ಸಾಂಸ್ಕೃತಿಕ ಪರಿಕಲ್ಪನೆಯಲ್ಲಿ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಇದನ್ನು ಸಂವಿಧಾನದ ಮೂಲಕ ರುಜುವಾತು ಮಾಡುವ ಅವಶ್ಯಕತೆ ಇಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಹೇಳಿದ್ದಾರೆ.
ಸಮಲ್ಖಾ (ಹರಾರಯಣ): ‘ಸಾಂಸ್ಕೃತಿಕ ಪರಿಕಲ್ಪನೆಯಲ್ಲಿ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಇದನ್ನು ಸಂವಿಧಾನದ ಮೂಲಕ ರುಜುವಾತು ಮಾಡುವ ಅವಶ್ಯಕತೆ ಇಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ 3 ದಿನಗಳ ಸಮಾವೇಶದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಹಿಂದೂ ರಾಷ್ಟ್ರ ಎಂಬುದನ್ನು ನಾವು ಕಳೆದ 100 ವರ್ಷಗಳ ಹಿಂದೆಯೇ ಒಪ್ಪಿಕೊಂಡಿದ್ದೇವೆ. ಇದು ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ’ ಎಂದರು.
‘ರಾಜ್ಯ ಮತ್ತು ರಾಷ್ಟ್ರ ಎಂಬ ಪರಿಕಲ್ಪನೆಗಳು ಬೇರೆಬೇರೆಯಾಗಿವೆ. ರಾಜ್ಯ ಎಂಬುದು ಸಂವಿಧಾನದಿಂದ ಹುಟ್ಟಿಕೊಂಡಿದ್ದು. ಆದರೆ ದೇಶ ಎಂಬುದು ಸಾಂಸ್ಕೃತಿಕ ಪರಿಕಲ್ಪನೆಯಿಂದ ಹುಟ್ಟಿಕೊಂಡಿದ್ದು. ಹಾಗಾಗಿ ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರ ಮಾಡುವತ್ತ ಕೆಲಸ ಮಾಡಬೇಕಿಲ್ಲ’ ಎಂದು ಅವರು ಹೇಳಿದರು.
ಸಲಿಂಗ ವಿವಾಹಕ್ಕೆ ವಿರೋಧ:
ಇದೇ ವೇಳೆ ಸಲಿಂಗ ವಿವಾಹದ ವಿರುದ್ಧ ಕೇಂದ್ರ ಸರ್ಕಾರದ ವಾದವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ ಹೊಸಬಾಳೆ, ‘ಮದುವೆಗಳು ಯಾವಾಗಲೂ ವಿರುದ್ಧ ಲಿಂಗಗಳ ನಡುವೆಯೇ ನಡೆಯಬೇಕು’ ಎಂದರು.
ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಸ್ತ್ರೀಯರ ಸಕ್ರಿಯ ಭಾಗವಹಿಸುವಿಕೆ ಹೆಚ್ಚಿಸಲು ಚರ್ಚೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ನಡೆಸುವ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕ್ರಮಗಳನ್ನು ಕೈಗೊಳ್ಳಲು ಈ ಬಾರಿಯ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಸಲು ಸಂಘ ನಿರ್ಧರಿಸಿದೆ. ಆರ್‌ಎಸ್‌ಎಸ್‌ನ ವಾರ್ಷಿಕ 3 ದಿನಗಳ ಸಭೆ ಭಾನುವಾರದಿಂದ ಆರಂಭಗೊಂಡಿದ್ದು, ಈ ಸಭೆಯಲ್ಲಿ ಮುಂಬರುವ ವರ್ಷದಲ್ಲಿ ಆರ್‌ಎಸ್‌ಎಸ್ ಮಾಡಬೇಕಾಗಿರುವ ಕೆಲಸದ ಕುರಿತು ಯೋಜನೆ ತಯಾರಿಸಲಾಗುತ್ತದೆ ಎಂದು ಜಂಟಿ ಪ್ರಧಾನ ಕಾರ್ಯದರ್ಶಿ ಮನ್‌ಮೋಹನ್ ವೈದ್ಯ ತಿಳಿಸಿದ್ದಾರೆ. ಅಲ್ಲದೇ ದೇಶದ ವಿವಿಧೆಡೆ ಇರುವ ಶಾಖಾ ಸಂಖ್ಯೆಗಳನ್ನು ಹೆಚ್ಚಿಸಲು ಹಾಗೂ 7.25 ಲಕ್ಷ ಜನರನ್ನು ಆರ್‌ಎಸ್‌ಎಸ್‌ಗೆ ಸೇರುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.