2023ರಲ್ಲಿ ಚೀನಾ ಹಿಂದಿಕ್ಕಿ ನಂ. 1 ಜನಸಂಖ್ಯಾ ದೇಶವಾಗಲಿದೆ ಭಾರತ..!

By Kannadaprabha News  |  First Published Nov 16, 2022, 11:45 AM IST

2023ಕ್ಕೆ ಭಾರತ ನಂ.1 ಜನಸಂಖ್ಯೆಯ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ವಿಶ್ವದ ಜನಸಂಖ್ಯೆ ಸದ್ದಿಲ್ಲದಂತೆ 800 ಕೋಟಿ ಮೈಲಿಗಲ್ಲು ದಾಟಿದ್ದು, 2ನೇ ಸ್ಥಾನದಲ್ಲಿರುವ ಭಾರತ ಮುಂದಿನ ವರ್ಷ ಮೊದಲ ಸ್ಥಾನಕ್ಕೆ ಏರಲಿದೆ ಎಂದು ಹೇಳಲಾಗಿದೆ. 


ವಿಶ್ವಸಂಸ್ಥೆ: ವಿಶ್ವದ ಜನಸಂಖ್ಯೆ (World Population) ಮಂಗಳವಾರ ಸದ್ದಿಲ್ಲದಂತೆ 800 ಕೋಟಿ (800 Crore) ತಲುಪಿದೆ. ಈ ಮೂಲಕ ಕಳೆದ 12 ವರ್ಷದಲ್ಲಿ 100 ಕೋಟಿ ಜನರು ಈ ಪ್ರಪಂಚಕ್ಕೆ ಸೇರ್ಪಡೆ ಆದಂತಾಗಿದ್ದು, ಜನಸಂಖ್ಯಾ ವಿಷಯದಲ್ಲಿ ಮತ್ತೊಂದು ಮೈಲಿಗಲ್ಲನ್ನು ದಾಟಿದಂತಾಗಿದೆ. ಜನಸಂಖ್ಯೆ 800 ಕೋಟಿ ತಲುಪಿದ ವಿಷಯ ಪ್ರಕಟಿಸಿದ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (United Nations Population Fund) (ಯುಎನ್‌ಎಫ್‌ಪಿಎ) (UNFPA) ವಿಭಾಗ, ‘800 ಕೋಟಿ ಭರವಸೆಗಳು. 800 ಕೋಟಿ ಕನಸುಗಳು. 800 ಕೋಟಿ ಸಾಧ್ಯತೆಗಳು. ನಮ್ಮ ಗ್ರಹ ಈಗ 800 ಕೋಟಿ ಜನರ ಮನೆ’ ಎಂದು ಬಣ್ಣಿಸಿದೆ.

ಇದೇ ವೇಳೆ ವಿಶ್ವದ ಜನಸಂಖ್ಯೆ 800 ಕೋಟಿ ತಲುಪುವಲ್ಲಿ ಭಾರತದ ಕೊಡುಗೆಯೇ ಹೆಚ್ಚಿದೆ. ಕಳೆದ 12 ವರ್ಷಗಳಲ್ಲಿ ಜಾಗತಿಕ ಜನಸಂಖ್ಯೆಯಲ್ಲಿ 100 ಕೋಟಿ ಜನಸಂಖ್ಯೆ ಏರಿಕೆ ಕಂಡುಬಂದಿದ್ದು, ಈ 100 ಕೋಟಿ ಜನಸಂಖ್ಯೆಯಲ್ಲಿ ಭಾರತದ ಪಾಲು 17.7 ಕೋಟಿಯಷ್ಟಿದೆ. ಜೊತೆಗೆ ಭಾರತದಲ್ಲಿ ಈಗಿನ ಜನಸಂಖ್ಯೆ 141.2 ಕೋಟಿ ಇದೆ. ಸದ್ಯದ ಮಟ್ಟಿಗೆ ಭಾರತ ವಿಶ್ವದಲ್ಲೇ ನಂ.2 ಜನಸಂಖ್ಯಾ ದೇಶ. ನಂ.1 ಜನಸಂಖ್ಯೆ ಹೊಂದಿರುವ ಚೀನಾದಲ್ಲಿ 142.6 ಕೋಟಿ ಜನಸಂಖ್ಯೆ ಇದೆ. ಆದರೆ ಚೀನಾದಲ್ಲಿ ಜನಸಂಖ್ಯಾ ಬೆಳವಣಿಗೆ ವೇಗ ತಗ್ಗುತ್ತಿದೆ. 

Tap to resize

Latest Videos

ಇದನ್ನು ಓದಿ: World Population: 800 ಕೋಟಿ ದಾಟಿದ ವಿಶ್ವದ ಜನಸಂಖ್ಯೆ: ವಿಶ್ವಸಂಸ್ಥೆ ವರದಿ

ಹೀಗಾಗಿ 2023ರಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ, 2050ಕ್ಕೆ ಭಾರತದ ಜನಸಂಖ್ಯೆ 166.8 ಕೋಟಿಗೆ ಏರಲಿದೆ. ಆದರೆ ಚೀನಾ ಜನಸಂಖ್ಯೆ 131.7 ಕೋಟಿಗೆ ಇಳಿಕೆಯಾಗಲಿದೆ ಎಂದೂ ಅಂದಾಜು ಮಾಡಲಾಗಿದೆ.

ಟಾಪ್‌-5 ಜನಸಂಖ್ಯಾ ದೇಶಗಳು
ಚೀನಾ - 142.6 ಕೋಟಿ
ಭಾರತ - 141.2 ಕೋಟಿ
ಅಮೆರಿಕ - 33.5 ಕೋಟಿ
ಇಂಡೋನೇಷ್ಯಾ - 28 ಕೋಟಿ
ಪಾಕಿಸ್ತಾನ - 23.15 ಕೋಟಿ

ಇದನ್ನೂ ಓದಿ: ಮತಾಂತರ, ಒಳನುಸುಳುವಿಕೆಯಿಂದ ಜನಸಂಖ್ಯಾ ಅಸಮಾನತೆ: ಹೊಸಬಾಳೆ

ಜನಸಂಖ್ಯೆ ಹೆಚ್ಚಳಕ್ಕೆ ಕಾರಣವೇನು?
ಮಾನವರ ಜೀವಿತಾವಧಿ ಹೆಚ್ಚಳ, ಪೋಷಕಾಂಶಯುಕ್ತ ಆಹಾರ ಸೇವನೆ ಹೆಚ್ಚಳ, ವೈಯಕ್ತಿಕ ಆರೈಕೆಗೆ ಹೆಚ್ಚು ಗಮನ, ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು, ವಿವಿಧ ಆರೋಗ್ಯ ಸಮಸ್ಯೆಗೆ ಸೂಕ್ತ ಔಷಧ ಲಭ್ಯತೆ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ.

ಜನನ ಪ್ರಮಾಣ ಹೆಚ್ಚು, ಮರಣ ಕಡಿಮೆ
ಪ್ರತಿ ವರ್ಷ ವಿಶ್ವದಲ್ಲಿ ಅಂದಾಜು 7 ಕೋಟಿ ಜನರ ಜನವಾಗುತ್ತಿದ್ದರೆ, 6 ಕೋಟಿ ಜನರು ಸಾಯುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಭಾರತದಲ್ಲೀಗ ಜನಸಂಖ್ಯಾ ಸ್ಫೋಟ ನಿಲುಗಡೆ
ಜನಸಂಖ್ಯಾ ಸ್ಫೋಟದ ಮೂಲಕ ವಿಶ್ವದ ಜನಸಂಖ್ಯೆ 800 ಕೋಟಿ ತಲುಪಲು ಕಾರಣವಾಗಿದ್ದ ಭಾರತದಲ್ಲಿ ಇದೀಗ ಜನಸಂಖ್ಯಾ ಸ್ಫೋಟ ಕೊನೆಗೊಂಡಿದ್ದು, ಬೆಳವಣಿಗೆ ದರ ಸ್ಥಿರವಾಗಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಭಾರತ ಕೈಗೊಂಡ ರಾಷ್ಟ್ರೀಯ ಕಾರ‍್ಯನೀತಿ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಿಸಿರುವುದನ್ನು ತೋರಿಸುತ್ತಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಭಾರತದಲ್ಲಿ ಪ್ರಸ್ತುತ ಫಲವತ್ತತೆಯ ದರ ಶೇ.2.2ರಿಂದ 2ಕ್ಕೆ ಇಳಿಕೆಯಾಗಿದೆ. ಎಲ್ಲಾ 31 ರಾಜ್ಯಗಳೂ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಸಾಧಿಸಿವೆ. ಜನಸಂಖ್ಯೆ ಹೆಚ್ಚಳ ಸ್ಥಿರವಾಗಲು ಆಧುನಿಕ ಕುಟುಂಬ ಯೋಜನೆ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆ ಹಾದಿ
ವಿಶ್ವದಲ್ಲಿ ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಇದೀಗ 141 ಕೋಟಿ ಜನಸಂಖ್ಯೆ ಹೊಂದಿದೆ. ಕ್ರಿ.ಪೂ.2000ದಲ್ಲಿ ಅಖಂಡ ಭಾರತದ ಜನಸಂಖ್ಯೆ 1 ಕೋಟಿ ತಲುಪಿತ್ತು ಎಂಬ ಅಂದಾಜಿದೆ. ನಂತರದ ಶತಮಾನಗಳಲ್ಲಿ ಹಂತಹಂತವಾಗಿ ಜನಸಂಖ್ಯೆ ಏರಿಕೆ ಕಂಡು ಜನಸಂಖ್ಯಾ ಸ್ಫೋಟಕ್ಕೂ ಸಾಕ್ಷಿಯಾಗಿದ್ದ ದೇಶದಲ್ಲಿ ಇದೀಗ ಬೆಳವಣಿಗೆ ದರ ಸ್ಥಿರವಾಗತೊಡಗಿದೆ. ಭಾರತದ ಜನಸಂಖ್ಯೆ 1911ರಲ್ಲಿ 25 ಕೋಟಿ, 1971ರಲ್ಲಿ 50 ಕೋಟಿ, 2001ರಲ್ಲಿ 100 ಕೋಟಿ ಮತ್ತು 2021ರಲ್ಲಿ 140 ಕೋಟಿ ಮೈಲುಗಲ್ಲುಗಳನ್ನು ದಾಟಿದೆ. ಉತ್ತರ ಪ್ರದೇಶ 19.9 ಕೋಟಿ ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿದೆ. 6.1 ಕೋಟಿ ಜನರನ್ನು ಹೊಂದಿರುವ ಕರ್ನಾಟಕ 8ನೇ ಸ್ಥಾನದಲ್ಲಿದೆ. 64 ಸಾವಿರ ಜನಸಂಖ್ಯೆ ಹೊಂದಿರುವ ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ.

ಜನಸಂಖ್ಯಾ ಬೆಳವಣಿಗೆ
ಕ್ರಿ.ಪೂ. 2000    1 ಕೋಟಿ
1911                25 ಕೋಟಿ
1971                50 ಕೋಟಿ
2001              100 ಕೋಟಿ
2021               141 ಕೋಟಿ

ಹೆಚ್ಚು ಜನಸಂಖ್ಯೆಯ ರಾಜ್ಯಗಳು
ಉತ್ತರ ಪ್ರದೇಶ      19.98 ಕೋಟಿ
ಮಹಾರಾಷ್ಟ್ರ        11.23 ಕೋಟಿ
ಬಿಹಾರ                 10.4 ಕೋಟಿ
ಪಶ್ಚಿಮ ಬಂಗಾಳ   9.12 ಕೋಟಿ
ಮಧ್ಯಪ್ರದೇಶ        7.26 ಕೋಟಿ

click me!