ಪತ್ರಿಕೆಯಿಂದ ಕೊರೋನಾ ಬರುತ್ತೆಂದ ಮಹಾರಾಷ್ಟ್ರಕ್ಕೆ ಹೈಕೋರ್ಟ್ ತರಾಟೆ| ತಜ್ಞರ ಅಭಿಪ್ರಾಯ ಪಡೆಯದೆ ಹೇಳಿದ್ದೀರಿ| ಹಾಟ್‌ಸ್ಪಾಟ್ ಬಿಟ್ಟು ಉಳಿದೆಡೆ ಪತ್ರಿಕೆ ವಿತರಿಸಿ
ಮುಂಬೈ(ಏ.28): ಪತ್ರಿಕೆಗಳ ವಿತರಣೆಯಿಂದ ಕೊರೋನಾ ವೈರಸ್ ಹರಡುತ್ತದೆ ಎಂಬ ಸಾರ್ವತ್ರಿಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ತರಾಟೆ ತೆಗೆದುಕೊಂಡಿದೆ. ತಜ್ಞರ ಅಭಿಪ್ರಾಯ ಪಡೆಯದೆ ಸರ್ಕಾರ ಈ ರೀತಿಯ ಹೇಳಿಕೆ ನೀಡಬಾರದು ಎಂದು ಕೋರ್ಟ್ ಹೇಳಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮನೆ ಬಾಗಿಲಿಗೆ ಪತ್ರಿಕೆ ವಿತರಣೆಗೆ ತಡೆ ನೀಡಿದ ಬಗ್ಗೆ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಕೋರ್ಟ್, ಮುಂಬೈ, ಪುಣೆ ಹಾಗೂ ಇತರ ಹಾಟ್‌ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಪತ್ರಿಕೆ ವಿತರಣೆಗೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ.
ಮಹಾರಾಷ್ಟ್ರ ಸರ್ಕಾರ ಪ್ರಮಾಣಪತ್ರವೊಂದನ್ನು ಸಲ್ಲಿಸಿ, ಕೊರೋನಾ ವೈರಸ್ ವಿವಿಧ ವಸ್ತುಗಳ ಮೇಲೆ ದೀರ್ಘ ಸಮಯದವರೆಗೆ ಇರುತ್ತದೆ. ಪತ್ರಿಕೆಗಳ ಮೂಲಕ ಅವು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ, ಸರ್ಕಾರದ ಪ್ರಮಾಣಪತ್ರದ ಹಿಂದಿರುವ ತರ್ಕವನ್ನು ಪ್ರಶ್ನಿಸಿರುವ ನ್ಯಾ
ಪಿ.ಬಿ ವರಾಲೆ ಅವರಿದ್ದ ಪೀಠ, ಸರ್ಕಾರವು ತಜ್ಞರು ಅಥವಾ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಂದ ಅಭಿಪ್ರಾಯ ಪಡೆಯದೇ ಸಾರ್ವತ್ರಿಕ ಹೇಳಿಕೆಯನ್ನು ನೀಡಿದಂತಿದೆ. ಲಾಕ್‌ಡೌನ್ ವೇಳೆ ಖಚಿತ ಮತ್ತು ವಿಸ್ತೃತವಾದ ಸುದ್ದಿಗಳನ್ನು ಓದಲು ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಪತ್ರಿಕೆ ಓದುಗರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ ಮನೆ ಬಾಗಿಲಿಗೆ ಪತ್ರಿಕೆಗಳ ವಿತರಣೆ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಳ್ಳಿ ಹಾಕಿದ್ದನ್ನೂ ಅಮಿಕಸ್ ಕ್ಯೂರಿ ಸತ್ಯಜಿತ್ ಬೋರಾ ಕೋರ್ಟ್ ಗಮನಕ್ಕೆ ತಂದರು.