
ಶ್ರೀನಗರದ (ಜೂ.17): ಭಾರತ- ಪಾಕ್ ನಡುವಿನ ಸಮರದ ಬಳಿಕ ಪಾಕಿಸ್ತಾನ ಜತೆಗಿನ ಸಿಂಧು ನೀರು ಹಂಚಿಕೆ ಒಪ್ಪಂದಕ್ಕೆ ತಡೆ ನೀಡಿ ಶಾಕ್ ನೀಡಿದ್ದ ಭಾರತ, ಇದೀಗ ಮತ್ತೊಂದು ಆಘಾತ ನೀಡಲು ಮುಂದಾಗಿದೆ.
ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸದೇ ಭಾರತದಲ್ಲೇ ಹೆಚ್ಚು ಬಳಸುವ ಉದ್ದೇಶದಿಂದ 113 ಕಿ.ಮೀ. ಕಾಲುವೆ ನಿರ್ಮಿಸಲು ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಸುರಂಗ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ. ಒಂದು ವೇಳೆ ಅದು ಕಾರ್ಯರೂಪಕ್ಕೆ ಬಂದರೆ ಸಿಂಧು ಸೇರಿ ಕಾಶ್ಮೀರದ 3 ನದಿಗಳ ನೀರು ಪಾಕ್‌ಗೆ ಹೋಗುವುದರ ಬದಲು ಪಂಜಾಬ್, ಹರ್ಯಾಣ, ರಾಜಸ್ಥಾನಕ್ಕೆ ಹರಿಯಲಿದೆ. ಹೆಚ್ಚುವರಿ ನೀರನ್ನು ಬೇರೆಡೆಗೆ ತಿರುಗಿಸಲು ಹೊಸ ಕಾಲುವೆಗಳನ್ನು ನಿರ್ಮಿಸುವ ಬಗ್ಗೆ ಪ್ರಾಥಮಿಕ ಹಂತದಲ್ಲಿ ಅಧ್ಯಯನ ನಡೆಯುತ್ತಿದೆ ಎನ್ನಲಾಗಿದೆ.
ಕಾಲುವೆಯನ್ನು ಚೆನಾಬ್ ಅನ್ನು, ರಾವಿ ಬಿಯಾಸ್, ಸಟ್ಲೇಜ್ ನದಿಗಳೊಂದಿಗೆ ಸಂಪರ್ಕಿಸುವ ರೀತಿಯಲ್ಲಿ ನಿರ್ಮಿಸಲು ಚಿಂತನೆ ನಡೆಸಿದ್ದು, ಕಾಮಗಾರಿ ಆರಂಭವಾದರೆ 3 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಫೂರ್ವ ಮತ್ತು ಪಶ್ಚಿಮ ನದಿಗಳ ನೀರನ್ನು ಬಳಸಿಕೊಂಡು ಹೆಚ್ಚುವರಿ ಹರಿವನ್ನು ಪಾಕಿಸ್ತಾನಕ್ಕೆ ತಿರುಗಿಸುವುದನ್ನು ತಪ್ಪಿಸುವುದರ ಮೂಲಕ ಸಿಂಧು ಜಲ ಒಪ್ಪಂದದಲ್ಲಿ ಭಾರತದ ಪಾಲುದಾರಿಕೆಯನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಯಮುನಾ ನದಿಗೆ ಸಂಪರ್ಕಿಸುವ ಪ್ರಸ್ತಾಪವೂ ಇದ್ದು, ಅದು ಸಂಭವಿಸಿದ್ದಲ್ಲಿ ಕಾಲುವೆ ಉದ್ದ 200 ಕಿ.ಮೀಗೆ ತಲುಪಲಿದೆ. ಈ ಕಾಲುವೆಯಿಂದ ದೆಹಲಿ, ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನದಂತಹ ರಾಜ್ಯಗಳು ಹೆಚ್ಚು ಲಾಭವಾಗಲಿದೆ.
ಶನಿವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ‘3 ವರ್ಷಗಳಲ್ಲಿ ಸಿಂಧೂ ನೀರನ್ನು ರಾಜಸ್ಥಾನದ ಗಂಗಾನಗರಕ್ಕೆ ಕಾಲುವೆಗಳ ಮೂಲಕ ತಿರುಗಿಸಲಾಗುತ್ತದೆ’ ಎಂದಿದ್ದರು. ಗಂಗಾನಗರಕ್ಕೆ ಯಮುನಾ ಮೂಲಕ ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ