ಕೊರೋನಾ: ಅಕ್ಟೋಬರ್ ಮೊದಲ ವಾರ ಭಾರತ ವಿಶ್ವ ನಂ.1 ಸಾಧ್ಯತೆ| ಮುಂದಿನ ತಿಂಗಳ ಆರಂಭಕ್ಕೆ ಭಾರತದಲ್ಲಿ ಸೋಂಕಿತರ ಸಂಖ್ಯೆ 70 ಲಕ್ಷ| ಈ ಮೂಲಕ ಹಾಲಿ ನಂ.1 ಅಮೆರಿಕವನ್ನೂ ಹಿಂದಿಕ್ಕಲಿದೆ ಭಾರತ| ಹೈದರಾಬಾದ್ ಸಂಶೋಧಕರಿಂದ ಅಧ್ಯಯನ
ಹೈದರಾಬಾದ್(ಸೆ.13): ಕೊರೋನಾಪೀಡಿತ ದೇಶಗಳ ಸಾಲಿನಲ್ಲಿ ಭಾರತವು ವಿಶ್ವದ ನಂ.1 ದೇಶ ಎನ್ನಿಸಿಕೊಳ್ಳುವುದು ಇನ್ನೇನು ದೂರವಿಲ್ಲ.
ಹೌದು. ‘ಅಕ್ಟೋಬರ್ ಮೊದಲ ವಾರದ ಹೊತ್ತಿಗೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 70 ಲಕ್ಷಕ್ಕೆ ಜಿಗಿಯಬಹುದು. ಈ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿದ ಕುಖ್ಯಾತಿಗೆ ಪಾತ್ರವಾಗಿರುವ ಅಮೆರಿಕವನ್ನು ಸಹ ಹಿಂದಿಕ್ಕಬಹುದು’ ಎಂದು ಹೈದರಾಬಾದ್‌ನ ಸಂಶೋಧಕರು ಮುನ್ನೆಚ್ಚರಿಕೆ ನೀಡಿದ್ದಾರೆ. ತನ್ಮೂಲಕ ಭಾರತವು ವಿಶ್ವದ ನಂ.1 ಸೋಂಕುಪೀಡಿತ ದೇಶ ಎಂಬ ಹಣೆಪಟ್ಟಿಅಂಟಿಸಿಕೊಳ್ಳಬಹುದು ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 45 ಲಕ್ಷ ದಾಟಿದೆ. ಇದೇ ವೇಳೆ ಅಮೆರಿಕದಲ್ಲಿನ ಸೋಂಕಿತರ ಸಂಖ್ಯೆ 60 ಲಕ್ಷ ದಾಟಿದೆ.
ಈ ಅಂಕಿ-ಅಂಶಗಳನ್ನೇ ಇಟ್ಟುಕೊಂಡು ಹೈದರಾಬಾದ್ ಬಿಟ್ಸ್ ಶಿಕ್ಷಣ ಸಂಸ್ಥೆಯ ಅನ್ವಯಿಕ ಗಣಿತ ಶಾಸ್ತ್ರದ ಡಾ| ಟಿ.ಎಸ್.ಎಲ್. ರಾಧಿಕಾ ನೇತೃತ್ವದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಇದರ ಪ್ರಕಾರ, ‘ಅಕ್ಟೋಬರ್ ಮೊದಲ ವಾರದ ವೇಳೆಗೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 70 ಲಕ್ಷ ದಾಟಬಹುದು. ಆಗ ಅಮೆರಿಕವನ್ನೂ ಭಾರತ ಹಿಂದಿಕ್ಕಬಹುದು’ ಎಂದು ತಿಳಿದುಬಂದಿದೆ.
ಆದರೆ ಕೊರೋನಾ ಪರೀಕ್ಷೆಗಳನ್ನು ನಡೆಸುವ ಆಧಾರದಲ್ಲಿ ಅಂಕಿ-ಸಂಖ್ಯೆಯಲ್ಲಿ ಕೆಲವು ಬದಲಾವಣೆ ಆಗಬಹುದು ಎಂದು ಡಾ| ರಾಧಿಕಾ ಸ್ಪಷ್ಟಪಡಿಸಿದ್ದಾರೆ. ಭಾರತವು ಇತ್ತೀಚೆಗೆ ಬ್ರೆಜಿಲ್ ಅನ್ನು ಹಿಂದಿಕ್ಕಿ ವಿಶ್ವದ ನಂ.2 ಕೊರೋನಾ ಪೀಡಿತ ದೇಶ ಎನ್ನಿಸಿಕೊಂಡಿತ್ತು.