ಕೋವಿಡ್-19 ನ ರೂಪಾಂತರ ವೈರಸ್ ಒಮಿಕ್ರಾನ್
ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು
ದೇಶದಲ್ಲಿ ಒಟ್ಟು 2135 ಒಮಿಕ್ರಾನ್ ಪ್ರಕರಣ
ನವದೆಹಲಿ (ಜ.5): ಕೋವಿಡ್-19 ನ ರೂಪಾಂತರ ವೈರಸ್ ಒಮಿಕ್ರಾನ್ ನಿಂದಾಗಿ (Omicron) ಭಾರತದಲ್ಲಿ (India) ಮೊಟ್ಟಮೊದಲ ಸಾವು (Death) ಸಂಭವಿಸಿದೆ. ಅತ್ಯಂತ ವೇಗವಾಗಿ ಹಬ್ಬುತ್ತಿರುವ ಒಮಿಕ್ರಾನ್ ವೈರಸ್ ನಿಂದಾಗಿ ಬುಧವಾರ ರಾಜಸ್ಥಾನದಲ್ಲಿ (Rajasthan) ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಕೂಡ ಇದನ್ನು ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಖಚಿತಪಡಿಸಿದೆ.
ಉದಯ್ ಪುರದ (Udaipur) 73 ವರ್ಷದ ವ್ಯಕ್ತಿ ಲಕ್ಷ್ಮೀನಾರಾಯಣ್ ನಾಗರ್ ಒಮಿಕ್ರಾನ್ ವೈರಸ್ ನಿಂದಾಗಿ ಮೃತಪಟ್ಟವರಾಗಿದ್ದಾರೆ. ಡಿಸೆಂಬರ್ 15 ರಂದು ಕೋವಿಡ್-19 ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀನಾರಾಯಣ್, ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ. ಇವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ (genome sequencing) ಕಳುಹಿಸಲಾಗಿತ್ತು. ಏತನ್ಮಧ್ಯೆ ಡಿಸೆಂಬರ್ 21 ರಂದು ಅವರಿಗೆ ಕೋವಿಡ್ ನೆಗೆಟಿವ್ ಕಂಡುಬಂದಿದೆ. ಡಿಸೆಂಬರ್ 25 ರಂದು ಬಂದ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶದಲ್ಲಿ ವ್ಯಕ್ತಿಯಲ್ಲಿ ಒಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿತ್ತು. ಅದಾದ ಬಳಿಕ ಆರು ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದ ಲಕ್ಷ್ಮೀನಾರಾಯಣ್ ನಾಗರ್, ಬುಧವಾರ ಮಧ್ಯಾಹ್ನ 3.30ರ ವೇಳೆಗೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಈಗಾಗಲೇ ಎರಡು ಬಾರಿ ಲಸಿಕೆ ಪಡೆದುಕೊಂಡಿದ್ದು ಮಾತ್ರವಲ್ಲದೆ, ಹೊರದೇಶಗಳು ಅಥವಾ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ ಆಗೂ ಪ್ರಾಥಮಿಕ ಸಂಪರ್ಕದೊಂದಿಗೆ ಜೊತೆಯಾದ ಉದಾಹರಣೆಗಳಿಲ್ಲ.
ಪ್ರಸ್ತುತ, ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 2,135 ಆಗಿದೆ. ಇಂದು ಮುಂಜಾನೆ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರತದಲ್ಲಿ ಇದುವರೆಗೆ 828 ಓಮಿಕ್ರಾನ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೊಸ ಕೋವಿಡ್-19 ರೂಪಾಂತರದಿಂದ ಹಾನಿಗೊಳಗಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಹಾರಾಷ್ಟ್ರ ಮತ್ತು ದೆಹಲಿ ಅಗ್ರಸ್ಥಾನದಲ್ಲಿವೆ. ಮಹಾರಾಷ್ಟ್ರದಲ್ಲಿ 653 ಒಮಿಕ್ರಾನ್ ಪ್ರಕರಣಗಳಿದ್ದರೆ, ದೆಹಲಿಯ ಒಮಿಕ್ರಾನ್ ಸಂಖ್ಯೆ 464 ಆಗಿದೆ. ರಾಜಸ್ಥಾನದಲ್ಲಿ 174 ಒಮಿಕ್ರಾನ್ ಸೋಂಕುಗಳು ಪತ್ತೆಯಾಗಿವೆ, ಅವರಲ್ಲಿ 88 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ.
Covid outbreak : ಮಂಡ್ಯ ಸರ್ಕಾರಿ ಶಾಲೆಯಲ್ಲಿ ಕೋವಿಡ್ ಸ್ಫೋಟ
"ಭಾರತದಲ್ಲಿ ಒಂದೇ ದಿನ 58,097 ಕೋವಿಡ್ ಪ್ರಕರಣಗಳ ಏರಿಕೆಯಾಗಿದೆ. ಹಿಂದಿನ ದಿನಗಳಲ್ಲಿ ಒಟ್ಟು 20,718 ರಷ್ಟು ಏರಿಕೆಯಾಗಿದೆ ಮತ್ತು 24 ಗಂಟೆಗಳ ಅವಧಿಯಲ್ಲಿ 534 ಸಾವುಗಳು ಸಂಭವಿಸಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
Omicron Crisis in Karnataka : ರಾಜ್ಯದಲ್ಲಿ ಒಮಿಕ್ರೋನ್ ಸ್ಫೋಟ : ಸೋಂಕು ಭಾರಿ ಏರಿಕೆ
ಇನ್ನು ಕರ್ನಾಟಕದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಮಟ್ಟದ ಏರಿಕೆ ಕಂಡು ಬಂದಿದೆ. ಮಂಗಳವಾರ ಒಂದೇ ದಿನ 149 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಒಮಿಕ್ರೋನ್ ಸೋಂಕಿತರ ಸಂಖ್ಯೆ 226ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಬೆಂಗಳೂರು ನಗರದಲ್ಲಿ ಒಂದೇ ದಿನ ಮೂರು ಸಾವಿರ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Sudhakar) ತಿಳಿಸಿದ್ದಾರೆ. ರಾಜ್ಯದಲ್ಲಿ ಡಿ.1ರಿಂದ ಜನವರಿ 3ವರೆಗೂ 77 ಒಮಿಕ್ರೋನ್ ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ ಒಂದೇ ದಿನ 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಒಂದೇ ದಿನ 23 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿತರ ಮಾಹಿತಿ ಆರೋಗ್ಯ ಇಲಾಖೆ (Health Department) ಬಹಿರಂಗ ಪಡಿಸಿಲ್ಲ. ಹೊಸದಾಗಿ 149 ಪ್ರಕರಣಗಳು ಪತ್ತೆಯಾಗಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.