ಬಂಗಾಳದಲ್ಲಿ ಮೇಲ್ಮನೆಗೆ ಮರುಜೀವ, ಮಮತಾ ಸರ್ಕಾರದ ಹೊಸ ಲೆಕ್ಕಾಚಾರವೇನು?

By Suvarna NewsFirst Published May 24, 2021, 5:03 PM IST
Highlights

* ಪಶ್ಚಿಮ ಬಂಗಾಳದಲ್ಲಿ ವಿಧಾನಪರಿಷತ್ ಸೃಷ್ಟಿಗೆ ದೀದಿ ಸರ್ಕಾರದ ಚಿಂತನೆ
* ಹಿರಿಯರ ಸದನದ ಲಾಭ-ನಷ್ಟಗಳ ಬಗ್ಗೆ ವ್ಯಾಪಕ ಚರ್ಚೆ
* ರಾಜ್ಯದ ಬೊಕ್ಕಸಕ್ಕೆ ಇದರಿಂದ ಮತ್ತಷ್ಟು ನಷ್ಟ ಎಂಬ ಮಾತು ಇದೆ

ಡೆಲ್ಲಿ ಮಂಜು

ನವದೆಹಲಿ, (ಮೇ 24) : ಹ್ಯಾಟ್ರಿಕ್ ಖುಷಿಯಲ್ಲಿರುವ 3.0 ಆಡಳಿತ, ಹೊಸ `ಬಿಳಿಆನೆ'ಯನ್ನು ಕಟ್ಟುವ ತೀರ್ಮಾನ ಪ್ರಕಟಿಸಿದೆ..! ಆ ಬಿಳಿಆನೆ ಸಾಕುವುದು ಕಷ್ಟ. ಜನರ ತೆರಿಗೆ ದುಡ್ಡು ಪೋಲ್ ಆಗುತ್ತೆ ಅಂಥ ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿರುವ ಹೊತ್ತಲ್ಲಿ `ಹಿರಿಯರ ಸದನ' ಹೊಸದಾಗಿ ಸೃಜಿಸುವ ತೀರ್ಮಾನ ಟಿಎಂಸಿ ಸರ್ಕಾರ ಪ್ರಕಟಿಸಿದೆ.

ರಾಜ್ಯಗಳ ಮೇಲ್ಮನೆಗಳು ಬಿಳಿ ಆನೆಗಳು ಆಗುತ್ತಿವೆ. ಹಿರಿಯರು, ಅನುಭವಿಗಳು, ತಜ್ಞರು ಬರಬೇಕಿದ್ದ ಮೇಲ್ಮನೆಗಳು ಈಗ ರಿಯಲ್ ಎಸ್ಟೇಟ್ ಮಾಲೀಕರು, ಶ್ರೀಮಂತರು ಬರುತ್ತಿದ್ದಾರೆ ಅಂತ ಶ್ರೀಸಾಮಾನ್ಯರು ಮಾತಾಡಿಕೊಳ್ಳುತ್ತಿರುವಾಗಲೇ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರ ಹೊಸದಾಗಿ ಮೇಲ್ಮನೆ ಸೃಷ್ಟಿ ಮಾಡುವುದಾಗಿ ಘೋಷಿಸಿದೆ.

50 ವರ್ಷಗಳ ಹಿಂದೆ ರದ್ದು : ದೀದಿ ಮಮತಾ ಬ್ಯಾನರ್ಜಿಯವರು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವ ನಿರ್ಣಯ ಪ್ರಕಟಿಸಿದ್ದಾರೆ. ಮತ್ತೆ ಹೊಸದಾಗಿ `ಹಿರಿಯರ ಸದನ' ಸೃಷ್ಟಿ ಮಾಡುವುದಾಗಿ ಕಳೆದ ವಾರ ಪಶ್ಚಿಮಬಂಗಾಳ ಸರ್ಕಾರ ಹೇಳಿದೆ. ಪ್ರಸ್ತುತ ಕರ್ನಾಟಕ, ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳಲ್ಲಿ ಹಿರಿಯ ಸದನ ಜಾರಿಯಲ್ಲಿದೆ. ಬರೋಬ್ಬರಿ 50 ವರ್ಷಗಳ ಹಿಂದೆ ಅಂದಿನ ಎಡರಂಗದ ನೇತೃತ್ವದ ಸಮ್ಮಿಶ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಹಿರಿಯರ ಸದನವನ್ನು ರದ್ದು ಮಾಡಿತ್ತು.

ಹಳೆ ಕ್ಷೇತ್ರಕ್ಕೆ ಮರಳಿದ ಮಮತಾ, ಇಲ್ಲಿಂದಲೇ ಸ್ಪರ್ಧೆ

ಹೊಸ ಸದಸನವನ್ನು ಸೃಷ್ಟಿಸುವ ಅಥವಾ ರದ್ದು ಮಾಡುವ ಅಧಿಕಾರವನ್ನು ಆಯಾ ರಾಜ್ಯಗಳ ವಿಧಾನಸಭೆಗಳಿಗೆ ಸಂವಿಧಾನ ನೀಡಿದೆ. ವಿಧಾನಸಭೆಗಳು ಮೂರನೇ ಎರಡರಷ್ಟು ಬಹುಮತದೊಂದಿಗೆ ಆ ನಿರ್ಣಯವನ್ನು ಪಾಸ್ ಮಾಡಬೇಕು. ಬಳಿಕ ಆ ನಿರ್ಣಯ ಸಂಸತ್ ಮುಂದೆ ಬಂದು ಅನುಮೋದನೆ ಪಡೆಯಬೇಕು. ಅದರಂತೆ ಪಶ್ಚಿಮ ಬಂಗಾಳದಲ್ಲಿ 1969ರಲ್ಲಿ ಹಿರಿಯರ ಸದನವನ್ನು ರದ್ದು ಮಾಡಲಾಗಿತ್ತು. ನಾಲ್ಕು ತಿಂಗಳ ಬಳಿಕ ಅಂದಿನ ಸಂಸತ್ ಕೂಡ ಆ ನಿರ್ಣಯಕ್ಕೆ ಅನುಮೋದನೆ ನೀಡಿತ್ತು.

ಬರೋಬ್ಬರಿ 50 ವರ್ಷಗಳ ಬಳಿಕ ದೀದಿ ಸರ್ಕಾರ ಪುನಃ ಹಿರಿಯ ಸದನ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಸಂವಿಧಾನದಲ್ಲೂ ಕೂಡ ಇದಕ್ಕೆ ಅವಕಾಶ ಇದೆ. ಆದರೆ ಹಿರಿಯರ ಮನೆಯಿಂದ ಆಗುವ ಪ್ರಯೋಜನಗಳು ಮತ್ತು ಹಲವು ಸಂದರ್ಭಗಳಲ್ಲಿ ಆಳುವ ಸರ್ಕಾರಗಳಿಗೆ ಆಗುವ ಮುಜಗರಗಳು ಪದೇ ಪದೇ ದೇಶದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ. ಜೊತೆಗೆ ತೆರಿಗೆದಾರರ ಹಣದ ಬಗ್ಗೆಯೂ ದೀದಿ ಒಮ್ಮೆ ಯೋಚನೆ ಮಾಡುವುದು ಒಳಿತು ಅನ್ನೋತ್ತೆ ದೆಲ್ಲಿ ರಾಜಕೀಯ ಕಟ್ಟೆ.

ಇನ್ನು ತಮಿಳುನಾಡಿನಲ್ಲಿ ಕೂಡ ಹಿರಿಯರ ಸದನದ ಸೃಜಿಸುವುದು ರಾಜಕೀಯ ವಿಷಯವಾಗಿ ಮಾರ್ಪಟಿದೆ. ಮೂರು ದಶಕಗಳ ಹಿಂದೆ ಎಐಡಿಎಂಕೆ ನೇತೃತ್ವದ ಸರ್ಕಾರ ವಿಧಾನಪರಿಷತ್ ರದ್ದು ಮಾಡಿತ್ತು. ಬಳಿಕ ಡಿಎಂಕೆ ಮತ್ತೆ ಸೃಷ್ಟಿಸಲು ಮುಂದಾಗಿತ್ತು. ಆದರೆ ಎಐಡಿಎಂಕೆ ಪಕ್ಷ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮೊನ್ನೆ ನಡೆದ ಚುನಾವಣೆಯಲ್ಲಿ ಡಿಎಂಕೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಪುನಃ ಹಿರಿಯರ ಸದನ ಸೃಷ್ಟಿಸುವ ವಿಷಯ ಪ್ರಸ್ತಾಪಿಸಿತ್ತು. ಅದರಂತೆ ಈಗ ಡಿಎಂಕೆ ಪಕ್ಷವೇ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳದ ಬಳಿಕ ತಮಿಳುನಾಡಿನಲ್ಲೂ ಕೂಡ ಹಿರಿಯರ ಸದನ ನಿರ್ಮಾಣವಾದರೆ ಅಚ್ಚರಿ ಇಲ್ಲ.

ಆಂಧ್ರಪ್ರದೇಶದಲ್ಲಿ ಕೂಡ ಹಿರಿಯರ ಸದನ  ವಿಚಾರದಲ್ಲಿ ರಾಜಕೀಯ ಮೇಲಾಟಗಳು ನಡೆಯುತ್ತಲೇ ಇವೆ. ಪ್ರಸ್ತುತ ವೈಎಸ್‌ಆರ್‌ಸಿಪಿ ಪಕ್ಷ ಹಿರಿಯರ ಸದನವನ್ನು ರದ್ದುಗೊಳಿಸುವ ನಿರ್ಣಯವನ್ನು ಪಾಸ್ ಮಾಡಿದೆ.

click me!