ಅಕ್ರಮ ಸಂಬಂಧಕ್ಕೆ ಮತ್ತೆ ಜೈಲು ಶಿಕ್ಷೆ? ಸಲಿಂಗ ರೇಪ್‌ಗೂ ಶಿಕ್ಷೆ ತಪ್ಪಲ್ಲ!

By Kannadaprabha News  |  First Published Oct 28, 2023, 7:54 AM IST

ಸಂಸದೀಯ ಸಮಿತಿ ವ್ಯಭಿಚಾರವನ್ನು ಮತ್ತೆ ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ‘ವೈವಾಹಿಕ ಸಂಬಂಧವನ್ನು ಕಾಪಾಡಲು ಇಂಥ ಬದಲಾವಣೆ ಅಗತ್ಯ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.


ನವದೆಹಲಿ (ಅಕ್ಟೋಬರ್ 28, 2023): ವ್ಯಭಿಚಾರ (ಅಕ್ರಮ ಸಂಬಂಧ) ಮತ್ತು ಸಮ್ಮತವಲ್ಲದ ಸಲಿಂಗಕಾಮ ಕ್ರಿಮಿನಲ್‌ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶಗಳನ್ನು ‘ತಿರಸ್ಕರಿಸಿ’, ಈ ಎರಡೂ ನಡವಳಿಕೆಗಳನ್ನು ಮತ್ತೆ ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವಂತೆ ಸಂಸತ್ತಿನ ಸ್ಥಾಯಿ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ವಸಾಹತುಶಾಹಿ ಕಾನೂನುಗಳನ್ನು ಬದಲಾವಣೆ ಮಾಡಿ ಬದಲಾದ ಕಾಲಕ್ಕೆ ತಕ್ಕಂತೆ ಹೊಸ ಕಾನೂನು ರೂಪಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು ‘ಇಂಡಿಯನ್‌ ಪೀನಲ್‌ ಕೋಡ್‌’ (ಭಾರತೀಯ ದಂಡ ಸಂಹಿತೆ) ಬದಲಿಗೆ ‘ಭಾರತೀಯ ನ್ಯಾಯ ಸಂಹಿತೆ’, ‘ಕ್ರಿಮಿನಲ್‌ ಅಪರಾಧ ಸಂಹಿತೆ’ ಬದಲಾಗಿ ‘ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಕಾಯ್ದೆ’ ಬದಲಿಗೆ ‘ಭಾರತೀಯ ಸಾಕ್ಷ್ಯ ಅಧಿನಿಯಮ’ ರೂಪಿಸುವ ಮಸೂದೆಗಳನ್ನು ಕೆಲ ತಿಂಗಳ ಹಿಂದೆ ಸಂಸತ್ತಿನಲ್ಲಿ ಮಂಡಿಸಿತ್ತು. ಬಳಿಕ ಈ ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಗೃಹ ವ್ಯವಹಾರಗಳ ಕುರಿತಾದ ಸ್ಥಾಯಿ ಸಮಿತಿಗೆ ವರ್ಗಾಯಿಸಲಾಗಿತ್ತು.

Latest Videos

undefined

ಇದನ್ನು ಓದಿ: ಐಪಿಸಿ, ಸಿಆರ್‌ಪಿಸಿಗೆ ಮುಕ್ತಿ; ಶೀಘ್ರದಲ್ಲೇ ನೂತನ ಮಸೂದೆಗಳಿಗೆ ಸಂಸತ್‌ ಅನುಮೋದನೆ: ಅಮಿತ್ ಶಾ

ಬಿಜೆಪಿ ಸಂಸದ ಬ್ರಿಜ್‌ ಲಾಲ್‌ ನೇತೃತ್ವದ ಸ್ಥಾಯಿ ಸಮಿತಿ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದು, ಅದರಲ್ಲಿ ವ್ಯಭಿಚಾರ, ಸಲಿಂಗಕಾಮ ಸೇರಿದಂತೆ ಹಲವು ವಿಷಯಗಳ ಕುರಿತ ಗಹನವಾದ ಚರ್ಚೆ ನಡೆಸಿದೆ ಎನ್ನಲಾಗಿದೆ. ಶುಕ್ರವಾರವೂ ಸಮಿತಿ ಸಭೆ ನಡೆಸಿತಾದರೂ, ವಿಪಕ್ಷಗಳು ಕೆಲವು ಆಕ್ಷೇಪಗಳನ್ನು ಸಲ್ಲಿಸಿದ ಕಾರಣ ಮಸೂದೆಗಳಿಗೆ ಅನುಮೋದನೆ ನೀಡಲು ಆಗಲಿಲ್ಲ. ಹೀಗಾಗಿ ನ.6ಕ್ಕೆ ಮುಂದಿನ ಸಭೆ ನಿಗದಿಯಾಗಿದೆ.

ವ್ಯಭಿಚಾರಕ್ಕೆ ಮತ್ತೆ ಶಿಕ್ಷೆ?:
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು 2018ರಲ್ಲಿ ನೀಡಿದ್ದ ತನ್ನ ತೀರ್ಪಿನಲ್ಲಿ ವ್ಯಭಿಚಾರವು (ಅಕ್ರಮ ಸಂಬಂಧ) ಕ್ರಿಮಿನಲ್‌ ಅಪರಾಧ ಅಲ್ಲ ಎಂದು ಹೇಳಿತ್ತು. ‘ಇದೊಂದು ಸಿವಿಲ್‌ ಅಪರಾಧ, ಅದು ಡೈವೋರ್ಸ್‌ಗೆ ಕಾರಣವಾಗಬಹುದೇ ಹೊರತೂ ಕ್ರಿಮಿನಲ್‌ ಅಪರಾಧವಾಗದು’ ಎಂದಿತ್ತು. ‘ಈ ಕುರಿತಾದ 163 ವರ್ಷಗಳ ಹಳೆ ಕಾಯ್ದೆ ಪತಿಯನ್ನು ಪತ್ನಿಯ ಯಜಮಾನನ ರೀತಿಯಲ್ಲಿ ಪರಿಗಣಿಸುತ್ತದೆ’ ಎಂದು ಕಿಡಿಕಾರಿತ್ತು.

ಇದನ್ನು ಓದಿ: ಇನ್ಮೇಲೆ 420 ಅಂತ ಸುಮ್ನೆ ಯಾರನ್ನೂ ಅಪಹಾಸ್ಯ ಮಾಡ್ಬೇಡಿ: ಬದಲಾಗ್ತಿದೆ ಐಪಿಸಿ ಸೆಕ್ಷನ್ 420 ಕಾನೂನು!

ಆದರೆ ಸಂಸದೀಯ ಸಮಿತಿ ವ್ಯಭಿಚಾರವನ್ನು ಮತ್ತೆ ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ‘ವೈವಾಹಿಕ ಸಂಬಂಧವನ್ನು ಕಾಪಾಡಲು ಇಂಥ ಬದಲಾವಣೆ ಅಗತ್ಯ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ಕುರಿತ ಕಾಯ್ದೆಯಲ್ಲಿ ಪುರುಷನೊಬ್ಬ ಪರಸ್ತ್ರೀ ಜೊತೆ ಅಕ್ರಮ ಸಂಬಂಧ ಬೆಳೆಸಿದರೆ ಆತನಿಗೆ 5 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಮಹಿಳೆಗೆ ಯಾವುದೇ ಶಿಕ್ಷೆ ಇಲ್ಲ. ಹೀಗಾಗಿ ಕಾಯ್ದೆಯನ್ನು ಲಿಂಗ ತಾರತಮ್ಯರಹಿತ ಮಾಡಿ, ಪುರುಷ ಮತ್ತು ಮಹಿಳೆ ಇಬ್ಬರನ್ನೂ ಕ್ರಿಮಿನಲ್‌ ಅಪರಾಧಿಗಳೆಂದು ಪರಿಗಣಿಸುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಸಲಿಂಗ ಕಾಮ:
ಇನ್ನು ಸಲಿಂಗಕಾಮ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವ ಸಂವಿಧಾನದ 377ನೇ ವಿಧಿಯನ್ನು 5 ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಆದರೆ ಸಮ್ಮತವಲ್ಲದ ಸಲಿಂಗ ಕಾಮ ಸಂವಿಧಾನದ 377ನೇ ವಿಧಿ ಅನ್ವಯ ಅಪರಾಧವಾದ ಕಾರಣ, 377ನೇ ವಿಧಿಯನ್ನು ಮರು ಸೇರ್ಪಡೆ ಮಾಡಬೇಕು ಎಂದು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

ಇತರೆ ಶಿಫಾರಸು:
ಇನ್ನು ನಿರ್ಲಕ್ಷ್ಯದಿಂದ ಸಂಭವಿಸುವ ಸಾವಿನ ಪ್ರಕರಣದಲ್ಲಿ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಹಾಲಿ ಇರುವ 6 ತಿಂಗಳಿನಿಂದ 5 ವರ್ಷಕ್ಕೆ ಏರಿಸುವ, ಅನಧಿಕೃತ ಪ್ರತಿಭಟನೆಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸುವ ಮತ್ತು ಇಂಡಿಯನ್‌ ಪೀನಲ್‌ ಕೋಡ್‌ ಹೆಸರನ್ನು ಉಳಿಸಿಕೊಳ್ಳುವ ಕುರಿತು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

click me!