ಸಮುದಾಯಕ್ಕೆ ಹಬ್ಬಿದ ಕೊರೋನಾ: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ| ಕೆಲ ಜಿಲ್ಲೆಗಳಲ್ಲಿ ಮಾತ್ರ ಸಮುದಾಯಕ್ಕೆ ಹಬ್ಬಿದೆ: ಆರೋಗ್ಯ ಸಚಿವ
ನವದೆಹಲಿ(ಅ.19): ದೇಶದಲ್ಲಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಕೆಲ ತಿಂಗಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದರೂ ನಿರಾಕರಿಸುತ್ತಿದ್ದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅದನ್ನು ಒಪ್ಪಿಕೊಂಡಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ಹೇಳಿದೆ.
‘ದೇಶದ ವಿವಿಧ ರಾಜ್ಯಗಳ ಕೆಲವು ಭಾಗಗಳಲ್ಲಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿರುವುದು ವರದಿಯಾಗಿದೆ. ಆದರೆ ಇದು ದೇಶಾದ್ಯಂತ ಆಗುತ್ತಿಲ್ಲ. ಕೆಲವು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ
ಹರ್ಷವರ್ಧನ್ ಹೇಳಿದ್ದಾರೆ. ಭಾನುವಾರ ಅವರು ನಡೆಸಿದ ‘ಸಂವಾದ’ ವೆಬಿನಾರ್‌ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ದೇಶದಲ್ಲಿ ಸಮುದಾಯಕ್ಕೆ ಕೊರೋನಾ ಹರಡಿಲ್ಲ ಎಂದು ಕೇಂದ್ರ ಸರ್ಕಾರ ನಿರಾಕರಿಸುತ್ತಾ ಬಂದಿದ್ದರೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಜುಲೈನಲ್ಲೇ ಸಮುದಾಯಕ್ಕೆ ಕೊರೋನಾ ಹರಡಿದೆ ಎಂದು ಖಚಿತಪಡಿಸಿದ್ದರು. ಅಸ್ಸಾಂ ಕೂಡ ಜುಲೈ-ಆಗಸ್ಟ್ ವೇಳೆಯಲ್ಲಿ ಸಮುದಾಯಕ್ಕೆ ಕೊರೋನಾ ಹರಡಿರುವ ಸುಳಿವು ನೀಡಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಸಮುದಾಯಕ್ಕೆ ಕೊರೋನಾ ಹರಡಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.