24 ಗಂಟೆಯಲ್ಲಿ 2.5 ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಿ ವಿಶ್ವ ದಾಖಲೆ ಬರೆದ ಭಾರತ!

By Suvarna NewsFirst Published Apr 3, 2021, 11:32 AM IST
Highlights

ವೇಗವಾಗಿ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ| 24 ಗಂಟೆಯಲ್ಲಿ  2.5 ಕಿ.ಮೀ ಚತುಷ್ಪಥ  ರಸ್ತೆ ನಿರ್ಮಾಣ| ಕೊರೊನಾ ಹೊರತಾಗಿಯೂ ದೇಶದಲ್ಲಿ 13,394 ಕಿ.ಮೀ ರಸ್ತೆ ನಿರ್ಮಾಣ| 

ನವದೆಹಲಿ(ಏ.03): 2020-22 ವಾರ್ಷಿಕ ವರ್ಷದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಒಟ್ಟು 13,394 ಕಿಲೋಮೀಟರ್ ಹೆದ್ದಾರಿ ನಿರ್ಮಾಣ ಮಾಡಿದೆ. ಭಾರತ ಈಗ ರಸ್ತೆಗಳ ನಿರ್ಮಾಣದಲ್ಲಿ ವಿಶ್ವ ದಾಖಲೆ ಮಾಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನೀತಿನ ಗಡ್ಕರಿ ತಿಳಿಸಿದ್ದಾರೆ.

 “ ನಾವು ಮಾರ್ಚ್ ತಿಂಗಳಿನಲ್ಲಿ ಮೂರು ವಿಶ್ವ ದಾಖಲೆಗಳನ್ನು ಮಾಡಿದ್ದೇವೆ. ಭಾರತ ಈಗ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆಯನ್ನು ಹೊಂದಿದೆ. 2.5 ಕಿ.ಮೀ ಉದ್ದದ ಚತುಷ್ಪಥ ರಸ್ತೆಯನ್ನು 24 ಗಂಟೆಗಳಲ್ಲಿ ನಿರ್ಮಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದೇವೆ. ನಾವು 25 ಕಿ.ಮೀ ಉದ್ದದ ಬಿಟುಮೆನ್ ಸೋಲಾಪುರ್-ಬಿಜಾಪುರ್ ರಸ್ತೆಯನ್ನು ಕೂಡ 24 ಗಂಟೆಯ ಅವಧಿಯಲ್ಲಿ ನಿರ್ಮಾಣ ಮಾಡಿದ್ದೇವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನೀತಿನ ಗಡ್ಕರಿ ತಿಳಿಸಿದ್ದಾರೆ.

 ಫೆಬ್ರವರಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆ ಕಂಪನಿಯಾದ ಪಟೇಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಅತ್ಯಂತ ಹೆಚ್ಚಿನ ಪ್ರಮಾಣದ ಕಾಂಕ್ರೀಟ್ ಬಳಸಿ ಕೇವಲ 24 ಗಂಟೆಗಳಲ್ಲಿ ಚತುಷ್ಪಥ ರಸ್ತೆಯನ್ನು ನಿರ್ಮಿಸುವುದರ ಮೂಲಕ ವಿಶ್ವ ದಾಖಲೆಯನ್ನು ಮಾಡಿದೆ. 2,582 ಮೀಟರ್ ಉದ್ದದ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದು ಕೇವಲ 24 ಗಂಟೆಗಳಲ್ಲಿ. ಫೆಬ್ರವರಿ 1ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾದ ಕೆಲಸ ಮುಂದಿನ ದಿನ 8 ಗಂಟೆಗೆ ಮುಕ್ತಾಯಗೊಂಡಿದೆ. 2,582 ಮೀಟರ್ ಉದ್ದದ ನಾಲ್ಕು ರಸ್ತೆಗಳನ್ನು ನಿರ್ಮಿಸಲಾಗಿದ್ದು 10.32 ಕಿ.ಮೀ ಉದ್ದದ ಒಟ್ಟು 48,711 ಚದರ ಮೀಟರ ಎಕ್ಸೆಪ್ರೆಸ್ ವೇ ನಿರ್ಮಾಣವಾಗಿದೆ. ಈ ರಸ್ತೆ ನಿರ್ಮಿಸಲು ಒಟ್ಟು 14,613 ಘನ ಮೀಟರ್ ಕಾಂಕ್ರೀಟ್ ಹಾಕಲಾಗಿದೆ.

ಇದೇ ಮಾದರಿಯಲ್ಲಿ ಸೋಲಾಪುರ್ - ಬಿಜಾಪುರ್ (NH 52) ಮಧ್ಯೆ 25.54 ಕಿ.ಮೀ ಉದ್ದದ ರಸ್ತೆಯನ್ನು ಐಜೆಎಮ್ ಇಂಡಿಯಾ ಸಂಸ್ಥೆ 18 ಗಂಟೆಗಳಲ್ಲಿ ನಿರ್ಮಾಣ ಮಾಡಿದೆ. ವಾರ್ಷಿಕ ವರ್ಷದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಒಟ್ಟು 13,394 ಕಿಲೋಮೀಟರ್ ಹೆದ್ದಾರಿ ನಿರ್ಮಾಣ ಮಾಡಿದೆ. ದೇಶದಲ್ಲಿ ಹೆದ್ದಾರಿ ನಿರ್ಮಾಣದ ದಿನಕ್ಕೆ 37 ಕಿ.ಮೀ ವೇಗದಲ್ಲಿ ಸಾಗುತ್ತಿದೆ ಎಂದು ನಿತೀನ್ ಗಡ್ಕರಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ದೇಶ ಅತ್ಯಂತ ಹಚ್ಚಿನ ಪ್ರಗತಿಯನ್ನು ಸಾಧಿಸಿದೆ. ಜಗತ್ತಿನ ಯಾವುದೇ ದೇಶದಲ್ಲಿ ಇಷ್ಟು ವೇಗದಲ್ಲಿ ರಸ್ತೆ ನಿರ್ಮಾಣ ಕಾರ್ಯವಾಗುತ್ತಿಲ್ಲ. 2019-20 ನೇ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ರಸ್ತೆ ನಿರ್ಮಾಣದ ಖರ್ಚು ವೆಚ್ಚ 2020-21 ರಲ್ಲಿ ಶೇಕಡಾ 54 ರಷ್ಟು ಏರಿಕೆಯಾಗಿದೆ. ಕೊರೊನಾ ಮಹಾಮಾರಿಯ ಹೊರತಾಗಿಯೂ ಈ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ನಿತೀನ್ ಗಡ್ಕರಿ ಹೇಳಿದ್ದಾರೆ.

2021-22 ರ ಬಜೆಟ್ನಲ್ಲಿ ಕೂಡ ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಸಾಕಷ್ಟು ಹಣ ಮೀಸಲೀಡಲಾಗಿದೆ. ಮಾರ್ಚ್ 2022 ರ ಹೊತ್ತಿಗೆ ಕೇಂದ್ರ ಸರಕಾರ 8,500 ಕಿ.ಮೀ ಹೆದ್ದಾರಿ ಹಾಗೂ 11,000 ಕಿ.ಮೀ ರಾಷ್ಟ್ರೀಯ ಕೊರಿಡಾರ್ಗಳನ್ನು ನಿರ್ಮಿಸುವುದಾಗಿ ತಿಳಿಸಿದೆ. ಭಾರತಮಾಲಾ ಪರಿಯೋಜನಾ ಯೋಜನೆ ಅನ್ವಯ ಈಗಾಗಲೇ 3,800 ಕಿ.ಮೀ ನಷ್ಟು ರಸ್ತೆ ನಿರ್ಮಾಣವಾಗಿದ್ದು ಇನ್ನೂ 13,000 ಕಿ.ಮೀ ಉದ್ದದಷ್ಟು ರಸ್ತ ಕೇಂದ್ರ ಸರಕಾರ ನಿರ್ಮಿಸಲಿದೆ. ರಸ್ತೆ ಮತ್ತು ಬಂದರು ನಿರ್ಮಾಣಕ್ಕಾಗಿ 1,18,101 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
 

click me!