ಭಾರತದಲ್ಲಿ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದರೆ ವಿದೇಶಗಳಲ್ಲಿ ಕೋವಿಡ್ ಸ್ಥಿತಿಗತಿ ಕೈಮೀರಿದೆ. ಹೀಗಾಗಿ ಭಾರತದಲ್ಲಿ ಮಂದಿನ 40 ದಿನ ಅತ್ಯಂತ ಮಹತ್ವದ್ದಾಗಿದೆ.
ನವದೆಹಲಿ(ಡಿ.28): ಭಾರತದಲ್ಲಿ ಕೋವಿಡ್ ಸ್ಫೋಟಗೊಳ್ಳಲಿದೆ ಅನ್ನೋ ಎಚ್ಚರಿಕೆ ಸಂದೇಶ ಬಂದಿದೆ. ಮುಂದಿನ 40 ದಿನ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಜನವರಿ ಮಧ್ಯಬಾಗದಿಂದ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಪೂರ್ವ ಏಷ್ಯಾದಲ್ಲಿ ಕೋವಿಡ್ ಸ್ಫೋಟಗೊಂಡ 30 ರಿಂದ 35 ದಿನಗಳ ಬಳಿಕ ಭಾರತದಲ್ಲಿ ಕೋವಿಡ್ ಅಲೆ ಸೃಷ್ಟಿಯಾಗಿತ್ತು. ಕಳೆದೆರಡು ಅಲೆಗಳು ಇದೇ ಅಂತರದಲ್ಲಿ ಕಾಣಿಸಿಕೊಂಡಿದೆ. ಈ ಬಾರಿಯ ಭಾರತದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿರುವ ಕಾರಣ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆಗೆ 40 ರಿಂದ 45 ದಿನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಮುಂಜಾಗ್ರತೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಕೋವಿಡ್ ಸ್ಫೋಟಗೊಂಡರೂ ಮತ್ತೊಂದು ಕೋವಿಡ್ ಅಲೆ ಸೃಷ್ಟಿಯಾದರೂ ಆತಂಕವಿಲ್ಲ. ಈ ಹಿಂದಿನ ಪರಿಸ್ಥಿತಿ ಭಾರತಕ್ಕೆ ಎದುರಾಗುವುದಿಲ್ಲ. ಮೈಲ್ಡ್ ಸಿಂಪ್ಟಮ್ಸ್ ಇರಲಿದೆ. ಆಸ್ಪತ್ರೆ ದಾಖಲಾಗುವ ಸಂಖ್ಯೆ ಕಡಿಮೆ ಇರಲಿದೆ. ಹೀಗಾಗಿ ಭಾರತದಲ್ಲಿ ಅಪಾಯದ ತೀವ್ರತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.
undefined
ಕೋವಿಡ್ ಸ್ಫೋಟ, ಚೀನಾ ಸೇರಿ 7 ರಾಷ್ಟ್ರಗಳ ಪ್ರಯಾಣದಿಂದ ದೂರವಿರಿ!
ಭಾರತದಲ್ಲಿ ಕೋವಿಡ್‌ನಿಂದ ಸೃಷ್ಟಿಯಾಗುವ ಅಪಾಯದ ತೀವ್ರತೆ ಕಡಿಮೆ ಇರಲಿದೆ. ಅತ್ಯುತ್ತಮ ಲಸಿಕೆ, ಭಾರತೀಯರ ರೋಗ ನಿರೋಧಕ ಶಕ್ತಿ, ವಾತಾವರಣವೂ ಇದಕ್ಕೆ ಪೂರಕವಾಗಲಿದೆ. ಹೀಗಾಗಿ ಕೋವಿಡ್ ವಿರುದ್ಧ ಹೋರಾಡಬಲ್ಲ ಶಕ್ತಿ ಭಾರತಕ್ಕಿದೆ. ಇನ್ನು ಆರೋಗ್ಯ ಕ್ಷೇತ್ರದಲ್ಲೂ ಭಾರತದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಎದುರಿಸುವುದು ಅತೀ ದೊಡ್ಡ ಸವಾಲಲ್ಲ ಎಂದು ತಜ್ಞರು ಹೇಳಿದ್ದಾರೆ.
ವಿದೇಶದಿಂದ ರಾಜ್ಯಕ್ಕೆ ಬಂದ 19 ಪ್ರಯಾಣಿಕರಿಗೆ ಕೋವಿಡ್
ಚೀನಾದಲ್ಲಿ ಕೋವಿಡ್ ಅಬ್ಬರಿಸುತ್ತಿರುವ ನಡುವೆಯೇ ಪ್ರಸಕ್ತ ತಿಂಗಳಲ್ಲಿ ವಿದೇಶಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದವರ ಪೈಕಿ ಒಟ್ಟು 19 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ವಿದೇಶಗಳಿಂದ 3,281ಕ್ಕೂ ಅಧಿಕ ಮಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿಂದೆ ಶೇ.2ರಷ್ಟುಪ್ರಯಾಣಿಕರಿಗೆ ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಕೇಂದ್ರ ಸರ್ಕಾರದ ಸೂಚನೆ ಬಳಿಕ ನಿಗದಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರೆಲ್ಲರಿಗೂ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ 8 ಮಂದಿ ಸೇರಿದಂತೆ ಪ್ರಸಕ್ತ ತಿಂಗಳಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ. ಎಲ್ಲಾ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಮಾಹಿತಿ ನೀಡಿದ್ದಾರೆ.
ಸೋಂಕು ದೃಢಪಟ್ಟವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಸೋಮವಾರದಿಂದ ಹಾಸಿಗೆ ಮೀಸಲಿಡಲಾಗಿದೆ. ಆದರೆ, ಬಹುತೇಕರ ಸೋಂಕಿತರು ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೂ ಬೌರಿಂಗ್ ಆಸ್ಪತ್ರೆಗೆ ಯಾರೊಬ್ಬರೂ ದಾಖಲಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ವಾರ 1,103ರಷ್ಟಿದ್ದ ಕೋವಿಡ್ ಕೇಸುಗಳ ಪ್ರಮಾಣ ಈ ವಾರ 1,219ಕ್ಕೆ ಏರಿಕೆಯಾಗಿದ್ದು, ಪ್ರಕರಣಗಳ ಪ್ರಮಾಣದಲ್ಲಿ ಶೇ.11ರಷ್ಟುಏರಿಕೆ ದಾಖಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾಗಿ ಹೆಚ್ಚು ಕೇಸುಗಳು ದಾಖಲಾಗಿವೆ