ಕೊರೋನಾ ಗೆಲ್ಲುವ ಹಾದಿಯಲ್ಲಿ ಭಾರತ, ವಿಶ್ವಕ್ಕೆ ಮಾದರಿ: ಮೋದಿ

By Kannadaprabha NewsFirst Published May 31, 2020, 11:12 AM IST
Highlights

ಕೊರೋನಾ ಗೆಲ್ಲುವ ಹಾದಿಯಲ್ಲಿ ಭಾರತ: ಮೋದಿ| ಆರ್ಥಿಕ ಪುನಶ್ಚೇತನಕ್ಕೂ ಭಾರತ ವಿಶ್ವಕ್ಕೆ ಮಾದರಿಯಾಗಲಿದೆ| ಸರ್ಕಾರಕ್ಕೆ 1 ವರ್ಷ ಸಂದ ಹಿನ್ನೆಲೆ ಜನತೆಗೆ ಪ್ರಧಾನಿ ಪತ್ರ| ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ಕೊರತೆ ಇರಬಹುದು. ಆದರೆ ದೇಶದಲ್ಲಿ ಕೊರತೆಗಳಿಲ್ಲ-ಮೋದಿ

ನವದೆಹಲಿ(ಮೇ.31): ಸತತ ಎರಡನೇ ಅವಧಿಗೆ ಗದ್ದುಗೆಗೇರಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೊದಲ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶನಿವಾರ ಬಹಿರಂಗ ಪತ್ರ ಬರೆದಿದ್ದಾರೆ. ‘ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವ ಹಾದಿಯಲ್ಲಿದ್ದೇವೆ. ಕೊರೋನಾದಿಂದ ಬಾಧಿತವಾಗಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ನೀಡಲಾಗಿರುವ 20 ಲಕ್ಷ ಕೋಟಿ ರು. ಪ್ಯಾಕೇಜ್‌ ವಿಶ್ವಕ್ಕೇ ಮಾದರಿಯಾಗಲಿದೆ. ಭಾರತವನ್ನು ಆತ್ಮನಿರ್ಭರ (ಸ್ವಾವಲಂಬಿ) ಮಾಡಲಿದೆ’ ಎಂದು ಹೇಳಿದ್ದಾರೆ.

'ತೆಗಳುವವರೆಲ್ಲಾ ಮೋದಿಗೆ ರಾಜಮಾರ್ಗ ನಿರ್ಮಿಸಿ ಕೊಟ್ಟಿದ್ರು'..! ಪ್ರಧಾನಿ ಬಗ್ಗೆ ವಾಗ್ಮಿ ಸೂಲಿಬೆಲೆ ಮಾತು

‘ಸಾಮಾನ್ಯ ಪರಿಸ್ಥಿತಿ ಇದ್ದರೆ ಜನರ ಮಧ್ಯೆ ಬೆರೆತು ಸರ್ಕಾರದ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ, ಪ್ರಸಕ್ತ ಪರಿಸ್ಥಿತಿ (ಕೊರೋನಾ ವೈರಸ್‌ ಲಾಕ್‌ಡೌನ್‌) ಕಾರಣ ಬೆರೆಯಲು ಆಗುತ್ತಿಲ್ಲ’ ಎಂದು ಅವರು ಪತ್ರ ಮುಖೇನ ಜನರನ್ನು ತಲುಪಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದಾರೆ. ಅಲ್ಲದೆ, ಕಳೆದ ವರ್ಷ ತಾವು 2ನೇ ಬಾರಿ ಗೆದ್ದುದನ್ನು, 1 ವರ್ಷದಲ್ಲಿ ಎದುರಿಸಿದ ಸವಾಲುಗಳನ್ನು, 1 ವರ್ಷದ ಸಾಧನೆಯನ್ನು ಹಾಗೂ ದೇಶ ಕಂಡ ಪ್ರಗತಿಯನ್ನು ಸವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಮುಂದೆ ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ ಎಂದೂ ಅವರು ಹೇಳಿದ್ದಾರೆ.

ಇದೇ ವೇಳೆ ಟ್ವೀಟರ್‌ನಲ್ಲಿ ಅವರು ತಮ್ಮ ಪತ್ರದ ಕೆಲವು ಅಂಶಗಳನ್ನು ಓದಿರುವ ಆಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಪತ್ರದ ಸಾರ ಇಲ್ಲಿದೆ.

ದೃಢ ನಿಶ್ಚಯದ ಸಮಯವಿದು

ಕೊರೋನಾ ಪಿಡುಗು ದೇಶದಲ್ಲಿ ಕಾಣಿಸಿಕೊಂಡಿದೆ. ಇದು ಬಿಕ್ಕಟ್ಟಿನ ಸಮಯ. ಆದರೆ ಇದೇ ಸಂದರ್ಭವನ್ನು ನಾವು ‘ದೃಢನಿಶ್ಚಯ’ ಕೈಗೊಳ್ಳಲು ಒದಗಿಬಂದ ಸಕಾಲ ಎಂದು ಪರಿಗಣಿಸಬೇಕು. 130 ಕೋಟಿ ಭಾರತೀಯರ ವರ್ತಮಾನ ಹಾಗೂ ಭವಿಷ್ಯವನ್ನು ಪ್ರತಿಕೂಲತೆಯು ನಿರ್ಧರಿಸುವುದಿಲ್ಲ ಎಂಬುದನ್ನು ಅರಿಯಬೇಕು. ನಮ್ಮ ವರ್ತಮಾನ ಹಾಗೂ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ. ಪ್ರಗತಿ ಹಾಗೂ ಜಯ ನಮ್ಮದಾಗಲಿದೆ.

ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

ಹಗಲು ರಾತ್ರಿ ಕೆಲಸ ಮಾಡುತ್ತಿರುವೆ

ನಾನು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ಕೆಲವು ಕೊರತೆ ಇರಬಹುದು. ಆದರೆ ದೇಶದಲ್ಲಿ ಯಾವುದೇ ಕೊರತೆಗಳಿಲ್ಲ. ನಾನು ನಿಮ್ಮನ್ನು, ನಿಮ್ಮ ಬಲವನ್ನು, ನಿಮ್ಮ ಸಾಮರ್ಥ್ಯವನ್ನು ನಂಬಿದ್ದೇನೆ. ಕೊರೋನಾ ವೈರಸ್‌ ಸಮಯದಲ್ಲಿ ಭಾರತ ತೋರಿದ ಏಕತೆ, ವೈರಸ್‌ ತೊಲಗಿಸುವ ದೃಢನಿಶ್ಚಯದ ಬಗ್ಗೆ ವಿಶ್ವವೇ ಚಕಿತವಾಗಿದೆ. ಆರ್ಥಿಕ ಪುನಶ್ಚೇತನಕ್ಕೂ ವಿಶ್ವಕ್ಕೆ ಭಾರತ ಮಾದರಿಯಾಗಲಿದೆ.

ಶ್ರಮಿಕರ ನೋವು ಪರಿಹರಿಸುವೆ

ನಮ್ಮ ಕಾರ್ಮಿಕರು, ವಲಸಿಗರು, ಕರಕುಶಲಕರ್ಮಿಗಳು, ಸಣ್ಣ ಉದ್ದಿಮೆದಾರರು, ಬೀದಿ ವ್ಯಾಪಾರಿಗಳು, ನಮ್ಮ ದೇಶವಾಸಿಗಳು ಈ ಸಂದರ್ಭದಲ್ಲಿ ಸಾಕಷ್ಟುಬವಣೆ ಅನುಭವಿಸಿದ್ದಾರೆ. ಅವರ ನೋವಿನ ಉಪಶಮನಕ್ಕೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ಈ ಕಷ್ಟವು ವಿಕೋಪಕ್ಕೆ ಹೋಗದಂತೆ ಜನರು ನೋಡಿಕೊಳ್ಳಬೇಕು. ನಿಯಮ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈವರೆಗೆ ಜನರು ಇವನ್ನು ಪಾಲಿಸಿದ್ದಾರೆ. ಮುಂದೆಯೂ ಪಾಲಿಸಬೇಕು. ಇದೊಂದು ಸುದೀರ್ಘ ಯುದ್ಧವಾಗಿದೆ. ನಾವು ಜಯದ ಹಾದಿಯಲ್ಲಿದ್ದೇವೆ.

'ಮೋದಿ ಹೆಡ್‌ಮಾಸ್ತರ್‌ ಥರ ಅಲ್ಲ, ತಂದೆಯ ರೀತಿ ನಡೆದುಕೊಳ್ತಾರೆ'

20 ಲಕ್ಷ ಕೋಟಿಯಿಂದ ಆತ್ಮನಿರ್ಭರತೆ

ಕೊರೋನಾ ನಂತರದ ಕಾಲವು ಯಾವ ರೀತಿ ಇರುತ್ತದೆ? ಆರ್ಥಿಕತೆ ಹೇಗೆ ಚೇತರಿಕೆ ಕಾಣಲಿದೆ ಎಂದು ಭಾರತ ಹಾಗೂ ವಿಶ್ವದೆಲ್ಲೆಡೆ ಚರ್ಚೆ ನಡೆದಿದೆ. ಆದರೆ ಆರ್ಥಿಕ ಪುನಶ್ಚೇತನಕ್ಕೆ ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿಶ್ವವೇ ಚಕಿತಗೊಂಡಿದೆ. ನಮ್ಮ ಸಾಮರ್ಥ್ಯದ ಮೂಲಕ ನಮ್ಮದೇ ಹಾದಿಯಲ್ಲಿ ನಾವು ಮುನ್ನಡೆದಿದ್ದೇವೆ. ಆತ್ಮನಿರ್ಭರ ಭಾರತದ (ಸ್ವಾವಲಂಬಿ ಭಾರತ) ಮೂಲಕ ಮುಂದೆ ಸಾಗಿದ್ದೇವೆ. ಇತ್ತೀಚೆಗೆ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿರುವುದು ಆತ್ಮನಿರ್ಭರತೆಯತ್ತ ದಿಟ್ಟಹೆಜ್ಜೆಯಾಗಿದೆ. ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ಉತ್ತಮ ಅವಕಾಶದ ಯುಗವೇ ಆರಂಭವಾಗಲಿದೆ.

ಗ್ರಾಮೀಣ-ನಗರದ ಅಂತರ ತಗ್ಗುತ್ತಿದೆ

ಸಂಸತ್ತಿನ ಕಾರ್ಯಕ್ಷಮತೆ ಹೆಚ್ಚುತ್ತಿದೆ. ಪ್ರಮುಖ ಮಸೂದೆಗಳು ಪಾಸಾಗಿವೆ. ನಗರ-ಭಾರತದ ನಡುವಿನ ಅಂತರ ತಗ್ಗುತ್ತಿದೆ. ಮೊದಲ ಬಾರಿ ನಗರಗಳಿಗಿಂತ ಗ್ರಾಮೀಣ ಭಾಗದಲ್ಲಿ ಶೇ.10ರಷ್ಟುಇಂಟರ್‌ನೆಟ್‌ ಹೆಚ್ಚು ಬಳಕೆ ಆಗುತ್ತಿದೆ ಎಂಬುದೇ ಇದಕ್ಕೆ ನಿದರ್ಶನ. ರೈತರ ಬೆಂಬಲ ಬೆಲೆ ಬೇಡಿಕೆಯನ್ನೂ ಈಡೇರಿಸಿದ್ದೇವೆ.

ಮಿಲಿಟರಿ ಶಕ್ತಿ ಸಾಬೀತು

ಬಾಲಾಕೋಟ್‌ ವಾಯುದಾಳಿ ಹಾಗೂ ಸರ್ಜಿಕಲ್‌ ದಾಳಿ ಮೂಲಕ ನಮ್ಮ ಸೇನಾ ಶಕ್ತಿ ಸಾಬೀತಾಗಿದೆ. ಇದೇ ವೇಳೆ, ಯೋಧರ ಏಕ ಶ್ರೇಣಿ-ಏಕ ಪಿಂಚಣಿ ಬೇಡಿಕೆ ಈಡೇರಿಸಿದ್ದೇವೆ. ಏಕ ದೇಶ-ಏಕ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದಿದ್ದೇವೆ.

2019ರ ಜಯ ಸುವರ್ಣ ಅಧ್ಯಾಯ

2019ರಲ್ಲಿ ಬಿಜೆಪಿ ಪುನಃ ಗೆದ್ದಿದ್ದು ಸುವರ್ಣ ಅಧ್ಯಾಯ. ಕೇವಲ ಮತ್ತೊಮ್ಮೆ ಅಧಿಕಾರ ನಡೆಸಿ ಎಂದು ಜನ ನಮ್ಮನ್ನು ಗೆಲ್ಲಿಸಲಿಲ್ಲ. ಭಾರತ ಮತ್ತಷ್ಟುಎತ್ತರಕ್ಕೆ ಏರಿ ಜಾಗತಿಕ ನಾಯಕನಾಗಬೇಕು ಎಂಬ ಕನಸಿನೊಂದಿಗೆ ಗೆಲ್ಲಿಸಿದರು.

ಕೊರೊನಾ ಸಂಕಷ್ಟದಲ್ಲಿ ಸ್ವಾವಲಂಬಿ ಭಾರತದ ಹೊಸ ಮಂತ್ರ ಪಠಿಸಿದ ಮೋದಿ

ಕನಸು ನನಸು ಮಾಡಿದ್ದೇನೆ

ಕಳೆದ 1 ವರ್ಷದಲ್ಲಿ ಜನರ ಕನಸು ನನಸು ಮಾಡಿದ್ದೇನೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ ದೇಶದ ಏಕತೆಗೆ ಕಾರಣವಾಗಿದೆ. ರಾಮಮಂದಿರ ತೀರ್ಪಿನಿಂದ ಶತಮಾನದಷ್ಟುಹಳೆಯದಾದ ಸಮಸ್ಯೆ ಬಗೆಹರಿದಿದೆ. ತ್ರಿವಳಿ ತಲಾಖ್‌ ಎಂಬ ಅನಾಗರಿಕ ಪದ್ಧತಿ ಇತಿಹಾಸದ ಕಸದಬುಟ್ಟಿಸೇರಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಸಹಾನುಭೂತಿಯ ಪ್ರತೀಕವಾಗಿದೆ. ಜನಶಕ್ತಿ ಹಾಗೂ ರಾಷ್ಟ್ರಶಕ್ತಿಯ ಬೆಳಕು ದೇಶವನ್ನು ಪ್ರಜ್ವಲಿಸುವಂತೆ ಮಾಡಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಮೂಲಕ ಎಲ್ಲೆಡೆ ದೇಶ ಮುನ್ನುಗ್ಗುತ್ತಿದೆ.

click me!