ಪಾಕ್‌ ನೆಲದಲ್ಲಿನ ಉಗ್ರರ ಹತ್ತಿಕ್ಕಲು ಭಾರತ-ಅಮೆರಿಕ ಪಣ

By Kannadaprabha NewsFirst Published Feb 26, 2020, 10:26 AM IST
Highlights

ಪಾಕ್‌ ನೆಲದಲ್ಲಿನ ಉಗ್ರರ ಹತ್ತಿಕ್ಕಲು ಭಾರತ-ಅಮೆರಿಕ ಪಣ |  ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿಸಲು ನಿರ್ಧಾರ | 3 ಶತಕೋಟಿ ಡಾಲರ್‌ ಮೌಲ್ಯದ ಸೇನಾ ಹೆಲಿಕಾಪ್ಟರ್‌ ಖರೀದಿಗೆ ಭಾರತ ಸಮ್ಮತಿ | ದ್ವಿಪಕ್ಷೀಯ ಮಾತುಕತೆ ಬಳಿಕ ಮೋದಿ-ಟ್ರಂಪ್‌ ಜಂಟಿ ಹೇಳಿಕೆ ಬಿಡುಗಡೆ

ನವದೆಹಲಿ (ಫೆ. 26): ಭಾರತ ಹಾಗೂ ಅಮೆರಿಕಗಳು ಮಹತ್ವದ ವ್ಯಾಪಾರ ಒಪ್ಪಂದ ವಿಚಾರದಲ್ಲಿ ಮುಂದಡಿ ಇಡಲು ತೀರ್ಮಾನಿಸಿವೆ. ಈ ಕುರಿತ ಮಾತುಕತೆಯನ್ನು ಆರಂಭಿಸಲಾಗಿದ್ದು, ಧನಾತ್ಮಕ ಫಲಿತಾಂಶ ನೀಡುವ ವಿಶ್ವಾಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪಾಕಿಸ್ತಾನಿ ನೆಲದಲ್ಲಿನ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಉಭಯ ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ಅಮೆರಿಕದಿಂದ 3 ಶತಕೋಟಿ ಡಾಲರ್‌ ಮೌಲ್ಯದ ಅತ್ಯಾಧುನಿಕ ಸೇನಾ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತ ಮುಂದಾಗಿರುವುದು ಮಹತ್ವದ ನಿರ್ಧಾರವಾಗಿದೆ ಎಂದು ಉಭಯ ನಾಯಕರು ಹೇಳಿದ್ದಾರೆ.

ಮಕ್ಕಳೊಂದಿಗೆ ಮಗುವಾದ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್!

ಮಂಗಳವಾರ ಮಧ್ಯಾಹ್ನ ಹೈದರಾಬಾದ್‌ ಹೌಸ್‌ನಲ್ಲಿ ಮೋದಿ ಹಾಗೂ ಟ್ರಂಪ್‌ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರಕ್ಕೆ ಬರಲಾಯಿತು ಹಾಗೂ ಭಾರತದಲ್ಲಿ ವಿರೋಧಕ್ಕೆ ಕಾರಣವಾಗಿರುವ ವ್ಯಾಪಾರ ಒಪ್ಪಂದದ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಲಾಯಿತು. ಬಳಿಕ ಈ ಇಬ್ಬರೂ ನಾಯಕರು ಜಂಟಿ ಹೇಳಿಕೆ ನೀಡಿದರು.

ಮೋದಿ ಹೇಳಿದ್ದೇನು?

ಭಯೋತ್ಪಾದನೆ:

ಅಮೆರಿಕ-ಭಾರತ ಜಂಟಿ ಸಹಕಾರದಿಂದ ಆಂತರಿಕ ಭದ್ರತೆ ಮತ್ತಷ್ಟುಬಲಗೊಳ್ಳಲಿದೆ. ಭಯೋತ್ಪಾದನೆಯ ಸೃಷ್ಟಿಕರ್ತರನ್ನು ಮಟ್ಟಹಾಕುವ ನಿರ್ಧಾರಕ್ಕೆ ಬಂದಿದ್ದೇವೆ.

ರಕ್ಷಣೆ:

ಸೇನಾ ಸಹಭಾಗಿತ್ವದ ಪ್ರತಿ ವಿಷಯವನ್ನೂ ಚರ್ಚಿಸಿದೆವು. ರಕ್ಷಣಾ ಸಹಭಾಗಿತ್ವ ಬಲಗೊಳ್ಳಲಿದ್ದು, ಇದು ನಮ್ಮ ಭಾಗೀದಾರಿಕೆಯ ಮಹತ್ವದ ವಿಚಾರ.

ದ್ವಿಪಕ್ಷೀಯ ವ್ಯಾಪಾರ:

ನಮ್ಮ ವ್ಯಾಪಾರ 3 ವರ್ಷದಲ್ಲಿ ಎರಡಂಕಿ ಪ್ರಗತಿ ಕಂಡಿದೆ. ಇದೇ ವೇಳೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವತ್ತ ನಾವು ಮಾತುಕತೆ ಆರಂಭಿಸಿದ್ದೇವೆ. ಇದು ಇಬ್ಬರಿಗೂ ಲಾಭವಾಗುವಂತೆ ಧನಾತ್ಮಕ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸವಿದೆ.

ಭಾರತಕ್ಕೆ ಅಮೆರಿಕಾ ಅಧ್ಯಕ್ಷರ ಗಿಫ್ಟ್: ಮೂರು ಪ್ರಮುಖ ಒಪ್ಪಂದಕ್ಕೆ ಸಹಿ!

ಭಾರತೀಯರ ಮಿಂಚು:

ತಾಂತ್ರಿಕ ಕ್ಷೇತ್ರದಲ್ಲಿ ಎರಡೂ ದೇಶಗಳ ಉತ್ತಮ ಪಾಲುದಾರಿಕೆ ಇದೆ. ಅಮೆರಿಕ ಕಂಪನಿಗಳಲ್ಲಿ ಇಂದು ಭಾರತೀಯ ವೃತ್ತಿಪರರು ಉನ್ನತ ಸ್ಥಾನ ಅಲಂಕರಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ವ್ಯಾಪಾರ:

ನಮ್ಮ ತಂಡಗಳು ಸಮಗ್ರ ವ್ಯಾಪಾರ ಒಪ್ಪಂದದತ್ತ ಮಹತ್ವದ ಪ್ರಗತಿ ಸಾಧಿಸಿವೆ. ಉಭಯ ದೇಶಗಳಿಗೆ ಮಹತ್ವದ್ದಾದ ಈ ಒಪ್ಪಂದ ಕಾರ್ಯಗತಗೊಳ್ಳಲಿದೆ ಎಂಬ ವಿಶ್ವಾಸ ನನ್ನದು. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತಕ್ಕೆ ಅಮೆರಿಕದ ರಫ್ತು ಶೇ.60ರಷ್ಟುಏರಿದೆ. ಅಮೆರಿಕ ಇಂಧನ ರಫ್ತು ಶೇ.500ರಷ್ಟುಏರಿದೆ.

ರಕ್ಷಣೆ:

ರಕ್ಷಣಾ ಸಹಕಾರವನ್ನು ನಾವು ವಿಸ್ತರಿಸಿದ್ದೇವೆ. ಭಾರತವು ಅಮೆರಿಕದಿಂದ 3 ಶತಕೋಟಿ ಡಾಲರ್‌ ಮೌಲ್ಯದ ಸೇನಾ ಹೆಲಿಕಾಪ್ಟರ್‌ ಖರೀದಿಸಲು ನಿರ್ಧರಿಸಿದೆ. ಇದರಲ್ಲಿ ಅಪಾಚೆ ಹಾಗೂ ವಿಶ್ವದ ಅತ್ಯಾಧುನಿಕ ರೆಮ್ಕೊ ಹೆಲಿಕಾಪ್ಟರ್‌ಗಳೂ ಸೇರಿವೆ. ಇದರಿಂದ ನಮ್ಮ ರಕ್ಷಣಾ ಸಾಮರ್ಥ್ಯ ಹೆಚ್ಚಲಿದೆ.

ಇಸ್ಲಾಮಿಕ್‌ ಉಗ್ರವಾದ:

ಇಸ್ಲಾಮಿಕ್‌ ಭಯೋತ್ಪಾದನೆ ನಿಗ್ರಹದಲ್ಲಿ ಪರಸ್ಪರರು ಸಹಕಾರ ಅನುಸರಿಸಿ ನಮ್ಮ ನಮ್ಮ ನಾಗರಿಕರನ್ನು ರಕ್ಷಿಸಲು ನಿರ್ಧರಿಸಿದ್ದೇವೆ. ಪಾಕಿಸ್ತಾನಿ ನೆಲದಲ್ಲಿನ ಭಯೋತ್ಪಾದಕ ಚಟುವಟಿಕೆಗಳನ್ನು ಕಿತ್ತೆಸೆಯಲು ತೀರ್ಮಾನಿಸಿದ್ದೇವೆ.

5 ಜಿ ನೆಟ್‌ವರ್ಕ್:

5ಜಿ ವೈರ್‌ಲೆಸ್‌ ಜಾಲದ ತಂತ್ರಜ್ಞಾನದ ಬಗ್ಗೆ ಚರ್ಚಿಸಿದೆವು. ಇದು ಉದಯೋನ್ಮುಖ ತಂತ್ರಜ್ಞಾನವಾಗಿದ್ದು, ಪ್ರಗತಿ, ಸಮೃದ್ಧಿ, ಸ್ವಾತಂತ್ರ್ಯದ ಸಂಕೇತ.

 

click me!