ಜಮ್ಮು ಕಾಶ್ಮೀರದಲ್ಲಿ ದೇಶದ ಮೊಟ್ಟ ಮೊದಲ ಕೇಬಲ್‌ ರೈಲ್ವೆ ಬ್ರಿಡ್ಜ್‌ ರೆಡಿ: ಹಿಮಾಲಯದ ತಪ್ಪಲಿನಲ್ಲಿ ನಿರ್ಮಾಣ

By Kannadaprabha NewsFirst Published Apr 30, 2023, 9:50 AM IST
Highlights

ಒಟ್ಟು 653 ಕಿ.ಮೀ. ಉದ್ದದ ಉಕ್ಕಿನ ಕೇಬಲ್‌ ಬಳಸಿ 725.5 ಮೀಟರ್‌ ಉದ್ದದ ಈ ಸೇತುವೆ ನಿರ್ಮಿಸಲಾಗಿದೆ. ಸಾಮಾನ್ಯ ಸಂಚಾರವೂ ದುಸ್ತರವಾಗಿರುವ ಕಠಿಣ ಭೂಪ್ರದೇಶದಲ್ಲಿ ಭೂಕಂಪ ನಿರೋಧಕ ತಂತ್ರಜ್ಞಾನ ಬಳಸಿ ಈ ಅಪರೂಪದ ಸೇತುವೆಯನ್ನು ನಿರ್ಮಿಸಲಾಗಿದೆ.

ನವದೆಹಲಿ (ಏಪ್ರಿಲ್ 30, 2023): ಜಮ್ಮು ಕಾಶ್ಮೀರದಲ್ಲಿ ದೇಶದ ಮೊದಲ ಕೇಬಲ್‌-ಸ್ಟೇಯ್ಡ್‌ ರೈಲ್ವೆ ಸೇತುವೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಹಿಮಾಲಯದ ತಪ್ಪಲಿನಲ್ಲಿ ಉದಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್‌ ಯೋಜನೆ ಅಂಗವಾಗಿ ಈ ಅತ್ಯಾಧುನಿಕ ತಂತ್ರಜ್ಞಾನದ ಕೇಬಲ್‌ ಬ್ರಿಡ್ಜ್‌ ನಿರ್ಮಿಸಲಾಗಿದ್ದು, ಸಂಚಾರಕ್ಕೆ ಸಿದ್ಧಗೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಈ ಸೇತುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಒಟ್ಟು 653 ಕಿ.ಮೀ. ಉದ್ದದ ಉಕ್ಕಿನ ಕೇಬಲ್‌ ಬಳಸಿ 725.5 ಮೀಟರ್‌ ಉದ್ದದ ಈ ಸೇತುವೆ ನಿರ್ಮಿಸಲಾಗಿದೆ. ಸಾಮಾನ್ಯ ಸಂಚಾರವೂ ದುಸ್ತರವಾಗಿರುವ ಕಠಿಣ ಭೂಪ್ರದೇಶದಲ್ಲಿ ಭೂಕಂಪ ನಿರೋಧಕ ತಂತ್ರಜ್ಞಾನ ಬಳಸಿ ಈ ಅಪರೂಪದ ಸೇತುವೆಯನ್ನು ನಿರ್ಮಿಸಲಾಗಿದೆ. ಅಂಜಿ ನದಿಯ ಮೇಲೆ ಅಂಜಿ ಖಾಡ್‌ ಎಂಬಲ್ಲಿ ಇದನ್ನು ನಿರ್ಮಿಸಲಾಗಿದ್ದು, ಸೇತುವೆಗೆ 96 ಕೇಬಲ್‌ಗಳನ್ನು ಬಳಸಲಾಗಿದೆ.

Latest Videos

ಇದನ್ನು ಓದಿ: ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಲೋಕಾರ್ಪಣೆಗೆ ಸಿದ್ಧ

ಅಶ್ವಿನಿ ವೈಷ್ಣವ್‌ ಈ ಸೇತುವೆ ನಿರ್ಮಾಣದ ಕಾಮಗಾರಿಯ ಟೈಮ್‌-ಲ್ಯಾಪ್ಸ್ಡ್‌ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಎಲ್ಲಾ 96 ಕೇಬಲ್‌ಗಳನ್ನು ಅಳವಡಿಸುವ ದೃಶ್ಯವಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಿಯಾಸಿ ಜಿಲ್ಲೆಯಲ್ಲಿ ಅತ್ಯಂತ ಸವಾಲಿನ ಉದಮ್‌ಪುರ - ಶ್ರೀನಗರ - ಬಾರಾಮುಲ್ಲಾ ರೈಲ್ವೆ ಯೋಜನೆಯಲ್ಲಿ ಈ ಸೇತುವೆ ಅಡಕಗೊಂಡಿದೆ. ಭಾರತೀಯ ರೈಲ್ವೆ ಇದನ್ನು ನಿರ್ಮಿಸಿದ್ದು, ಬ್ರಿಡ್ಜ್‌ ಜಮ್ಮುವಿನಿಂದ 80 ಕಿ.ಮೀ. ದೂರದಲ್ಲಿ ಕತ್ರಾ ಮತ್ತು ರಿಯಾಸಿ ನಡುವೆ ಇದೆ.

4 ಭಾಗಗಳಿರುವ ಸೇತುವೆ:
ಹಿಮಾಲಯದ ಶಿಥಿಲ ಭೂಪ್ರದೇಶದಲ್ಲಿ ಇದನ್ನು ನಿರ್ಮಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಐಐಟಿ ರೂರ್ಕಿ ಹಾಗೂ ಐಐಟಿ ದೆಹಲಿಯ ತಜ್ಞರ ಸಹಯೋಗದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸೇತುವೆಯಲ್ಲಿ ನಾಲ್ಕು ಭಾಗಗಳಿವೆ. 120 ಮೀಟರ್‌ ಉದ್ದದ ವಯಾಡಕ್ಟ್, 38 ಮೀ. ಉದ್ದದ ಅಪ್ರೋಚ್‌ ಬ್ರಿಡ್ಜ್‌, ಆಳ ಕಣಿವೆಯ ಮೇಲೆ 473 ಮೀ. ಉದ್ದದ ಭಾಗ ಹಾಗೂ ಕೇಂದ್ರ ಭಾಗದ 94 ಮೀ. ಸೇತುವೆ ಹೀಗೆ ನಾಲ್ಕು ಭಾಗಗಳಲ್ಲಿ ಇದನ್ನು ನಿರ್ಮಿಸಲಾಗಿದೆ. ಅಂಜಿ ನದಿಯ ಮೇಲೆ 331 ಮೀ. ಎತ್ತರದಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಇದರ ಮೇಲೆ ರೈಲುಗಾಡಿ 100 ಕಿ.ಮೀ. ವೇಗದಲ್ಲಿ ಚಲಿಸಬಹುದು.

ಇದನ್ನೂ ಓದಿ: ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್‌: ಡ್ರೋಣ್‌ ಸೆರೆ ಹಿಡಿದ ಅದ್ಭುತ ಫೋಟೋಗಳು

ಸೇತುವೆ ಪಕ್ಕ ಸರ್ವೀಸ್‌ ರಸ್ತೆ, ಫುಟ್‌ಪಾತ್‌:
ಸೇತುವೆಯಲ್ಲಿ ಒಂದು ರೈಲ್ವೆ ಹಳಿ, 3.75 ಮೀ. ಅಗಲದ ಸರ್ವೀಸ್‌ ರಸ್ತೆ ಹಾಗೂ ಎರಡೂ ಕಡೆ 1.5 ಮೀ. ಅಗಲದ ಫುಟ್‌ಪಾತ್‌ ಇದೆ. ಒಟ್ಟಾರೆ ಸೇತುವೆ 15 ಮೀ. ಅಗಲವಿದೆ. ಗಂಟೆಗೆ 213 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ಅದನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಈ ಸೇತುವೆ ಹೊಂದಿದೆ ಎಂದು ನಿರ್ಮಾಣ ತಂತ್ರಜ್ಞರು ಹೇಳಿಕೊಂಡಿದ್ದಾರೆ. ಇಟಲಿ ರೈಲ್ವೆ ಇಲಾಖೆಯ ಇಟಾಲ್ಫೆರ್‌ ಎಂಬ ಕಂಪನಿ ಈ ಸೇತುವೆಯನ್ನು ವಿನ್ಯಾಸಗೊಳಿಸಿದೆ. ಬ್ರಿಟನ್ನಿನ ಕೋವಿ ಎಂಬ ಕಂಪನಿ ಸೇತುವೆಯ ಗುಣಮಟ್ಟವನ್ನು ಪರೀಕ್ಷಿಸಿದೆ.

ಏನಿದರ ವಿಶೇಷತೆ?
- ಇದು ದೇಶದ ಮೊದಲ ಕೇಬಲ್‌-ಸ್ಟೇಯ್ಡ್‌ ತಂತ್ರಜ್ಞಾನದ ರೈಲ್ವೆ ಸೇತುವೆ
- ಜಮ್ಮು ಕಾಶ್ಮೀರದ ಅಂಜಿ ನದಿಯ ಮೇಲೆ 331 ಮೀ. ಎತ್ತರದಲ್ಲಿ ನಿರ್ಮಾಣ
- 653 ಕಿ.ಮೀ. ಉದ್ದದ ಕೇಬಲ್‌ ಬಳಸಿ ನಿರ್ಮಿಸಲಾದ 725 ಮೀ. ಸೇತುವೆ
- ಗಂಟೆಗೆ 213 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ತಡೆದುಕೊಳ್ಳುವ ಸಾಮರ್ಥ್ಯ
- ಹಿಮಾಲಯದ ಶಿಥಿಲ ಭೂಪ್ರದೇಶದಲ್ಲಿ ಭೂಕಂಪನಿರೋಧಕ ತಂತ್ರಜ್ಞಾನ ಬಳಕೆ
- ಇಟಾಲಿಯನ್‌ ಕಂಪನಿಯಿಂದ ವಿನ್ಯಾಸ, ಭಾರತೀಯ ರೈಲ್ವೆಯಿಂದ ನಿರ್ಮಾಣ
- ಮಹತ್ವಾಕಾಂಕ್ಷಿ ಉದಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಮಾರ್ಗದಲ್ಲಿದೆ

ಇದನ್ನೂ ಓದಿ: ಕಾಶ್ಮೀರದಲ್ಲಿ ಸ್ವಾತಂತ್ರ ಸಂಭ್ರಮ: ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ಹಾರಿದ ರಾಷ್ಟ್ರಧ್ವಜ

click me!