Omicron Cases In Karnataka: ಕರುನಾಡಿನ ಮೂಲಕ ಭಾರತಕ್ಕೆ ಕಾಲಿಟ್ಟ ಒಮಿಕ್ರಾನ್, ಇಬ್ಬರಲ್ಲಿ ಪತ್ತೆ!

By Suvarna NewsFirst Published Dec 2, 2021, 4:50 PM IST
Highlights

* ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಒಮಿಕ್ರಾನ್ ಪತ್ತೆ

* ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಪತ್ತೆ

* ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್?

ಬೆಂಗಳೂರು(ಡಿ.02): ಕೊರೋನಾ ಮೊದಲ ಹಾಗೂ ಎರಡನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ ಮತ್ತೊಂದು ಅಲೆ ದಾಳಿ ಇಡುವ ಸಾಧ್ಯತೆ ಕಂಡು ಬಂದಿದೆ. ಹೌದು ದಕ್ಷಿಣ ಆಫ್ರಿಕಾದಿಂದ ಬಂದ ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ (Omicron) ಪತ್ತೆಯಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯವು (Union Health Ministry) ಸುಮಾರು 29 ದೇಶಗಳಲ್ಲಿ ಇಲ್ಲಿಯವರೆಗೆ 373 ಒಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ವರದಿಯಾಗುವೆ ಎಂದು ಹೇಳಿದರು.

"ಆರೋಗ್ಯ ಸಚಿವಾಲಯ ಸ್ಥಾಪಿಸಿದ 37 ಪ್ರಯೋಗಾಲಯಗಳ INSACOG ಒಕ್ಕೂಟದ ಜೀನೋಮ್ ಅನುಕ್ರಮ (Genome sequencing effort of INSACOG consortium) ಪ್ರಯತ್ನದ ಮೂಲಕ" ಲಭ್ಯವಾದ ವರದಿಯನ್ವಯ ವಿದೇಶದಿಂದ ಆಗಮಿಸಿದ ಕರ್ನಾಟಕದ ಇಬ್ಬರು ಪುರುಷರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಎರಡು ಪ್ರಕರಣಗಳು" ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

"

45 ವರ್ಷದ ಓರ್ವ ಹಾಗೂ 66 ವರ್ಷದ ಓರ್ವ ವೃದ್ಧನಿಗೆ ಈ ಸೋಂಕು ಕಾಣಿಸಿಕೊಂಡಿದೆ. ಎರಡೂ ಓಮಿಕ್ರಾನ್ ಪ್ರಕರಣಗಳ ಪ್ರಾಥಮಿಕ, ದ್ವಿತೀಯಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ಇದೇ ವೇಳೆ ಜನರು ಭಯಭೀತರಾಗದಂತೆ ಮನವಿ ಮಾಡಿಕೊಂಡಿರುವ ಕೇಂದ್ರ, ಕೊರೋನಾ ತಡೆಗಟ್ಟಲು ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. 

ದೆಹಲಿಯಲ್ಲಿ ಸಿಎಂ ಬೊಮ್ಮಾಯಿ

ಇನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಇಂದು, ಗುರುವಾಗ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ಆದರೀಗ ಒಮಿಕ್ರಾನ್ ಪ್ರಕರಣಗಳು ವರದಿಯಾದ ಹಿನ್ನೆಲೆ ಇಂದು ರಾತ್ರಿಯೇ ಮರಳಿ ರಾಜ್ಯಕ್ಕೆ ಬರಲಿದ್ದಾರೆ. ಅಲ್ಲದೇ ನಾಳೆ ಸಚಿವರೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಒಮಿಕ್ರಾನ್‌ ಭೀತಿ ಬೆನ್ನಲ್ಲೇ 3ನೇ ಡೋಸ್‌ ಸಾಧ್ಯತೆ :  ಹೆಚ್ಚುವರಿ ಲಸಿಕೆ ಅಗತ್ಯವಿದೆಯೇ?

ಜಗತ್ತಿನಾದ್ಯಂತ ಒಮಿಕ್ರೋನ್‌ ಕೋವಿಡ್‌ ರೂಪಾಂತರಿ (Covid 19 Variant Omicron) ತಳಿ ಬಗ್ಗೆ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ, ಭಾರತದಲ್ಲಿ 3ನೇ ಡೋಸ್‌ ಲಸಿಕೆ (Corona Virus 3rd Dose in India) ವಿತರಿಸುವ ಸಂಬಂಧ ಮುಂದಿನ ಎರಡರಿಂದ ಮೂರು ವಾರಗಳ ಒಳಗಾಗಿ ನೀತಿ ರೂಪಿಸುವ ಸಾಧ್ಯತೆ ಇದೆ. ತಜ್ಞರು (Experts) ಈ ಕುರಿತಂತೆ ಸತತ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಸಿಕೆ ಪಡೆದೂ ರೋಗ ನಿರೋಧಕ (Immunity) ಶಕ್ತಿ ವೃದ್ಧಿಸದ ಜನರಿಗೆ ಹೆಚ್ಚುವರಿ ಡೋಸ್‌ ಅಗತ್ಯವಿದೆಯೇ? ಅಥವಾ ಆರೋಗ್ಯವಂತರಿಗೆ ಬೂಸ್ಟರ್‌ ಡೋಸ್‌ ಬೇಕೇ, ಮೂರನೇ ಡೋಸ್‌ ಅನ್ನು ಯಾವಾಗ ನೀಡಬೇಕು? ಮೂರನೇ ಡೋಸ್‌ ನೀಡುವವರು ಯಾರು? ಎರಡು ಮತ್ತು ಮೂರನೇ ಡೋಸ್‌ ನಡುವಿನ ಅಂತರ ಏನು ಎಂಬ ಬಗ್ಗೆ ವಿಸ್ತೃತ ನೀತಿ ರೂಪಿಸುವ ಸಾಧ್ಯತೆ ಇದೆ.

ಎರಡೂ ಡೋಸ್‌ ಲಸಿಕೆ ಪಡೆದೂ ರೋಗ ನಿರೋಧಶಕ್ತಿ ಹೆಚ್ಚದವರಿಗೆ ನೀಡಲಾಗುವ ಲಸಿಕೆಯೇ ಹೆಚ್ಚುವರಿ ಡೋಸ್‌. ಆರೋಗ್ಯವಂತ ಜನರಿಗೆ (Healthy People) ಎರಡೂ ಡೋಸ್‌ ಲಸಿಕೆ ಪಡೆದ ನಂತರ ಕೆಲವು ತಿಂಗಳ ಬಳಿಕ ಮತ್ತೆ ಲಸಿಕೆ ನೀಡುವುದನ್ನು ಬೂಸ್ಟರ್‌ ಡೋಸ್‌ ಎನ್ನಲಾಗುತ್ತದೆ. ಈ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಡೋಸ್‌ ನೀಡಿಕೆಗೇ ಹೆಚ್ಚು ಆದ್ಯತೆ ನೀಡಬೇಕು ಎನ್ನಲಾಗುತ್ತಿದೆ.

click me!