ಬೆಂಗಳೂರು(ಜು.02): ಕೊರೋನಾ ವೈರಸ್ ಕಾರಣ ದೇಶದ ಆರ್ಥಿಕತೆಗೆ ದೊಡ್ಡ ಹೊಡೆದ ಬಿದ್ದಿದೆ. ಆದರೆ ಆರೋಗ್ಯ ಕ್ಷೇತ್ರದ ಮೂಲ ಭೂತ ಸೌಲಭ್ಯಗಳನ್ನು ಸುಧಾರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಕಾರಣ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಯಲಹಂಕ ಕೋವಿಡ್ ಆಸ್ಪತ್ರೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ.
undefined
ಹಲವು ಕಾರ್ಯಕ್ರಮಗಳ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ನಿರ್ಮಲಾ ಸೀತಾರಾಮನ್, ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಆರೋಗ್ಯ ಸಂಕಷ್ಟದ ನಡುವೆ ದೇಶ ಆರ್ಥಿಕತೆಯನ್ನು ಸರಿದೂಗಿಸಲು ಕೈಗೊಂಡ ಕ್ರಮಗಳು ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಸೌಲಭ್ಯ ಹೆಚ್ಚಿಸಲು ಕೇಂದ್ರ ನಿರ್ಧಾರಗಳ ಕುರಿತು ವಿವರಣೆ ನೀಡಿದ್ದಾರೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು pic.twitter.com/tWGEw87GZZ
— PIB in Karnataka (@PIBBengaluru)ಆರೋಗ್ಯ ವಲಯದಲ್ಲಿ ಖಾಸಗಿ ವಲಯದ ಬಂಡವಾಳಕ್ಕೆ ಅವಕಾಶ ನೀಡಲಾಗಿದೆ.ಎಂಟು ಮೆಟ್ರೋಪಾಲಿಟನ್ ನಗರಗಳನ್ನು ಹೊರತು ಪಡಿಸಿ ಉಳಿದ ಕಡೆ ಖಾಸಗಿ ಬಂಡವಾಳಕ್ಕೆ ಅವಕಾಶ ನೀಡಲಾಗಿದೆ ಎಂದರು. ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಕೊರೋನಾ ಮೂಲ ಪತ್ತೆ ಮಾಡಿ ನಿಯಂತ್ರಣಕ್ಕೆ ತರಲು ಎಲ್ಲಾ ವ್ಯವಸ್ಥೆಗಳು ಕಾರ್ಯಗತಿಯಲ್ಲಿದೆ ಎಂದರು.
6.3 ಲಕ್ಷ ಕೋಟಿ ರೂ. ಪ್ಯಾಕೇಜ್: ಪ್ರವಾಸೋದ್ಯಮ, ಉದ್ದಿಮೆ, ಆರೋಗ್ಯಕ್ಕೆ ಆದ್ಯತೆ!
ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ:
ಲಾಕ್‌ಡೌನ್ ನಿರ್ಬಂಧ ಕಾರಣ ಜನರು ಆರ್ಥಿಕವಾಗಿ ಬಸವಳಿದಿದ್ದಾರೆ. ಹೀಗಾಗಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದರು. ವಿದ್ಯುತ್ ವಲಯದ ಅಭಿವೃದ್ಧಿಗೂ ಬಜೆಟ್ ನಲ್ಲಿ ಒತ್ತು ಕೊಡಲಾಗಿದೆ.ಮೈನಿಂಗ್ ವಲಯ, ಆರ್ಥಿಕ ವಲಯಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ. ಈ ಮೂಲಕ ಸಮಗ್ರ ಅಭಿವೃದ್ದಿಯತ್ತ ಕೇಂದ್ರದ ಚಿತ್ತ ಹರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೆಟ್ರೋಲಿಯಂ ದರ:
ಪೆಟ್ರೋಲಿಯಂ ದರ ಏರಿಕೆ ಕುರಿತು ಸ್ಪಷ್ಟ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ಇದು ರಾಜ್ಯ ಹಾಗೂ ಕೇಂದ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಕೇಂದ್ರ ಲೆವಿ ನಿಗದಿಪಡಿಸಲಿದೆ. ಆದರೆ ರಾಜ್ಯಗಳಿಗೆ ಸುಂಕ ಹೆಚ್ಚಿಸುವ ಹಾಗೂ ಇಳಿಸುವ ಅವಕಾಶವಿದೆ ಎಂದರು. ಇನ್ನು ಇಂಧರ ದರ ಏರಿಕೆ ನಿಯಂತ್ರಿಸಲು ಜಿಎಸ್‌ಟಿ ಅನ್ವಯ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, ಇಂಧನ ದರ ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರದಿಂದ ಯಾವುದೇ ತಕರಾರಿಲ್ಲ. ಆದರೆ ಇದನ್ನು ಜಿಎಸ್‌ಟಿ ಕೌನ್ಸಿಲ್ ಒಪ್ಪಬೇಕು ಎಂದರು .
ಕೊರೋನಾಗೆ ನಲುಗಿದ ದೇಶಕ್ಕೆ ಆರ್ಥಿಕ ಮದ್ದು, ಪ್ಯಾಕೇಜ್ ಘೋಷಿಸಿದ ನಿರ್ಮಲಾ!.
ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ
ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಕೊರೋನಾ, ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡ ಜನರಿಗೆ ಉಚಿತ ಆಹಾರ ನೀಡಿದೆ. ಮೂರು ಎಲ್‌ಪಿಜಿ ಸಿಲಿಂಡರ್ ವಿತರಣೆ ಮಾಡಲಾಗಿತ್ತು. ಆರ್ಥಿಕ ಹೊಡೆತ ಕಾರಣ ಸೃಷ್ಟಿಯಾಗಿರುವ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿದೆ. ಅತ್ಯಗತ್ಯ ಆಹಾರ ಪದಾರ್ಥಗಳ ರಫ್ತಿಗೆ ಕಡಿವಾಣ ಹಾಕಲಾಗಿದೆ ಎಂದರು.
ಆರ್ಥಿಕ ನೆರವು ಘೋಷಣೆ ಮಾಡಿದ ಕೇಂದ್ರ ಇತ್ತ ದರ ಹೆಚ್ಚಳದಿಂದ ನೆರವಿನ ಅಸಲು ಬಡ್ಡಿ ಪಡೆಯುತ್ತಿದೆ ಅನ್ನೋ ಆರೋಪಕ್ಕೆ ಸೀತಾರಾಮನ್ ಉತ್ತರಿಸಿದ್ದಾರೆ. ಒಂದು ಕಡೆ ಕೊಟ್ಟು ಮತ್ತೊಂದೆಡೆಯಿಂದ ಕಿತ್ತುಕೊಳ್ಳುವ ಅಭ್ಯಾಸ ಕೇಂದ್ರಕ್ಕಿಲ್ಲ. ಬೆಲೆ ಏರಿಕೆಗೆ ಅದರದ್ದೇ ಆದ ಕಾರಣವಿದೆ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲ್ ಡೀಸೆಲ್ ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ. ಹೀಗಾಗಿ ಇವೆಲ್ಲವೂ ಕೇಂದ್ರದ ನಿರ್ಧರಿಸುವ ಬೆಲೆಗಳಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯದ ಜಿಎಸ್‌ಟಿ ಹಣ ತಡೆ ಹಿಡಿದಿಲ್ಲ:
ಯಾವುದೇ ರಾಜ್ಯಗಳಿಗೆ 2020-21ನೇ ಸಾಲಿನಲ್ಲಿ ಜಿಎಸ್ ಟಿ ಬಾಕಿ ವಿತರಣೆ ಮಾಡುವುದಿಲ್ಲ. ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಪ್ರಕಾರ ಸಾಲಗಳನ್ನು ಪಡೆದು ಜಿಎಸ್ ಟಿ ಕೊರತೆ ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೂ ಉತ್ತರ ನೀಡಿದರು. ಕರ್ನಾಟಕಕ್ಕೆ 14 ಹಣಕಾಸು ಆಯೋಗದಿಂದ ಬರಬೇಕಾಗಿದ್ದ 5000ಕೋಟಿ ಗೆ ನಾನು ಅಡ್ಡಿ ಮಾಡಿದೆ ಎಂಬ ಆರೋಪ ಸುಳ್ಳು ಎಂದರು. ರಾಜ್ಯ ಸರ್ಕಾರ ಆದಾಯ ಕೊರತೆ ಪ್ರಮಾಣವನ್ನು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಕರ್ನಾಟಕ ,ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ಬಿಡುಗಡೆ ತಡೆಹಿಡಿಯಲಾಯ್ತು. ಕರ್ನಾಟಕಕ್ಕೆ ಸಮಸ್ಯೆ ಮಾಡವು ಉದ್ದೇಶ ನಮ್ಮದಲ್ಲ. ಸಿದ್ದರಾಮಯ್ಯ ತಪ್ಪು ಮಾಹಿತಿ ಕೊಡಬಾರದು ಎಂದು ಸೀತಾರಾಮನ್ ಹೇಳಿದರು.