
ದೆಹಲಿ (ಸೆ.10): ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ದೇಶದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಪ್ರಮುಖ ಹುದ್ದೆಗಳಲ್ಲಿ ಉಪರಾಷ್ಟ್ರಪತಿ ಹುದ್ದೆಯೂ ಒಂದು. ರಾಜ್ಯಸಭೆಯ ಅಧ್ಯಕ್ಷರು ಮತ್ತು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಉಪರಾಷ್ಟ್ರಪತಿಯದ್ದು. ರಾಜ್ಯಸಭಾ ಅಧ್ಯಕ್ಷ ಸ್ಥಾನವೂ ಉಪರಾಷ್ಟ್ರಪತಿಯವರೇ.
ಭಾರತದ ಉಪರಾಷ್ಟ್ರಪತಿಗೆ ಸಿಗುವ ಸಂಬಳ ಮತ್ತು ಇತರ ಸವಲತ್ತುಗಳ ಬಗ್ಗೆ ನಿಮಗೆ ಗೊತ್ತಾ? ಉಪರಾಷ್ಟ್ರಪತಿಗೆ ಪ್ರತ್ಯೇಕ ಸಂಬಳವಿಲ್ಲ. ಬದಲಾಗಿ, ರಾಜ್ಯಸಭಾ ಅಧ್ಯಕ್ಷರಾಗಿ ಮಾಸಿಕ 4 ಲಕ್ಷ ರೂ. ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸಿಗಲಿದೆ. ಇದಲ್ಲದೆ, ಐಷಾರಾಮಿ ನಿವಾಸ, ಸರ್ಕಾರಿ ಬುಲೆಟ್ ಪ್ರೂಫ್ ಕಾರು, Z+ ಭದ್ರತೆ, ದೇಶ-ವಿದೇಶಗಳಲ್ಲಿ ಉಚಿತ ಪ್ರಯಾಣ, ವೈದ್ಯಕೀಯ ಸೌಲಭ್ಯ, ದಿನಭತ್ಯೆ ಸೇರಿದಂತೆ ಹಲವು ಸವಲತ್ತುಗಳು ಅವರಿಗೆ ಲಭ್ಯ. ನಿವೃತ್ತಿಯ ನಂತರ ಮಾಸಿಕ ಸಂಬಳದ ಅರ್ಧದಷ್ಟು ಅಂದರೆ 2 ಲಕ್ಷ ರೂ. ಪಿಂಚಣಿ ಸಿಗಲಿದೆ.
ಇದರ ಜೊತೆಗೆ ರಾಷ್ಟ್ರಪತಿ ಅನುಪಸ್ಥಿತಿಯಲ್ಲಿ, ಉಪರಾಷ್ಟ್ರಪತಿಯು ಒಂದು ವೇಳೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರೆ, ಆ ಅವಧಿಯಲ್ಲಿ ರಾಷ್ಟ್ರಪತಿಯ ಸಂಬಳ (ಮಾಸಿಕ 5 ಲಕ್ಷ ರೂ.) ಮತ್ತು ಅವರಿಗೆ ಸಿಗುವಂತಹ ಎಲ್ಲ ಸೌಲಭ್ಯಗಳು ಸಿಗಲಿವೆ.
ಉಪರಾಷ್ಟ್ರಪತಿ/ರಾಜ್ಯಸಭಾ ಸ್ಪೀಕರ್ ಸಂಬಳ: 4 ಲಕ್ಷ ರೂ.
ನಿವೃತ್ತಿ ನಂತರ ಪಿಂಚಣಿ: 2 ಲಕ್ಷ ರೂ.
ಪ್ರಯಾಣ ಸೌಲಭ್ಯ: ವಿದೇಶಗಳಲ್ಲಿ ಉಚಿತವಾಗಿ ಪ್ರಯಾಣ (ಸರ್ಕಾರ ಭರಿಸುತ್ತದೆ)
ವಾಸ ಸೌಲಭ್ಯ: ಸರ್ಕಾರಿ ಬಂಗಲೆ ಮತ್ತು ಬುಲೆಟ್ ಪ್ರೂಫ್ ಕಾರು
RSS ಕಟ್ಟಾಳು, ಬಿಜೆಪಿ ಕಟ್ಟಿಬೆಳೆಸಿದ ಸಿಪಿ ರಾಧಾಕೃಷ್ಣನ್ ಭಾರತದ 15ನೇ ಉಪ ರಾಷ್ಟ್ರಪತಿ
ಇನ್ನು ಇತ್ತೀಚೆಗೆ ನಡೆದ ಉಪ ರಾಷ್ಟ್ರಪತಿ ಚುನಾವಣೆಗೆ ಒಟ್ಟು 767 ಸಂಸದರು ಮತ ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ರಾಧಾಕೃಷ್ಣನ್ ಅವರಿಗೆ 452 ಮತಗಳು ಬಿದ್ದವು. ವಿಪಕ್ಷಗಳ ಅಭ್ಯರ್ಥಿ, ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿ. ಸುಧರ್ಶನ್ ರೆಡ್ಡಿ ಅವರಿಗೆ 300 ಮತಗಳು ಲಭಿಸಿದವು.
ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಸೇವೆ: ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಇದೇ ರಾಧಾಕೃಷ್ಣನ್‌ಗೆ ಇದೆ. 2004 ರಿಂದ 2007ರ ವರೆಗೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ತಳಹಂತದಿಂದ ಬಿಜೆಪಿ ಕಟ್ಟಿದ್ದಾರೆ. ತಮಿಳುನಾಡಿನಲ್ಲಿ ದ್ರಾವಿಡ್ ರಾಜಕೀಯ ನಡುವೆ ಹಿಂದುತ್ವದ ರಾಜಕೀಯ ಪಸರಿಸಿದ ಸಿಪಿ ರಾಧಾಕೃಷ್ಣನ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಇನ್ನು ಅವರು ಎಲ್ಲಿಯೂ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಬಿಜೆಪಿ ವಿರುದ್ಧ, ಆರ್‌ಎಸ್ಎಸ್ ವಿರುದ್ದ, ಹಿಂದುತ್ವದ ವಿರುದ್ಧ ವಿವಾದಾತ್ಮಕ ಹೇಳಿಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಆದರೆ ಎಲ್ಲೂ ವಿವಾದಿತ ಹೇಳಿಕೆ ನೀಡಿಲ್ಲ. ನೂತನ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತ ಬಿಜೆಪಿ ನಾಯಕರು, ಸೇರಿದಂತೆ ಹಲವರು ಹೊಸ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ