'ಅಮರ ಚಿತ್ರ ಕಥಾ'  ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು!

By Suvarna NewsFirst Published Aug 3, 2020, 7:45 PM IST
Highlights

ಅಮರ್ ಸಿಂಗ್ ಜೀವನ/  ಪೋಲಿಟಿಕ್ಸ್ ನಿಂದ ಕಾರ್ಪೊರೇಟ್ ವರೆಗೆ ಕ್ರಿಕೆಟ್ ನಿಂದ ಬಾಲಿವುಡ್ ವರೆಗೆ/ ಮಹತ್ವಾಕಾಂಕ್ಷಿ ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು ಅಂತ್ಯ/ ಆಮಂತ್ರಣ ಇಲ್ಲದೆಯೂ ಅಮರ್ ಸಿಂಗ್ ರನ್ನು ಸೋನಿಯಾ ಮನೆಗೆ ಕರೆದು ಕೊಂಡು ಹೋಗಿದ್ದರು

ಬಹುತೇಕ ಸಮ್ಮಿಶ್ರ ಸರ್ಕಾರಗಳ ಕಾಲ ಅಂದರೆ ರಾಜಕೀಯ ಒಪ್ಪಂದ ಗಳನ್ನು ಮಾಡಿಸುವವರಿಗೆ ಸುಗ್ಗಿಯ ಕಾಲ.ಇಂಥದ್ದೇ ಕಾಲದಲ್ಲಿ ಪೋಲಿಟಿಕ್ಸ್ ನಿಂದ ಕಾರ್ಪೊರೇಟ್ ವರೆಗೆ ಕ್ರಿಕೆಟ್ ನಿಂದ ಬಾಲಿವುಡ್ ವರೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದು ಅಮರ ಸಿಂಗ್ .

ಆದರೆ 2 ದಿನಗಳ ಹಿಂದೆ ಅಮರ ಸಿಂಗ್ ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಾಗ ಅಮರರ ಪ್ರಸಿದ್ಧ ಗೆಳೆಯರಾದ ಮುಲಾಯಂ ಸಿಂಗ್ ಮನಮೋಹನ್ ಸಿಂಗ್ ಅಮಿತಾಭ್ ಬಚ್ಚನ್ ಅನಿಲ್ ಅಂಬಾನಿ ಸುಬ್ರತೋ ರಾಯ್ ಹೀಗೆ ಯಾರು ಕೂಡ ಹತ್ತಿರದಲ್ಲಿರಲಿಲ್ಲ.12 ವರ್ಷಗಳ ಹಿಂದೆ ರಾಜಕೀಯದ ಉತ್ತುಂಗದಲ್ಲಿದ್ದ ಅಮರ ಸಿಂಗ್ ಜೀವ ಬಿಟ್ಟಾಗ ಮಾತ್ರ ಅಕ್ಷರಷಃ ಏಕಾಂಗಿ ಆಗಿದ್ದರು. ಪ್ರಭಾವ ಗ್ಲಾಮರ್ ಸಂಪರ್ಕ ಗಳಿಂದ ದೂರ ಬಂದಿದ್ದರು.

ಅಜಂಗಡ್ ನ ಈ ಠಾಕೂರ ಅಮರ್ ಸಿಂಗ್ ಬೆಳೆದಿದ್ದು ಮಾತ್ರ ಕೊಲ್ಕತ್ತಾದಲ್ಲಿ.ಕಮ್ಯುನಿಸ್ತರ ಆಳ್ವಿಕೆ ಯಲ್ಲಿ ಅಮರ ಸಿಂಗ್ ರಾಜಕೀಯ ಶುರು ಮಾಡಿದ್ದು ಕಾಂಗ್ರೆಸ ನ ವಿದ್ಯಾರ್ಥಿ ಸಂಘಟನೆ ಛಾತ್ರ ಸಂಘರ್ಷದ ಮೂಲಕ.ಸಣ್ಣ ಕೀಲಿ ಕೈ ವ್ಯಾಪಾರಸ್ಥರ ಮಗನಾದ ಅಮರ ಸಿಂಗ್ ಗೆ ಸಿಕ್ಕಾಪಟ್ಟೆ ರಾಜಕೀಯ ಮಹತ್ವಾಕಾಂಕ್ಷೆ ಇತ್ತು.ಹೀಗಾಗಿ ಸಹಜವಾಗಿ ಮಾಧವರಾವ್ ಸಿಂಧಿಯಾ ಬಿರ್ಲಾ ಗ್ರೂಪ್ ನ ಶೋಭನಾ ಭಾರತಿಯಾ ರ ಮೈತ್ರಿ ಆಯಿತು.ಒಂದು ರೀತಿಯಲ್ಲಿ ಅಮರ ಸಿಂಗ್ ರಾಜಕೀಯ ನಾಯಕರ ಮತ್ತು ಉದ್ಯಮಿಗಳ ನಡುವಿನ ಸೇತುವೆ ಆಗಿದ್ದರು.ಉದ್ಯಮಿಗಳಿಗೆ ಸರ್ಕಾರದ ಕೃಪಾ ಕಟಾಕ್ಷ ಬೇಕಿತ್ತು.ರಾಜಕಾರಣಿಗಳಿಗೆ ಉದ್ಯಮಿಗಳಿಂದ ರಾಜಕೀಯಕ್ಕೆ ಹಣ ಬೇಕಿತ್ತು.ಅಮರ ಸಿಂಗ್ ಇಬ್ಬರ ಬೇಕುಗಳ ನಡುವೆ ಕೊಂಡಿಯಂತೆ ಇದ್ದರಿಂದ ಜಾಗತೀಕರಣದ ಆರಂಭದ ದಿನಗಳಲ್ಲಿ ಉಪಯುಕ್ತ ರಾಗತೊಡಗಿದರು.

ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?

ತನ್ನ ಠಾಕೂರ ಜಾತಿಯ ಕಾರ್ಡ್ ಬಳಸಿ ಮೊದಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ವೀರ ಬಹದ್ದೂರ್ ಸಿಂಗ್ ಗೆಳೆತನ ಸಂಪಾದಿಸಿದ ಅಮರ ಸಿಂಗ್ ರಿಗೆ ಇದರಿಂದ ದಿಲ್ಲಿ ಮುಂಬೈ ನಲ್ಲಿ ಒಂದು ಕಡೆ ರಾಜಕಾರಣಿಗಳು ಇನ್ನೊಂದು ಕಡೆ ಉದ್ಯಮಿಗಳ ಗೆಳೆತನ ಸಿಕ್ಕಿತು.ಎಷ್ಟೆಂದರೆ ಅಮಿತಾಭ ಬಚ್ಚನ್ ಪರಮೇಶ್ವರ್ ಗೋದ್ರೇಜ್ ಸುಬ್ರಟೋ ರಾಯ್ ಅನಿಲ್ ಅಂಬಾನಿ ಅಮರ ಸಿಂಗ್ ಮನೆಗಳಿಗೆ ಎಡ ತಾಕತೊಡಗಿದರು.ಆದರೆ ಅಮರ ಸಿಂಗ್ ಅದ್ರಷ್ಟ ಖುಲಾಯಿಸಿದ್ದು ದಿಲ್ಲಿಯಿಂದ ಲಕ್ ನೌ ಗೆ ಹೊರಟಿದ್ದ ವಿಮಾನದಲ್ಲಿ.ಆಗಷ್ಟೇ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಮುಲಾಯಂ ಸಿಂಗ್ ಯಾದವ್ ಅರ್ಧ ಗಂಟೆಯ ಅಮರ ಸಿಂಗ್ ಮಾತಿನಿಂದ ಇಷ್ಟು ಪ್ರಭಾವಿತ ರಾದರೆಂದರೆ ಅಮರ್ ಸಿಂಗ್ ರನ್ನು ರಾಜ್ಯಸಭೆಗೆ ಕಳುಹಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೂಡ ಮಾಡಿಯೇ ಬಿಟ್ಟರು.ಮುಲಾಯಂ ಎಷ್ಟರ ಮಟ್ಟಿಗೆ ಅಮರ ಸಿಂಗ್ ರಿಂದ ಆಕರ್ಷಿತ ರಾಗಿದ್ದರೆಂದರೆ ಪತ್ರಕರ್ತರ ಎದುರು " ಅಯ್ಯೋ ಎಂಥ ಸಾಮರ್ಥ್ಯದ ವ್ಯಕ್ತಿ ಈತ ಒಂದು ಫೋನ್ ಮಾಡಿದರೆ ಸಾಕು ಬಿಗ್ ಬಿ ಅಮಿತಾಭ ಬಚ್ಚನ್ ಅನಿಲ್ ಅಂಬಾನಿ ಗೋದ್ರೇಜ್ ಮುಂಬೈ ನಿಂದ ಲಕ್ ನೌ ಗೆ ಓಡೋಡಿ ಬರುತ್ತಾರೆ "ಎನ್ನುತ್ತಿದ್ದರಂತೆ.ಪರಿಸ್ಥಿತಿ ಎಷ್ಟರ ಮಟ್ಟಿಗೆ ಎಂದರೆ ಮುಲಾಯಂ ನಂತರ ಸಮಾಜವಾದಿಗಳ ನಂಬರ್ 2 ಎಂದರೆ ಅಮರ ಸಿಂಗ್ ಎನ್ನುವ ಮಾತು ಕೇಳತೊಡಗಿತು.ಹಳೆಯ ವಿಚಾರದ ಸಮಾಜವಾದಿ  ಮುಲಾಯಂ ಗೆ ಹೊಸ ತಲೆಮಾರಿನ ಬಂಡವಾಳ ಶಾಹಿಗಳ ಮಿತ್ರ ಅಮರ್ ಸಿಂಗ್ ಇಷ್ಟವಾಗತೊಡಗಿದರು.ಪಕ್ಷದ ಪದಾಧಿಕಾರಿ ಯಾರು ಇರಬೇಕು ಎನ್ನುವುದರಿಂದ ಮಂತ್ರಿ ಯಾರಾಗಬೇಕು ಎನ್ನುವಷ್ಟರ ಮಟ್ಟಿಗೆ ಅಮರ್ ಸಿಂಗ್ ಮಾತು ನಡೆಯತೊಡಗಿತು.

1996 ರಲ್ಲಿ ಕಮ್ಯುನಿಸ್ಟ್ ನಾಯಕ ಹರಿಕಿಶನ್ ಸಿಂಗ್ ಸುರ್ಜಿತ್ ಎಷ್ಟರ ಮಟ್ಟಿಗೆ ಅಮರ ಸಿಂಗ್ ರನ್ನು ಹಚ್ಚಿ ಕೊಂಡಿದ್ದರೆಂದರೆ ಯಾವುದೇ ಆಮಂತ್ರಣ ಇಲ್ಲದೆಯೂ ಅಮರ್ ಸಿಂಗ್ ರನ್ನು ಸೋನಿಯಾ ಮನೆಗೆ ಕರೆದು ಕೊಂಡು ಹೋಗಿದ್ದರು.ದಲ್ಲಾಳಿ ಎಂದೇ ಕರೆಸಿ ಕೊಳ್ಳುತ್ತಿದ್ದ ಅಮರ್ ಸಿಂಗ್ ಮನೆಗೆ ಬಂದಿದ್ದು ಸೋನಿಯಾ ಗಾಂಧಿಗೆ ಬೇಸರ ತರಿಸಿತ್ತು.ಅದೇನೋ ಗೊತ್ತಿಲ್ಲ ಮಾಧವ ರಾವ್ ಸಿಂಧಿಯಾ ಪ್ರಯತ್ನಿಸಿದರು ಕೂಡ ಸೋನಿಯಾ ಎಂದಿಗೂ ಅಮರ ಸಿಂಗ್ ರನ್ನು ಹತ್ತಿರ ಬಿಟ್ಟು ಕೊಳ್ಳಲಿಲ್ಲ.

ಕಾಲು ನೋವಿದ್ದರೂ ರಾಜ್ ನಾಥ್ ಲಡಾಖ್ ಪ್ರವಾಸ

2008 ರಲ್ಲಿ ಅಮರ್ ಸಿಂಗ್ ಅಮೆರಿಕ ದಲ್ಲಿದ್ದರು.ಎಡ ಪಕ್ಷಗಳು ಮನ ಮೋಹನ್ ಸಿಂಗ್ ಸರ್ಕಾರಕ್ಕೆ ಪರಮಾಣು ಕರಾರು ಕಾರಣ ದಿಂದ ನೀಡಿದ್ದ ಬೆಂಬಲ ಹಿಂದೆ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದವು.ಮನಮೋಹನ ಸರ್ಕಾರ ಕುಸಿಯುವ ಸ್ಥಿತಿಯಲ್ಲಿತ್ತು.ಕೂಡಲೇ ಅಮೆರಿಕ ದಿಂದ ದಿಲ್ಲಿಗೆ ಬಂದ ಅಮರ ಸಿಂಗ್ ನೇರವಾಗಿ 7 ರೇಸ್ ಕೋರ್ಸ್ ರಸ್ತೆ ಯ ಪ್ರಧಾನಿ ನಿವಾಸಕ್ಕೆ ತೆರಳಿ ಒಂದು ದಿನದಲ್ಲಿ ಮುಲಾಯಂ ಸಿಂಗ್ ಯಾದವ್ ರನ್ನು ಕರೆದು ಕೊಂಡು ಬಂದು ಮನಮೋಹನ್ ಸರ್ಕಾರಕ್ಕೆ 39 ಸಮಾಜ ವಾದಿ ಸಂಸದರ ಬೆಂಬಲ ಘೋಷಿಸಿಯೇ ಬಿಟ್ಟರು.ಹಠಾತ್ತನೆ ದಿಲ್ಲಿಯಲ್ಲಿ ಅಮರ ಸಿಂಗ್ ರಾಜಕೀಯ ಮಹತ್ವ ಜಾಸ್ತಿ ಆಯಿತು.ಆದರೆ ಅಮರ ಸಿಂಗ್ ರ ಮುಲಾಯಂ ಮೇಲಿನ ಪ್ರಭಾವದಿಂದ ಮುಲಾಯಂ ರ ಸೋದರ ರಾಮ ಗೋಪಾಲ್ ಯಾದವ್ ಪುತ್ರ ಅಖಿಲೇಶ್ ಯಾದವ ಮುಲಾಯಂ ರ ಬೆಂಬಲಿಗರಾದ ಆಜಂ ಖಾನ್ ಬೇಣಿ ಪ್ರಸಾದ್ ವರ್ಮಾ ಬೇಸರ ಗೊಳ್ಳ ತೊಡಗಿದರು.ಇನ್ನು ಮನ ಮೋಹನ್ ಸಿಂಗ್ ಮೇಲಿನ ಪ್ರಭಾವ ದಿಂದ ಪಿ ಚಿದಂಬರಂ ತರಹದ ನಾಯಕರು ಕೋಪ ಗೊಂಡಿದ್ದರು.ಸೋನಿಯಾ ಗಾಂಧಿ ಒಪ್ಪದೇ ಇದ್ದಿದ್ದರಿಂದ ಅಮರ ಸಿಂಹ ಮುಲಾಯಂ ಮೂಲಕ ಎಷ್ಟೇ ಪ್ರಯತ್ನಿಸಿದರೂ ಕೂಡ ಕಾಂಗ್ರೆಸ್ ಹೊರಗಿನಿಂದ ಬೆಂಬಲಕ್ಕೆ ಒಪ್ಪಿತೇ ಹೊರತು ಸಮಾಜವಾದಿ ಗಳನ್ನು ಯು ಪಿ ಎ ಸರ್ಕಾರದ ಒಳಗಡೆ ತೆಗೆದುಕೊಳ್ಳಲು ಒಪ್ಪಲಿಲ್ಲ.

ಆದರೆ ಆಗ ಬಿಜೆಪಿ ಯ ಮೂವರು ಸಂಸದರನ್ನು ಹಣ ಕೊಟ್ಟು ಖರೀದಿ ಮಾಡಲು ಪ್ರಯತ್ನ ಪಟ್ಟರು ಎಂದು ಆರೋಪ ಬಂದಾಗ ಮೊದಲೇ ಅಮರ್ ವರ್ತನೆ ಬಗ್ಗೆ ಬೇಸರ ದಲ್ಲಿದ್ದ ಗ್ರಹ ಸಚಿವ ಪಿ ಚಿದಂಬರಂ ಅಮರ್ ಸಿಂಗ್ ರನ್ನು ಸೀದಾ ತಿಹಾರ ಜೈಲಿಗೆ ಕಳುಹಿಸಿದರು.ಅಮರ್ ಸಿಂಗ್ ಕೆಟ್ಟ ಟೈಮ್ ಶುರು ಆಗಿದ್ದು ತಿಹಾರ ಜೈಲಿನಿಂದಲೇ

ಮಿತ್ರರೇನಿಸಿಕೊಂಡ ಅಮಿತಾಭ್ ಬಚ್ಚನ್ ಸುಬ್ರತೋ ರಾಯ್ ಅನಿಲ್ ಅಂಬಾನಿ ತಿಹಾರ ಹತ್ತಿರವು ಸುಳಿಯಲಿಲ್ಲ.ಅಷ್ಟೇ ಅಲ್ಲ ಜಾಮೀನು ಹೋರಾಟ ಮಾಡುತ್ತಿದ್ದಾಗ ಯಾವುದೇ ರಾಜಕಾರಣಿ ಸಹಾಯ ಮಾಡಲಿಲ್ಲ.ಸ್ವತಃ ಅಮರ ಸಿಂಗ್ ನನ್ನ ತಮ್ಮ ಎನ್ನುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅಮರ್ ರನ್ನು ಪಕ್ಷದಿಂದ ಹೊರಗೆ ಹಾಕುತ್ತಾರೆ.ಒಮ್ಮೆಲೇ ಅಮರ್ ಸಿಂಗ್ ಮಿತ್ರರನ್ನು ಕಳೆದುಕೊಂಡು ಏಕಾಂಗಿ ಆಗ ತೊಡಗುತ್ತಾರೆ.ಅಮರ ಸಿಂಗ್ ರನ್ನು ಪಕ್ಷ ಉಚ್ಛಾಟಿಸಿದರು ಜಯಾ ಬಚ್ಚನ್ ರಾಜ್ಯ ಸಭಾ ಸ್ಥಾನ ಕ್ಕೆ ರಾಜೀನಾಮೆ ಕೊಡದೆ ಮುಲಾಯಂ ಜೊತೆ ನಿಲ್ಲಲು ತೀರ್ಮಾನಿಸಿದಾಗ ಅಮಿತಾಭ ಬಚ್ಚನ್ ಮತ್ತು ಅಮರ ಸಿಂಗ್ ರ 15 ವರ್ಷದ ಗೆಳೆತನ ಮುರಿದು ಬೀಳುತ್ತದೆ.ಜೈಲಿನಿಂದ ಹೊರಗೆ ಬಂದ ಅಮರ ಸಿಂಗ್ ಹಳೆಯ ಮಿತ್ರರ ವಿರುದ್ಧ ಹೇಳಿಕೆ ಕೊಟ್ಟರು ರಾಜಕೀಯ ದಲ್ಲಾಗಲಿ ಉದ್ಯಮದಲ್ಲಾಗಲಿ ಯಾರು ಕ್ಯಾರೇ ಅನ್ನುವವರು ಇರುವುದಿಲ್ಲ.

ಒಂದು ಕಾಲದಲ್ಲಿ ಲಕ್ ನೌ ದಿಲ್ಲಿ ಮುಂಬೈ ಗಳಲ್ಲಿ ಅತ್ಯಂತ ಪ್ರಭಾವಿ ಎನಿಸಿ ಕೊಂಡಿದ್ದ ಅಮರ ಸಿಂಗ್ ನೇಪಥ್ಯಕ್ಕೆ ಸರಿದಾಗ ಬಹು ಕಾಲದ ಗೆಳತಿ ಜಯಪ್ರದಾ ಬಿಟ್ಟರೆ ಯಾರು ಜೊತೆಗೆ ಇರುವುದಿಲ್ಲ. ಆ ರಾಜಕೀಯ ಪ್ರಭಾವ ವಿಮಾನದ ಹಾರಾಟ ಗ್ಲಾಮರ್ ಚಿತ್ರ ನಟ ನಟಿಯರ ಸಾಂಗತ್ಯ ಉದ್ಯಮಿ ಗಳ ಜೊತೆಗಿನ ಪಾರ್ಟಿಗಳು ಇತಿಹಾಸದ ಪುಟ ಸೇರಿ ಎರಡು ಕಿಡ್ನಿ ಕಳೆದು ಕೊಂಡು ಅಮರ್ ಸಿಂಗ್ ಸಿಂಗಾಪುರ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿ ಕೊಳ್ಳಲು ಅಡ್ಮಿಟ್ ಆಗುತ್ತಾರೆ.

ಇಷ್ಟೆಲ್ಲ ಆದ ಬಳಿಕವೂ 2016 ರಲ್ಲಿ ಮುಲಾಯಂ ತಮ್ಮ ಶಿವಪಾಲ್ ಮೂಲಕ ಸಮಾಜವಾದಿ ಪಕ್ಷದ ರಾಜ್ಯ ಸಭಾ ಸ್ಥಾನವನ್ನು 4 ನೇ ಬಾರಿಗೆ ಪಡೆದು ಕೊಂಡರು ಕೂಡ ಅಖಿಲೇಶ್ ಯಾದವ್ ಅಮರ ಸಿಂಗ್ ರನ್ನು ದೂರ ಇಡುತ್ತಾರೆ.ಎಷ್ಟರ ಮಟ್ಟಿಗೆ ಅಂದರೆ ತಂದೆ ಮುಲಾಯಂ ಮತ್ತು ಪುತ್ರ ಅಖಿಲೇಶ್ ಯಾದವ್ ನಡುವಿನ ಜಗಳಕ್ಕೆ ಪುನರಪಿ ಮುಲಾಯಂ ಅಮರ್ ಸಿಂಗ್ ರನ್ನು ಹತ್ತಿರ ಬಿಟ್ಟು ಕೊಂಡಿದ್ದೆ ಕಾರಣ ಎಂದು ಹೇಳಲಾಗುತ್ತದೆ.

ಆದರೆ ಮತ್ತೆ ಒಂದು ವರ್ಷದಿಂದ ಕಿಡ್ನಿ ಸೋಂಕು ಜಾಸ್ತಿ ಆಗಿ ಅಮರ ಸಿಂಗ್ ಸಿಂಗಾಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಮ್ಮಿಶ್ರ ಸರ್ಕಾರಗಳ ಅನಿವಾರ್ಯತೆಯ ಕಾರಣದಿಂದ ಹುಟ್ಟಿ ಕೊಂಡ ಒಬ್ಬ ಮಹತ್ವಾಕಾಂಕ್ಷಿ ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು ಅಂತ್ಯ ಕಂಡಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

 ಅಮರ ಚಿತ್ರ ಕಥಾ , ಇಂಡಿಯಾ ಗೇಟ್

click me!