ದೇಶದ ಮೊದಲ ಮಕ್ಕಳ ಲಸಿಕೆಗೆ ಇನ್ನೊಂದು ವಾರದಲ್ಲಿ ಅನುಮತಿ!

By Suvarna NewsFirst Published Jun 21, 2021, 8:06 AM IST
Highlights

* ದೇಶದ ಮೊದಲ ಮಕ್ಕಳ ಲಸಿಕೆಗೆ ಇನ್ನೊಂದು ವಾರದಲ್ಲಿ ಅನುಮತಿ

* ತುರ್ತು ಬಳಕೆಗೆ ಅನುಮತಿ ಕೋರಿ ಝೈಡಸ್‌ ಅರ್ಜಿ

* ಝೈಕೋವಿಡ್‌ 3 ಡೋಸ್‌ನ ದೇಶಿ ಕೋವಿಡ್‌ ಲಸಿಕೆ

ನವದೆಹಲಿ(ಜೂ.21): 3ನೇ ಅಲೆಯಿಂದ ಮಕ್ಕಳನ್ನು ಕಾಪಾಡಲು ಕೇಂದ್ರ ಸರ್ಕಾರ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊತ್ತಿನಲ್ಲೇ, ಮಕ್ಕಳಿಗೆ ನೀಡಬಹುದಾದಂಥ ದೇಶದ ಮೊದಲ ಕೋವಿಡ್‌ ಲಸಿಕೆಗೆ ಇನ್ನೊಂದು ವಾರದಲ್ಲಿ ತುರ್ತು ಬಳಕೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಅಹಮದಾಬಾದ್‌ ಮೂಲದ ದೇಶೀಯ ಕಂಪನಿ ಝೈಡಸ್‌ ಕ್ಯಾಡಿಲಾ ಈಗಾಗಲೇ ಝೈಕೋವಿಡ್‌-ಡಿ ಎಂಬ ಲಸಿಕೆ ಅಭಿವೃದ್ಧಿಪಡಿಸಿದ್ದು, ಅದನ್ನು ಹಿರಿಯರು ಮತ್ತು ಮಕ್ಕಳ (12-18ರ ವಯೋಮಾನ) ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದೆ. ಇದು ಎಷ್ಟುಪರಿಣಾಮಕಾರಿ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ ಮತ್ತು ಉತ್ತಮ ಪರಿಣಾಮವನ್ನೂ ತೋರಿಸಿದೆ ಎನ್ನಲಾಗುತ್ತಿದೆ.

ಈ ಅಂಕಿ ಸಂಖ್ಯೆಗಳ ಆಧಾರದಲ್ಲೇ ಝೈಡಸ್‌ ಕ್ಯಾಡಿಲಾ ಕಂಪನಿ ತನ್ನ ಮೂರನೇ ಹಂತದ ಪರೀಕ್ಷೆಯ ಮಧ್ಯಂತರ ವರದಿಯನ್ನು ಆಧರಿಸಿ, ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಜಿಸಿಎ)ಗೆ ಅರ್ಜಿ ಸಲ್ಲಿಸಿದೆ. ಅದು ಈಗಾಗಲೇ ದತ್ತಾಂಶಗಳ ಪರಿಶೀಲನೆ ಆರಂಭಿಸಿದ್ದು, ಇನ್ನು 8-10 ದಿನದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

3 ಡೋಸ್‌ ಲಸಿಕೆ:

ಭಾರತದಲ್ಲಿ ಹಾಲಿ ನೀಡುತ್ತಿರುವ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌ 2 ಡೋಸ್‌ನ ಲಸಿಕೆಗಳಾಗಿವೆ. ಆದರೆ ಝೈಕೋವಿಡ್‌-ಡಿ 3 ಡೋಸ್‌ನದ್ದಾಗಿದೆ. ಮೊದಲ ಡೋಸ್‌ ಪಡೆದ 28 ದಿನೇ 2ನೇ ಡೋಸ್‌ ಮತ್ತು ಮೊದಲ ಡೋಸ್‌ ಪಡೆದ 56ನೇ ದಿನ 3ನೇ ಡೋಸ್‌ ಪಡೆದುಕೊಳ್ಳಬೇಕು.

click me!