ವಿಶ್ವದ 108 ರಾಷ್ಟ್ರಗಳಿಗೆ ಪ್ಯಾರಾಸಿಟಮಲ್ ಹಾಗೂ ಹೈಡ್ರೋಕ್ಸಿಕ್ಲೋರೊಕ್ವೈನ್ ಮಾತ್ರೆಗಳನ್ನು ರವಾನಿಸುವ ಮೂಲಕ ಜಗತ್ತಿನ ಕೊರೋನಾ ಸಂಕಷ್ಟಕ್ಕೆ ಭಾರತ ನೆರವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.17): ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹೈಡ್ರೋಕ್ಸಿಕ್ಲೋರೊಕ್ವೈನ್ ಹಾಗೂ ಇತರೆ ಮಾತ್ರೆಗಳನ್ನು ರವಾನಿಸಿದೆ. ಇದರನ್ವಯ ವಿಶ್ವದ 108 ರಾಷ್ಟ್ರಗಳಿಗೆ 50 ಕೋಟಿ ಪ್ಯಾರಾಸಿಟಮಲ್ ಮಾತ್ರೆ ಹಾಗೂ 8.5 ಕೋಟಿ ಹೈಡ್ರೋಕ್ಸಿಕ್ಲೋರೊಕ್ವೈನ್ ಮಾತ್ರೆ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಾತ್ರೆಗಳ ಉತ್ಪಾದನೆಯ ಕಚ್ಚಾವಸ್ತುವಾಗಿರುವ ಪ್ಯಾರಾಸಿಟಮಲ್ ಗ್ರನುಲಸ್ ಅನ್ನು 1000 ಟನ್ ರವಾನಿಸಲಾಗಿದೆ.
ವಿಶ್ವದ ನಾನಾ ರಾಷ್ಟ್ರಗಳಿಗೆ ಭಾರತೀಯ ವಾಯುಪಡೆ ವಿಮಾನಗಳು, ವಿದೇಶಿ ಚಾರ್ಟರ್‌ಗಳು ಹಾಗೂ ರಾಯಭಾರಿ ಕಾರ್ಗೊಗಳ ಮೂಲಕ ಮಾತ್ರೆಗಳನ್ನು ಕಳುಹಿಸಿಕೊಡಲಾಗಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ವಿವಿಧ ರಾಷ್ಟ್ರಗಳಿಗೆ ನೆರವಿನ ಹಸ್ತ ನೀಡಿದೆ. ಭಾರತದ ಪ್ಯಾರಾಸಿಟಮಲ್ ಹಾಗೂ ಹೈಡ್ರೋಕ್ಲೋರೊಕ್ವೈನ್ ಮಾತ್ರೆಗಳನ್ನು ಆಮದು ಮಾಡಿಕೊಂಡ ರಾಷ್ಟ್ರಗಳಲ್ಲಿ ಸುಮಾರು 14 ಲಕ್ಷ ಕೊರೋನಾ ಪೀಡಿತರಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ವಿಶ್ವದ 35 ದೇಶಗಳಿಗೆ ಈಗ ಮೋದಿ ಜೀವದಾನಿ!
ಇದರನ್ವಯ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರು ಇರುವ ಎಂಬ ಅಪಖ್ಯಾತಿಗೆ ಗುರಿಯಾದ ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್, ಸ್ಪೇನ್ ಹಾಗೂ ನೆದರ್‌ಲೆಂಡ್ ಸೇರಿದಂತೆ ಒಟ್ಟಾರೆ 24 ರಾಷ್ಟ್ರಗಳಿಗೆ 80 ಮಿಲಿಯನ್ ಹೈಡ್ರೋಕ್ಸಿಕ್ಲೋರೊಕ್ವೈನ್ ಅನ್ನು ರಫ್ತು ಮಾಡಲಾಗಿದೆ. ಅಲ್ಲದೆ, ಸ್ವೀಡನ್, ಇಟಲಿ, ಸಿಂಗಾಪುರ ಸೇರಿದಂತೆ 52 ದೇಶಗಳಿಗೆ ಭಾರೀ ಪ್ರಮಾಣದ ಪ್ಯಾರಾಸಿಟಮಲ್ ಮಾತ್ರೆಗಳನ್ನು ರವಾನಿಸಲಾಗಿದೆ. ಮತ್ತೆ ಕೆಲ ರಾಷ್ಟ್ರಗಳಿಗೆ ಊ ಎರಡೂ ಬಗೆಯ ಮಾತ್ರೆಗಳನ್ನು ಭಾರತ ಪೂರೈಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಲಾಕ್‌ಡೌನ್ ಘೋಷಣೆ 20 ಕೋಟಿ ಜನರಿಂದ ವೀಕ್ಷಣೆ
ಕೊರೋನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್‌ಡೌನ್ ವಿಸ್ತರಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಬರೋಬ್ಬರಿ 20.3 ಕೋಟಿ ಮಂದಿ ಟೀವಿ ಮೂಲಕ ವೀಕ್ಷಣೆ ಮಾಡಿದ್ದಾರೆ. ಏ.14ರ ಬೆಳಿಗ್ಗೆ 10 ಗಂಟೆಗೆ 25 ನಿಮಿಷ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ, ಮೇ.3ರ ವರೆಗೂ ಲಾಕ್‌ಡೌನ್ ವಿಸ್ತರಿಸುವುದಾಗಿ ಘೋಷಣೆ ಮಾಡಿದ್ದರು. 199 ಚಾನೆಲ್‌ಗಳು ಈ ಭಾಷಣವನ್ನು ನೇರ ಪ್ರಸಾರ ಮಾಡಿದ್ದು, 400 ಕೋಟಿ ವೀಕ್ಷಕ ನಿಮಿಷಗಳನ್ನು ಈ ಭಾಷಣ ಕಂಡಿದೆ. ಮಾ.23ರ ಮೊದಲನೇ ಲಾಕ್‌ಡೌನ್ ಭಾಷಣವನ್ನು 19.3 ಕೋಟಿ ಮಂದಿ ವೀಕ್ಷಿಸಿದ್ದರು.