ಮಿಲಿಟರಿಗೆ ಅಧಿಕ ವೆಚ್ಚ: ಭಾರತ ವಿಶ್ವದಲ್ಲಿ ನಂ.3!

By Kannadaprabha NewsFirst Published Apr 28, 2020, 8:50 AM IST
Highlights

ಮಿಲಿಟರಿಗೆ ಅಧಿಕ ವೆಚ್ಚ: ಭಾರತ ವಿಶ್ವದಲ್ಲಿ ನಂ.3| ಅಮೆರಿಕ ಪ್ರಥಮ, ಚೀನಾಗೆ 2ನೇ ಸ್ಥಾನ| ಚೀನಾ ಮತ್ತು ಭಾರತ ಎರಡೂ ದೇಶಗಳು ಟಾಪ್‌ ಮೂರರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು.

ಲಂಡನ್‌(ಏ.28): ನೆರೆಯ ಚೀನಾ ಮತ್ತು ಪಾಕಿಸ್ತಾನಗಳಿಂದ ಸದಾ ಯುದ್ಧ ಭೀತಿ ಎದುರಿಸುತ್ತಿರುವ ಭಾರತ, 2019ನೇ ಸಾಲಿನಲ್ಲಿ ಮಿಲಿಟರಿಗಾಗಿ ಮಾಡಿದ ವೆಚ್ಚದಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನದಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ದೇಶಗಳಿವೆ. ಚೀನಾ ಮತ್ತು ಭಾರತ ಎರಡೂ ದೇಶಗಳು ಟಾಪ್‌ ಮೂರರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು.

ಸ್ಟಾಕ್‌ಹೋಮ್‌ ಮೂಲದ ಶಾಂತಿ ಸಂಶೋಧನಾ ಸಮಿತಿ ಬಿಡುಗಡೆ ಮಾಡಿರುವ ವರದಿ ಅನ್ವಯ, 2019ರಲ್ಲಿ ವಿಶ್ವದ ಎಲ್ಲಾ ದೇಶಗಳು ಮಿಲಿಟರಿಗಾಗಿ ಒಟ್ಟಾರೆ 143 ಲಕ್ಷ ಕೋಟಿ ರು. ಹಣ ವ್ಯಯಿಸಿವೆ. ಇದು 2018ಕ್ಕಿಂತ ಶೇ.3.6ರಷ್ಟುಹೆಚ್ಚು. ಈ ಏರಿಕೆ ಪ್ರಮಾಣ ಕಳೆದೊಂದು ದಶಕಗಳಲ್ಲೇ ಗರಿಷ್ಠ ಪ್ರಮಾಣದ್ದು. ಅಮೆರಿಕ, ಚೀನಾ, ಭಾರತ, ರಷ್ಯಾ ಮತ್ತು ಸೌದಿ ಅರೇಬಿಯಾ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡಿದ ಟಾಪ್‌ 5 ದೇಶಗಳಾಗಿದ್ದು, ಇವುಗಳ ಒಟ್ಟು ವೆಚ್ಚ ಇಡೀ ಜಾಗತಿಕ ವೆಚ್ಚದ ಶೇ.62ರಷ್ಟಿದೆ.

ಅಮೆರಿಕ 2019ರಲ್ಲಿ ಮಿಲಿಟರಿಗೆ 55 ಲಕ್ಷ ಕೋಟಿ ರು. ವಯಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.5.3ರಷ್ಟುಹೆಚ್ಚು. ಚೀನಾ 20 ಲಕ್ಷ ಕೋಟಿ ರು.ಗಳನ್ನು ಮಿಲಿಟರಿಗಾಗಿ ವ್ಯಯಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.5.1ರಷ್ಟುಹೆಚ್ಚು. ಇನ್ನು ಭಾರತ 5.33 ಲಕ್ಷ ಕೋಟಿ ರು.ವ್ಯಯಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.6.8ರಷ್ಟುಹೆಚ್ಚು ಎಂದು ವರದಿ ಹೇಳಿದೆ.

ಭಾರತದಲ್ಲಿ ಏರಿಕೆಗೆ ಕಾರಣ:

ಚೀನಾ ಮತ್ತು ಪಾಕಿಸ್ತಾನದೊಂದಿಗೆ ಭಾರತ ಹೊಂದಿರುವ ಉದ್ವಿಗ್ನ ಪರಿಸ್ಥಿತಿಯು ಭಾರತದ ಮಿಲಿಟರಿ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಅಚ್ಚರಿಯ ಅಂಶ:

2018ಕ್ಕೆ ಹೋಲಿಸಿದರೆ ಅಮೆರಿಕ ಮಾಡಿರುವ ಹೆಚ್ಚಳವು, ಜರ್ಮನಿಯ ಒಟ್ಟಾರೆ ಮಿಲಿಟರಿ ಬಜೆಟ್‌ನಷ್ಟಿದೆ. 2019ರಲ್ಲಿ ಒಟ್ಟಾರೆ ಜಾಗತಿಕ ಮಿಲಿಟರಿ ವೆಚ್ಚವು ಜಾಗತಿಕ ಜಿಡಿಪಿಯ ಶೇ.2.2ರಷ್ಟಿದೆ. ಅಮೆರಿಕದಲ್ಲಿ ಜಿಡಿಪಿಯ ಶೇ.1.4ರಷ್ಟುಮಿಲಿಟರಿ ವೆಚ್ಚವಿದ್ದರೆ, ಈ ಪ್ರಮಾಣ ಆಫ್ರಿಕಾದಲ್ಲಿ ಶೇ.1.6ರಷ್ಟು, ಏಷ್ಯಾ ಮತ್ತು ಒಷೇನಿಯಾ, ಯುರೋಪ್‌ನಲ್ಲಿ ಶೇ.1.7, ಮಧ್ಯಪ್ರಾಚ್ಯದಲ್ಲಿ ಶೇ.4.5ರಷ್ಟಿದೆ.

ಅಮೆರಿಕ: 55 ಲಕ್ಷ ಕೋಟಿ ರು.

ಚೀನಾ: 19 ಲಕ್ಷ ಕೋಟಿ ರು.

ಭಾರತ: 5.33 ಲಕ್ಷ ಕೋಟಿ ರು.

143 ಲಕ್ಷ ಕೋಟಿ ರು.: 2019ರಲ್ಲಿ ಜಾಗತಿಕ ಮಿಲಿಟರಿ ವೆಚ್ಚ

click me!