್ತಾನದಿಂದ ಹಿಂತಿರುಗಬೇಕು ಎಂದು ತಾಲಿಬಾನ್ ಗಡುವು ನೀಡಿತ್ತು. ಇದರಂತೆ ಅಮೆರಿಕ ಸಂಪೂರ್ಣವಾಗಿ ಆಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡಿದೆ. ಆಗಸ್ಟ್ 31ಕ್ಕೆ ಕಾಬೂಲ್ ವಿಮಾನ ನಿಲ್ದಾಣವೂ ತಾಲಿಬಾನ್ ಕೈವಶವಾಗಿದೆ.

click me!