Covid death ಭಾರತ ಹೇಳಿದ್ದು 4 ಲಕ್ಷ, WHO ವರದಿ 40 ಲಕ್ಷ, ಕೋವಿಡ್ ಸಾವಿನಲ್ಲಿ ತಪ್ಪು ಮಾಹಿತಿ ನೀಡಿತಾ ಕೇಂದ್ರ?

By Suvarna NewsFirst Published Apr 29, 2022, 6:36 PM IST
Highlights
  • 4ನೇ ಅಲೆ ಭೀತಿ ನಡುವೆ ಕೊರೋನಾ ಸಾವಿನ ವರದಿ ಚರ್ಚೆ
  • ವಿಶ್ವ ಆರೋಗ್ಯ ಸಂಸ್ಥೆ ವರದಿ, ಭಾರತದ ವರದಿಯಲ್ಲಿ ವ್ಯತ್ಯಾಸ
  • ಯಾವುದು ನಿಜ, ಗೊಂದಲ ಯಾಕೆ, ಇಲ್ಲಿದೆ ಉತ್ತರ
     

ನವದೆಹಲಿ(ಏ.29): ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಕೋವಿಡ್ ಸಾವಿನ ವರದಿ ನೀಡಲು ಸಜ್ಜಾಗಿದೆ. ಈ ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಭಾರತ ಕೋವಿಡ್ ಸಾವಿನ ಅಂದಾಡು ವರದಿ ತಯಾರಿಸುವ ವಿಧಾನವನ್ನು ತಪ್ಪಾಗಿ ಆರ್ಥೈಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡೇಟಾ ಅನಾಲಿಸ್ಟ್ ಮೆಕ್ ಫೀಲಿ ಹೇಳಿದ್ದಾರೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ನಾಂದಿ ಹಾಡಿದೆ.

ಕೊರೋನಾವೈರಸ್ ಆಕ್ರಮಣಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ ಇದೀಗ ಭಾರತ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ. ಹಲವು ದೇಶದಲ್ಲಿ ಕೋವಿಡ್ ಸಾವನ್ನು ನೋಂದಾಯಿಸುವಲ್ಲಿ ತಪ್ಪಾಗಿದೆ. ಹೀಗಾಗಿ ಅಧಿಕೃತ ದಾಖಲೆಗಿಂತ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಮೆಕ್ ಫೀಲಿ ಹೇಳಿದ್ದಾರೆ. 

Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

ವಿಶ್ವ ಆರೋಗ್ಯ ಸಂಸ್ಥೆ 194 ಸದಸ್ಯ ರಾಷ್ಟ್ರಗಳ ಪೈಕಿ ಕೋವಿಡ್ ಸಾವಿನ ವರದಿ ಆಕ್ಷೇಪಣೆ ಸಲ್ಲಿಸಿದ ಏಕೈಕ ರಾಷ್ಟ್ರ ಭಾರತವಾಗಿದೆ. ಭಾರತದ ಆಕ್ಷೇಪಣೆಗೆ ಟಿಪ್ಪಣಿ ಸಹಿತ ವಿವರಣೆ ನೀಡಿ ವರದಿ ಬಹಿರಂಗಗೊಳಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೇ ತಿಂಗಳ ಆರಂಭದ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ಸಾವಿನ ವರದಿ ಬಿಡುಗಡೆಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ 40 ಲಕ್ಷ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದಿದೆ. ಭಾರತ ತನ್ನವರದಿಯಲ್ಲಿ ಕೋವಿಡ್‌ನಿಂದ 4.8 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದಿದೆ.

ಭಾರತದ ವಿರೋಧ ಯಾಕೆ?
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಸ್ಪಷ್ಟ ವರದಿಯನ್ನು ಸದಸ್ಯ ರಾಷ್ಟ್ರಗಳು ಒಪ್ಪಿಕೊಳ್ಳಲೇಬೇಕು ಅನ್ನೋದು ತಪ್ಪು ಎಂದು ಭಾರತ ಹೇಳಿದೆ. ವರದಿಯಲ್ಲಿ ಸತ್ಯಾಸತ್ಯತೆ ಇಲ್ಲ.ವರದಿ ತಯಾರಿಸಿದ ವಿಧಾನ ಸರಿ ಇಲ್ಲ. ಅಸ್ಪಷ್ಟ ವರದಿಯನ್ನು ಭಾರತ ಅಕ್ಷೇಪಿಸುತ್ತದೆ ಎಂದಿದೆ. 

ಜಗತ್ತಿನಲ್ಲಿ ಕೊರೋನಾ ಸೋಂಕಿನಿಂದ 2021ರ ಅಂತ್ಯದ ವೇಳೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯನ್ನು ಬಿಡುಗಡೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಂದಾಗಿದ್ದು, ಅದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

Covid 4th Wave: ಬೂಸ್ಟರ್‌ ಡೋಸ್‌ ಅಂತರ ಶೀಘ್ರ 6 ತಿಂಗಳಿಗೆ ಇಳಿಕೆ ಸಾಧ್ಯತೆ

ವಿವಿಧ ದೇಶಗಳು ನೀಡಿರುವ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊರೋನಾದಿಂದ 2021ರ ಅಂತ್ಯಕ್ಕೆ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹಾಗೂ ಜಾಗತಿಕ ಮಟ್ಟದ ಕೆಲ ಗಣಿತಜ್ಞರು ಹೊಸ ವಿಧಾನದ ಮೂಲಕ ಜಗತ್ತಿನಲ್ಲಿ ಸಂಭವಿಸಿದ ಕೋವಿಡ್‌ ಸಾವಿನ ವರದಿ ಸಿದ್ಧಪಡಿಸಿದ್ದು, ಅದರಲ್ಲಿ 1.5 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂಬ ಫಲಿತಾಂಶ ಬಂದಿದೆ. ಈ ವರದಿಯಲ್ಲಿ ಭಾರತವೊಂದರಲ್ಲೇ 40 ಲಕ್ಷ ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ನಮೂದಿಸಲಾಗಿದೆ ಎಂದು ಭಾರತಕ್ಕೆ ತಿಳಿದುಬಂದಿದೆ. ಆದರೆ, ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿ 5.2 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಲೆಕ್ಕಾಚಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಬಳಸಿದ ವಿಧಾನವೇ ತಪ್ಪಾಗಿದೆ ಎಂದು ಭಾರತ ಸರ್ಕಾರ ಆಕ್ಷೇಪಿಸಿದೆ. ಆ ಕಾರಣದಿಂದ ನಾಲ್ಕು ತಿಂಗಳಿನಿಂದ ವರದಿ ಬಿಡುಗಡೆಯಾಗದೆ ಬಾಕಿಯುಳಿದಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

‘ಸಾವಿನ ಲೆಕ್ಕಾಚಾರಕ್ಕೆ ಡಬ್ಲ್ಯುಎಚ್‌ಒ ಅನುಸರಿಸಿದ ಪ್ರಕ್ರಿಯೆ ಹಾಗೂ ದೇಶಗಳ ಅಭಿಪ್ರಾಯಕ್ಕೆ ನೀಡಿದ ಮನ್ನಣೆ ಸೂಕ್ತವಾಗಿಲ್ಲ. ಲೆಕ್ಕಾಚಾರದ ವಿಧಾನಕ್ಕೆ ವೈಜ್ಞಾನಿಕ ಆಧಾರವಿಲ್ಲ. ಇದು ಡಬ್ಲ್ಯುಎಚ್‌ಒದಂತಹ ಘನತೆಯುಳ್ಳ ಸಂಸ್ಥೆಯಿಂದ ನಿರೀಕ್ಷಿಸುವ ಗುಣಮಟ್ಟವಲ್ಲ’ ಎಂದು ಭಾರತ ಆಕ್ಷೇಪಿಸಿದೆ ಎಂದು ವಿಶ್ವ ಸಂಸ್ಥೆಯ ಸಂಖ್ಯಾಶಾಸ್ತ್ರ ಆಯೋಗ ಹೇಳಿದೆ.
 

click me!