* ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹಾವಳಿ
* ಕಂದಹಾರ್‌ನಿಂದ ಭಾರತದ ಸಿಬ್ಬಂದಿ ವಾಪಸ್
* ವಿಶೇಷ ವಿಮಾನದಲ್ಲಿ ತವರಿಗೆ
ನವದೆಹಲಿ(ಜು.12): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹಾವಳಿ ಹೆಚ್ಚಾದ ಬೆನ್ನಲ್ಲೆ, ಕಂದಹಾರ್‌ನಲ್ಲಿದ್ದ ತನ್ನೆಲ್ಲಾ ದೂತಾವಾಸ ಕಚೇರಿ ಮತ್ತು ಭದ್ರತಾ ಸಿಬ್ಬಂದಿಯನ್ನು ಭಾರತ ತೆರವು ಮಾಡಿದ್ದು, ಅವರನ್ನು ತವರಿಗೆ ಕರೆಸಿಕೊಂಡಿದೆ. ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಇಟ್ಟಕಾರಣ ಈ ಕ್ರಮವನ್ನು ಅದು ಕೈಗೊಂಡಿದೆ.
ಶನಿವಾರ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಕಂದಹಾರ್‌ಗೆ ತೆರಳಿ, ಅಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ತವರಿಗೆ ಕರೆತಂದಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.
undefined
ಅಪಹರಣ ಸಾಧ್ಯತೆ ಇತ್ತು:
ಭಾನುವಾರ ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ, ಕಂದಹಾರ್‌ನಲ್ಲಿ ತೀವ್ರ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಭಾರತೀಯ ನಾಗರಿಕರ ಅಪಹರಣದ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ರಾಯಭಾರ ಕಚೇರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಆದರೆ ಸ್ಥಳೀಯ ಸಿಬ್ಬಂದಿಗಳ ನೆರವಿನೊಂದಿಗೆ ದೂತಾವಾಸ ಕಚೇರಿ ತನ್ನ ಸೇವೆ ಮುಂದುವರೆಸಲಿದೆ. ಜೊತೆಗೆ ಭಾರತೀಯ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಆಫ್ಘಾನಿಸ್ತಾನ ನಮ್ಮ ಮಹತ್ವದ ಪಾಲುದಾರ ದೇಶವಾಗಿದ್ದು, ಶಾಂತಿಯುತ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ಆಫ್ಘಾನಿಸ್ತಾನಕ್ಕೆ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.
20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಸೇನೆ, ಇತ್ತೀಚೆಗೆ ಅಲ್ಲಿಂದ ಪೂರ್ಣ ಪ್ರಮಾಣದಲ್ಲಿ ತೆರವಾಗಿದೆ. ಬಳಿಕ ದೇಶದಲ್ಲಿ ತಾಲಿಬಾನ್ ಉಗ್ರರ ಹಾವಳಿ ಹೆಚ್ಚಾಗಿದ್ದು, ದೇಶದ ಶೇ.85ರಷ್ಟು ಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾಗಿ ಘೋಷಿಸಿವೆ.