ರಾಷ್ಟ್ರೀಯ ಯೂತ್ ಕಾಂಗ್ರೆಸ್‌ಗೆ ಕನ್ನಡಿಗ ಶ್ರೀನಿವಾಸ್ ಸಾರಥ್ಯ

By Suvarna NewsFirst Published Nov 4, 2020, 12:17 AM IST
Highlights

ಕನ್ನಡಿಗ ಶ್ರೀನಿವಾಸ್ ಗೆ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ/ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಿಟ್ಟಿಸಿದ ನಾಯಕ/ ಮಾಡಿದ ಪ್ರತಿಭಟನೆಗಳಿಗೆ ಲೆಕ್ಕವೇ ಇಲ್ಲ/ ನಿರಂತರ ಶ್ರಮದಿಂದ ಹುದ್ದೆ ಪಡೆದುಕೊಂಡ ವ್ಯಕ್ತಿ

ಡೆಲ್ಲಿ ಮಂಜು

ನವದೆಹಲಿ (ನ.03)- ಬೆನ್ನ ಮೇಲೆ ಬಿದ್ದ ಪೊಲೀಸ್ ಏಟಿಗೆ ಲೆಕ್ಕವಿಲ್ಲ.. ವಿರೋಧಿ ಧ್ವನಿ ಎತ್ತಿ, ಹೋಗದ ಪೊಲೀಸ್ ಠಾಣೆ ಇಲ್ಲ.. ಇಂಡಿಯಾದಲ್ಲಿ ಸುತ್ತದ ಪ್ರಾಂತ್ಯವಿಲ್ಲ.. ಪೊಲೀಸ್ ಕೇಸ್ ದಾಖಲಾಗದ ರಾಜ್ಯವೂ ಇಲ್ಲ..! - ಈ ಮಾತಿನ ಅನ್ವರ್ಥ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಶ್ರೀನಿವಾಸ್.

ಅದು ಡೆಲ್ಲಿಯ ಜಂತರ್ ಮಂತರ್ ಗಲ್ಲಿ ಇರಲಿ ಅಥವಾ ಪ್ರಧಾನಿಯ ನಿವಾಸವಿರುವ ರೇಸಿನಾ ಹಿಲ್ಸ್ ಇರಲಿ ಅಲ್ಲೊಂದು ಕಾಂಗ್ರೆಸ್ ಕೂಗು ಕೇಳಬೇಕು ಅಂದರೆ ಅಲ್ಲಿಗೆ ಶ್ರೀನಿವಾಸ್ ಬರಬೇಕು ಅನ್ನುವ ಮಟ್ಟಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಬೆಳೆದುಬಿಟ್ಟಿದ್ದಾರೆ. ದಕ್ಷಿಣ ಇಂಡಿಯಾದಿಂದ ಬಂದು ಈ ಉತ್ತರ ಇಂಡಿಯಾದಲ್ಲಿ (ಡೆಲ್ಲಿಯಲ್ಲಿ) ನೆಲಕಂಡುಕೊಳ್ಳುವುದು ಅದರಲ್ಲೂ ರಾಜಕೀಯದ ನೆಲೆ ಕಂಡುಕೊಳ್ಳುವುದು ಕಷ್ಟದ ಕೆಲಸ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳೋದಾದರೆ ಕಾಂಗ್ರೆಸ್‍ನಂಥ ರಾಷ್ಟ್ರೀಯ ಪಕ್ಷದ ಸಂಘಟನೆಯ ವಿಭಾಗದಲ್ಲಿ ಹುದ್ದೆ ಗಿಟ್ಟಿಸೋದು ಸುಲಭದ ಮಾತಲ್ಲ.

ಉಪಚುನಾವಣೆ ನಂತರ ಸೋಲು ಗೆಲುವಿನ ಲೆಕ್ಕಾಚಾರ ಶುರು

120 ಕೇಸ್ : ಶ್ರೀನಿವಾಸ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿ ಹೆಚ್ಚು ಕಮ್ಮಿ 18 ತಿಂಗಳು ಆಗಿರಬೇಕು.  ಡೆಲ್ಲಿಯಲ್ಲಿ ಒಮ್ಮೆ ಇಂಥ ಪವರ್ ಕುರ್ಚಿ ಸಿಕ್ಕಿದ್ರೆ ಸಾಮಾನ್ಯಕ್ಕೆ ಜಂತರ್ ಮಂತರ್ ಪ್ರತಿಭಟನೆಗಳಿಗೆ ಮೀಸಲಾಗಿ ಬಿಡ್ತಾರೆ. ಅದರೆ ಶಿವಮೊಗ್ಗದ ಈ ಯುವ ಕಾಂಗ್ರೆಸ್ಸಿಗ ಶ್ರೀನಿವಾಸ್ ಇಂಡಿಯಾದ ಎಲ್ಲಾ ರಾಜ್ಯಗಳನ್ನು ಸುತ್ತುವ ಮೂಲಕ ರಿಯಲ್ ಕಾರ್ಯಕರ್ತ ಅನ್ನಿಸಿಕೊಂಡು, ಕೇಸ್‍ಗಳ ಮೇಲೆ ಕೇಸ್ ಹಾಕಿಸಿಕೊಂಡಿದ್ದಾರೆ. 

ಅದು ಉತ್ತರ ಪ್ರದೇಶ ಇರಲಿ, ಬಿಹಾರ್ ಆಗಿರಲಿ ಅಥವಾ ಛತ್ತೀಸ್‍ಗಢ ಇರಲಿ, ಮಧ್ಯಪ್ರದೇಶ ಆಗಿರಲಿ ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡುವುದೇ, ಪೊಲೀಸರಿಂದ ಕೇಸ್ ಹಾಕಿಸಿಕೊಳ್ಳುವುದೇ. ಹೀಗೆ ಪ್ರ್ರತಿಭಟನೆಯ ಭಾಗವಾಗಿಯೇ ಇರುವ ಶ್ರೀನಿವಾಸ್, ಯಾವ ರಾಜ್ಯಕ್ಕೆ ಹೋದರೂ ಅಲ್ಲೊಂದು ಕೇಸ್ ಇದೆ ಎನ್ನುವಂತಾಗಿದೆ. ಈ ಕೇಸುಗಳ ಸಂಖ್ಯೆ ಹೆಚ್ಚುಕಮ್ಮಿ ಈಗ 120ಕ್ಕೆ ಬಂದು ನಿಂತಿವೆ. 

ಕೊರೋನಾ ಸೋಂಕು ಮತ್ತು ಲಾಕ್‍ಡೌನ್ ಈ ಯುವ ಕಾಂಗ್ರೆಸ್ಸಿಗನಿಗೆ ಮತ್ತಷ್ಟು ಕೆಲಸ ಕೊಡ್ತು ಅನ್ನಿಸುತ್ತೆ. ಲಾಕ್‍ಡೌನ್ ಘೋಷಣೆಯಾದ ಕೂಡಲೇ ಸಾವಿರಾರು ಮಂದಿ ನಡೆದುಕೊಂಡೇ ಊರಿಗೆ ಹೋಗ್ತಿವಿ ಅನ್ನೋಕೆ ಶುರುವಾದರು. ತಮ್ಮ ಹಳ್ಳಿ ಸಾವಿರ ಕಿಲೋಮೀಟರ್ ಇರಲಿ ನಡೆದೇ ಹೋಗ್ತಿವಿ ಅಂಥ ಕಾರ್ಮಿಕರು, ಬಡವರು, ಕೂಲಿಕಾರ್ಮಿಕರು ರಸ್ತೆಗೆ ಇಳಿದ್ರು. ಎರಡು ದಿನವಾಗಲಿ ಇಲ್ಲೇ ಇದ್ದಕೊಂಡು ರೈಲಿಗೆ ಹೋಗ್ತಿವಿ ಅಂಥ ಪಟ್ಟು ಹಿಡಿದು ರೈಲ್ವೆ ನಿಲ್ದಾಣದ ಮುಂದೆಯೇ ಕೂತಿದ್ದು ಕೂಡ ಈಗ ಇತಿಹಾಸ.

ಇದು ರೈಲ್ವೆ ನಿಲ್ದಾಣ, ಅದು ರೋಡ್, ಇದು ಪ್ರವಾಹದ ಜಾಗ ಅನ್ನದೇ ಹೀಗೆ ಹತ್ತಾರು ಕಡೆ ಸುತ್ತಿ ಲಕ್ಷಾಂತರ ಮಂದಿಗೆ ಊಟದ ಪಾಕೇಟ್, ನೀರಿನ ಬಾಟಲ್ ಕೊಟ್ಟು ಆ ಹೊತ್ತಿನ ಹಸಿವು ನೀಗಿಸುವ ಜೊತೆಗೆ ದಣಿವಾರಿಸಿದ್ದು ಲೆಕ್ಕ ಇಲ್ಲ ಎನ್ನುತ್ತಿದೆ ಶ್ರೀನಿವಾಸ್ ಅವರ ವರ್ಕಿಂಗ್ ಗ್ರಾಫ್.

ಡಿಕೆ ಬ್ರದರ್ಸ್ ಹುಡುಗ;  2011ರಲ್ಲಿ ಕರ್ನಾಟಕ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ದೆಹಲಿಯ ರೈಸಿನಾ ರೋಡ್ ಯೂತ್ ಕಾಂಗ್ರೆಸ್ ಕಚೇರಿಯ ಬಾಗಿಲು ಬಡಿದ ಶ್ರೀನಿವಾಸ್, ಹೋಗಿ ಕೂತಿದ್ದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯ ನೇರವಾಗಿ ರಾಹುಲ್ ಗಾಂಧಿ ಅವರು ನಡೆಸುವ ಸಂದರ್ಶನಕ್ಕೆ.

ಜಂತರ್ ಮಂತರ್ ನಲ್ಲಿ ಕೂಗಾಟ, ಪೊಲೀಸ್ ಠಾಣೆಗಳಲ್ಲಿ ಹೆಣಗಾಟ ಎಲ್ಲವೂ ಕಂಡು, ಕೇಳಿದ್ದ ರಾಹುಲ್ ಗಾಂಧಿ, ಯೂತ್ ಕಾಂಗ್ರೆಸ್ ಪದಾಧಿಕಾರಿ ಅಂದರೆ ಕಾರ್ಯದರ್ಶಿಯಾಗಿ ಮಾಡಿದರು. ನಂತರ ಮೂರ್ನಾಲ್ಕು ವರ್ಷಗಳಲ್ಲೇ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಹೀಗೆ 14 ವರ್ಷ ಡೆಲ್ಲಿಯಲ್ಲಿ ಕೆಲಸ ಮಾಡಿ ಅಂತಿಮವಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ಗಿಟ್ಟಿಸಿಕೊಂಡರು.

ಸಾಮಾನ್ಯಕ್ಕೆ ರಾಷ್ಟ್ರಮಟ್ಟದ ಸಂಘಟನೆಗಳಲ್ಲಿ ಜಾಗ ಗಿಟ್ಟಿಸೋದು ಸುಲಭದ ಮಾತಲ್ಲ. ಇಂಥ ಕಡೆ ಯಾರೋ ಸಂಸದರ ಮಕ್ಕಳೋ, ಸಚಿವರಗಳ ಮಕ್ಕಳೋ ಜಾಗ ಹುಡುಕಿಕೊಂಡು ಬಂದು ಕೂರ್ತಾರೆ. ಕೆಲಸದಿಂದಲೇ ಯಶಸ್ಸು ಗಿಟ್ಟಿಸಿದ್ದ ಶ್ರೀನಿವಾಸ್‍ಗೆ ಅಧ್ಯಕ್ಷ ಹುದ್ದೆ ಸೀದಾಸದಾ ಒಲಿದು ಬಂತು. ಯೂತ್ ಕಾಂಗ್ರೆಸ್ ಶ್ರೀನಿವಾಸ್ ಎಂದು ಕಾರ್ಯಕರ್ತರ ನಡುವೆ ಹೆಸರು ಮಾಡಿರುವ ಶ್ರೀನಿವಾಸ್ ಗಾಡ್ ಫಾದರ್ ತರ ನಿಂತವರು ಡಿಕೆ ಬ್ರದರ್ಸ್. ಒಂದು ಅರ್ಥದಲ್ಲಿ ಈ ಬ್ರದರ್ಸ್‍ನ ಬ್ಲ್ಯೂ ಬಾಯ್ ಕೂಡ.

ಯೂತ್ ಕಾಂಗ್ರೆಸ್‍ನಲ್ಲಿ ಕರ್ನಾಟಕದಿಂದ ಕೆಲಸ ಮಾಡಿದವರು ತುಂಬಾ ಕಡಿಮೆ. ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಬಿಟ್ಟರೇ ಯಾರೂ ಅಧ್ಯಕ್ಷರ ಹುದ್ದೆಗೇರಿಲಿಲ್ಲ. ಶ್ರೀನಿವಾಸ್ ಈ ಸ್ಥಾನ ಗಿಟ್ಟಿಸಿದ ಮೊದಲ ಕನ್ನಡಿಗ ಅಂತಲೂ ಅನ್ನಿಸಿಕೊಂಡಿದ್ದಾರೆ.

ಯುವಪಡೆ ಕಟ್ಟೋದೆ ನನ್ನ ಟಾರ್ಗೆಟ್ : ಹೀಗೆ ಮಾತಿಗೆ ಸಿಕ್ಕ ಶ್ರೀನಿವಾಸ್, ನನ್ನ ಮೊದಲ ಆದ್ಯತೆ ಕರ್ನಾಟಕ ಸೇರಿ ಇಂಡಿಯಾದಲ್ಲಿ ಯೂತ್ ಕಾಂಗ್ರೆಸ್ ಪಡೆ ಕಟ್ಟುವುದು. ಹಾಗಾಗಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಈ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬುವುದೇ ನನ್ನ ಪ್ರಮುಖ ಅಜೆಂಡಾ ಎನ್ನುತ್ತಾರೆ. 

ಇಬ್ಬರೂ ಕನ್ನಡಿಗರು : ಇತ್ತ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಅತ್ತ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಇಬ್ಬರು ಕೂಡ ಕನ್ನಡಿಗರು. ಎರಡು ರಾಷ್ಟ್ರೀಯ ಪಕ್ಷಗಳ ಯೂತ್ ವಿಂಗ್‍ಗಳಲ್ಲಿ ಕನ್ನಡಿಗರು ಒಂದೇ ಅವಧಿಯಲ್ಲಿ ಅಧ್ಯಕ್ಷರಾಗುತ್ತಿರೋದು ಇದೇ ಮೊದಲು..

click me!