ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2!

By Kannadaprabha NewsFirst Published Sep 7, 2020, 7:31 AM IST
Highlights

ಕೊರೋನಾ: ಭಾರತ ನಂ.2| ಸೋಂಕಿನಲ್ಲಿ ಬ್ರೆಜಿಲ್‌ಅನ್ನು ಹಿಂದಿಕ್ಕಿದ ಭಾರತ| ಮೊದಲ ಸ್ಥಾನದಲ್ಲಿ ಅಮೆರಿಕ| ಭಾರತದಲ್ಲಿ 41.93 ಲಕ್ಷ, ಬ್ರೆಜಿಲ್‌ನಲ್ಲಿ 41.23 ಲಕ್ಷ , ಅಮೆರಿಕದಲ್ಲಿ 64 ಲಕ್ಷ ಕೇಸ್‌| ನಿನ್ನೆ ದಾಖಲೆಯ 92406 ಮಂದಿಗೆ ಸೋಂಕು| ಒಟ್ಟು ಸಾವಿನ ಸಂಖ್ಯೆ 71500ಕ್ಕೆ

ನವದೆಹಲಿ(ಸೆ.07): ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇದೀಗ ಒಟ್ಟಾರೆ ಕೊರೋನಾ ಸೋಂಕಿತರ ಪಟ್ಟಿಯಲ್ಲೂ ಎರಡನೇ ಸ್ಥಾನಕ್ಕೆ ಏರಿದೆ. ಭಾನುವಾರ ಭಾರತದಲ್ಲಿ ದಾಖಲೆಯ 92406 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 41.93 ಲಕ್ಷಕ್ಕೆ ಏರಿದೆ. ಈ ಮೂಲಕ 41.23 ಲಕ್ಷ ಸೋಂಕಿತರೊಂದಿಗೆ 2ನೇ ಸ್ಥಾನದಲ್ಲಿದ್ದ ಬ್ರೆಜಿಲ್‌ ಅನ್ನು 3ನೇ ಸ್ಥಾನಕ್ಕೆ ತಳ್ಳಿದೆ. ಇನ್ನು 64.34 ಲಕ್ಷ ಕೇಸುಗಳೊಂದಿಗೆ ಅಮೆರಿಕ ಈಗಲೂ ಮೊದಲ ಸ್ಥಾನದಲ್ಲಿದೆ ಮುಂದುವರೆದಿದೆ.

ಈ ನಡುವೆ ಭಾನುವಾರ 990 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 71586ಕ್ಕೇರಿದೆ. ಇನ್ನು ಸಾವಿನ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲೇ ಮುಂದುವರೆದಿದೆ.

Latest Videos

2020ರ ಜ.30ರಂದು ದೇಶದಲ್ಲಿ ಮೊದಲ ಕೇಸು ದಾಖಲಾಗಿತ್ತು. ಆಗ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 50ಕ್ಕಿಂತ ಮೇಲಕ್ಕಿತ್ತು. ಆದರೆ ನಂತರದಲ್ಲಿ ವಿದೇಶದಿಂದ ಬಂದವರ ಮೂಲಕ ಮತ್ತು ಸ್ಥಳೀಯವಾಗಿ ಹಬ್ಬಿದ ಪ್ರಕರಣಗಳು, ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಲು ಕಾರಣವಾಯ್ತು. ಜೊತೆಗೆ ಪ್ರಸಕ್ತ ನಿತ್ಯವೂ 11 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಪತ್ತೆ ನಡೆಸುತ್ತಿರುವುದು ಕೂಡಾ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗಲು ಕಾರಣವಾಗಿದೆ.

ಮಹಾ ದಾಖಲೆ: ಭಾನುವಾರ ಮಹಾರಾಷ್ಟ್ರದಲ್ಲಿ ಈವರೆಗಿನ ದಾಖಲೆಯ 23,350 ಸೋಂಕು ದಾಖಲಾಗಿದ್ದರೆ, 328 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಆಂಧ್ರಪ್ರದೇಶದಲ್ಲಿ 10,794(70 ಸಾವು), ಕರ್ನಾಟಕ 9319(95 ಮೃತರು), ಉತ್ತರ ಪ್ರದೇಶದಲ್ಲಿ 6518(77 ಸಾವು), ತಮಿಳುನಾಡಿನಲ್ಲಿ 5783(88 ಸಾವು) ಹಾಗೂ ಪಶ್ಚಿಮ ಬಂಗಾಳದಲ್ಲಿ 3087 ಮಂದಿಗೆ ಸೋಂಕು ದೃಢಪಟ್ಟಿದ್ದು, 52 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ ಕೊರೋನಾ ಸಾಗಿಬಂದ ಹಾದಿ

ಮೇ 25: ಇರಾನ್‌ ಹಿಂದಿಕ್ಕಿ 10ನೇ ಸ್ಥಾನ

ಮೇ 28: ಫ್ರಾನ್ಸ್‌ ಹಿಂದಿಕ್ಕಿ 9ನೇ ಸ್ಥಾನ

ಮೇ 29: ಟರ್ಕಿ ಹಿಂದಿಕ್ಕಿ 8ನೇ ಸ್ಥಾನ

ಮೇ 31: ಜರ್ಮನಿ ಹಿಂದಿಕ್ಕಿ 7ನೇ ಸ್ಥಾನ

ಜೂ.5: ಇಟಲಿ ಹಿಂದಿಕ್ಕಿ 6ನೇ ಸ್ಥಾನ

ಜೂ.7: ಸ್ಪೇನ್‌ ಮೀರಿಸಿ 5ನೇ ಸ್ಥಾನ

ಜೂ.8: ಬ್ರಿಟನ್‌ ಹಿಂದಿಕ್ಕಿ 4ನೇ ಸ್ಥಾನ

ಜು.5: ರಷ್ಯಾ ಮೀರಿಸಿ 3ನೇ ಸ್ಥಾನ

ಆ.6: ಬ್ರೆಜಿಲ್‌ ಹಿಂದಿಕ್ಕಿ 2ನೇ ಸ್ಥಾನ

ಅತಿಹೆಚ್ಚು ಸೋಂಕಿತರ ಹೊಂದಿದ ರಾಜ್ಯಗಳು

ರಾಜ್ಯ ಸೋಂಕಿತರ ಸಂಖ್ಯೆ

ಮಹಾರಾಷ್ಟ್ರ 907212

ಆಂಧ್ರಪ್ರದೇಶ 4,63,480

ಕರ್ನಾಟಕ 3,98,551

ಉತ್ತರ ಪ್ರದೇಶ 2,66,283

ದೆಹಲಿ 1,91,449

ಹೆಚ್ಚು ಸಾವು ದಾಖಲಾದ 5 ರಾಜ್ಯಗಳು

ರಾಜ್ಯ ಸಾವಿನ ಸಂಖ್ಯೆ

ಮಹಾರಾಷ್ಟ್ರ 26,604

ತಮಿಳುನಾಡು 7,839

ಕರ್ನಾಟಕ 6,393

ದೆಹಲಿ 4,567

ಆಂಧ್ರಪ್ರದೇಶ 4,417

click me!