ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ

Published : Dec 05, 2025, 04:30 PM IST
India Russia Submarine Deal

ಸಾರಾಂಶ

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ, ಜಗತ್ತಿನಲ್ಲಿ ಐದು ದೇಶಗಳು ಮಾತ್ರವೇ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ, ಕಾರ್ಯಾಚರಿಸುವ ಸಾಮರ್ಥ್ಯ ಗಳಿಸಿವೆ. ಭಾರತವೂ ಈ ಗುಂಪಿನಲ್ಲಿ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಾಲ್ಕು ವರ್ಷಗಳ ಅಂತರದ ಬಳಿಕ, ಡಿಸೆಂಬರ್ 4ರಂದು ನವದೆಹಲಿಯಲ್ಲಿ ಬಂದಿಳಿದರು. ಈ ಭೇಟಿ ರಾಜತಾಂತ್ರಿಕ ಸೌಹಾರ್ದತೆಗಿಂತಲೂ ದೊಡ್ಡ ವಿಚಾರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಮುಖ ಚರ್ಚೆಯ ವಿಚಾರವಾಗಿದೆ. ಭಾರತ ರಷ್ಯಾದ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಯ ಗುತ್ತಿಗೆಗಾಗಿ 2 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಅಂತಿಮಗೊಳಿಸಲು ಸಜ್ಜಾಗಿದ್ದು, ಇದು ಕಳೆದ ಹಲವು ದಶಕಗಳಲ್ಲಿ ಭಾರತ ನಮ್ಮ ನೀರಿನಾಳದ ರಕ್ಷಣೆಯಲ್ಲಿ ಕೈಗೊಂಡ ಅತ್ಯಂತ ಮಹತ್ವಾಕಾಂಕ್ಷಿ ನಡೆಯಾಗಿದೆ. ಇದು ಕೇವಲ ಇನ್ನೊಂದು ರಕ್ಷಣಾ ಖರೀದಿ ಮಾತ್ರವಲ್ಲ. ಇದೊಂದು ಕಾರ್ಯತಂತ್ರದ ಸಂದೇಶವೂ ಆಗಿದ್ದು, ದಿನೇ ದಿನೇ ಉದ್ವಿಗ್ನವಾಗುತ್ತಿರುವ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಭಾರತ ತನ್ನನ್ನು ತಾನು ಎಲ್ಲಿಡಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.

5 ದೇಶಕ್ಕೆ ಮಾತ್ರ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ, ಕಾರ್ಯಾಚರಿಸುವ ಸಾಮರ್ಥ್ಯ

ಈ ವಿಚಾರ ಯಾಕೆ ಇಷ್ಟು ಮಹತ್ವ ಗಳಿಸಿದೆ ಎನ್ನುವುದನ್ನು ಈ ಲೇಖನದಲ್ಲಿ ಗಮನಿಸೋಣ. ಸದ್ಯದ ಮಟ್ಟಿಗೆ, ಜಗತ್ತಿನಲ್ಲಿ ಕೇವಲ ಐದು ದೇಶಗಳು ಮಾತ್ರವೇ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ, ಕಾರ್ಯಾಚರಿಸುವ ಸಾಮರ್ಥ್ಯ ಗಳಿಸಿವೆ. ಅವೆಂದರೆ: ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾ ಮತ್ತು ರಷ್ಯಾ. ಇದೊಂದು ವಿಶೇಷ ಸ್ಥಾನವಾಗಿದ್ದು, ಭಾರತವೂ ಈ ಗುಂಪಿನಲ್ಲಿ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದೆ. ಆದರೆ, ಇಂತಹ ಭಾರೀ ಯಂತ್ರೋಪಕರಣಗಳನ್ನು ನಿರ್ಮಿಸಲು ಹಲವಾರು ದಶಕಗಳ ಮೂಲಭೂತ ವ್ಯವಸ್ಥೆಗಳು, ತಾಂತ್ರಿಕ ಜ್ಞಾನ ಬೇಕು.‌ ಅದನ್ನು ಇದ್ದಕ್ಕಿದ್ದಂತೆ ಒಂದು ದಿನದಲ್ಲಿ ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ಭಾರತ ಈಗ ಕಾರ್ಯತಂತ್ರದ ವಿಧಾನವನ್ನು ಅನುಸರಿಸುತ್ತಿದೆ. ಮೊದಲಿಗೆ ಇಂತಹ ಜಲಾಂತರ್ಗಾಮಿ ನೌಕೆಯನ್ನು ಗುತ್ತಿಗೆಗೆ ಪಡೆದುಕೊಳ್ಳುವುದು, ಅದರ ಕುರಿತು ಎಲ್ಲವನ್ನೂ ಕಲಿತುಕೊಂಡು, ಕೊನೆಗೆ ಸ್ವಂತವಾಗಿ ಇಂತಹ ಜಲಾಂತರ್ಗಾಮಿಯನ್ನು ನಿರ್ಮಿಸುವುದು.

ಈ ಒಪ್ಪಂದ ಬಹುತೇಕ ಕಳೆದ ಹತ್ತು ವರ್ಷಗಳಿಂದ ಮಾತುಕತೆಯ ಹಂತದಲ್ಲಿತ್ತು. ವೆಚ್ಚ ಮತ್ತು ತಾಂತ್ರಿಕ ವಿಚಾರಗಳ ಕುರಿತ ಅಸಮಾಧಾನಗಳ ಕಾರಣದಿಂದ ಮಾತುಕತೆಗಳು ಆಗಾಗ್ಗೆ ಆರಂಭಗೊಳ್ಳುತ್ತಿದ್ದವು, ಹಾಗೇ ನಿಂತುಬಿಡುತ್ತಿದ್ದವು. ಭಾರತೀಯ ಅಧಿಕಾರಿಗಳು ಇತ್ತೀಚೆಗೆ ಪ್ರಗತಿ ಪರಿಶೀಲನೆಗಾಗಿ ರಷ್ಯಾದ ಶಿಪ್‌ಯಾರ್ಡ್‌ಗೆ ಭೇಟಿ ನೀಡಿದ್ದು, ಈ ವಿಚಾರದ ಕುರಿತು ಸ್ಪಷ್ಟ ಮಾಹಿತಿ ಹೊಂದಿರುವ ಮೂಲಗಳು ಈಗ ಬಹುತೇಕ ಅಡೆತಡೆಗಳು, ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದಿದ್ದಾರೆ. ಎಲ್ಲವೂ ಯೋಜಿಸಿದ ರೀತಿಯಲ್ಲೇ ಜಾರಿಗೆ ಬಂದರೆ, ಭಾರತ ಮುಂದಿನ ಎರಡು ವರ್ಷಗಳ ಅವಧಿಯಲ್ಲೇ ಜಲಾಂತರ್ಗಾಮಿಯನ್ನು ಪಡೆಯಬಹುದು. ಆದರೂ ಇಂತಹ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣತೆಯ ಕಾರಣದಿಂದ ಒಂದಷ್ಟು ವಿಳಂಬವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಟ್ರಂಪ್ ತೆರಿಗೆ ನಡುವ ರಷ್ಯಾ ಜೊತೆ ಒಪ್ಪಂದ

ಈ ಒಪ್ಪಂದದ ಸಮಯವೂ ಇದಕ್ಕಿಂತ ಆಸಕ್ತಿಕರವಾಗಲು ಸಾಧ್ಯವಿಲ್ಲ. ಭಾರತ ಈಗ ರಾಜತಾಂತ್ರಿಕತೆಯ ವಿಚಾರದಲ್ಲಿ ಹಗ್ಗದ ಮೇಲಿನ ನಡಿಗೆ ಮಾಡುತ್ತಿದ್ದು, ಅಮೆರಿಕದ ಜೊತೆಗೆ ಸಂಕೀರ್ಣ ಸಂಬಂಧವನ್ನು ನಿಭಾಯಿಸುತ್ತಲೇ ರಷ್ಯಾದ ಜೊತೆಗಿನ ಸಂಬಂಧವನ್ನು ನಿಭಾಯಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತೀಯ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸಿದ್ದು, ಭಾರತ ರಷ್ಯನ್ ತೈಲ ಖರೀದಿಸುವುದರ ವಿರುದ್ಧ ಒತ್ತಡ ಹೇರಲು ಈ ತಂತ್ರ ಅನುಸರಿಸಿದ್ದಾರೆ. ಇಷ್ಟೆಲ್ಲ ಒತ್ತಡಗಳ ನಡುವೆಯೂ, ನವದೆಹಲಿ ಮಾಸ್ಕೋ ಜೊತೆಗಿನ ತನ್ನ ರಕ್ಷಣಾ ಸಂಬಂಧವನ್ನು ಮುಂದುವರಿಸಿದ್ದು, ಕೆಲವೇ ದೇಶಗಳು ಪ್ರಾವೀಣ್ಯತೆ ಹೊಂದಿರುವ ಮತ್ತು ಸಹಕರಿಸಲು ಸಿದ್ಧವಿರುವ ನ್ಯೂಕ್ಲಿಯರ್ ಪ್ರೊಪಲ್ಷನ್ ತಂತ್ರಜ್ಞಾನದಂತಹ ಸೂಕ್ಷ್ಮ ಕ್ಷೇತ್ರದಲ್ಲೂ ಕಾರ್ಯಾಚರಿಸುತ್ತಿದೆ.

ಹಾಗಾದರೆ, ಈ ಎಸ್ಎಸ್ಎನ್ ಎಂದರೇನು? ಈ ಪದ ಶಿಪ್ ಸಬ್‌ಮರ್ಸಿಬಲ್ ನ್ಯೂಕ್ಲಿಯರ್ ಎನ್ನುವುದರ ಹೃಸ್ವರೂಪವಾಗಿದ್ದು, ಆಕ್ರಮಣ ಕಾರ್ಯಾಚರಣೆಗಳಿಗೆ ಬಳಕೆಯಾಗುವ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿಗಳನ್ನು ಸೂಚಿಸುತ್ತದೆ. ತಮ್ಮ ಡೀಸೆಲ್ - ಇಲೆಕ್ಟ್ರಿಕ್ ಸೋದರ ಜಲಾಂತರ್ಗಾಮಿಗಳ ರೀತಿಯಲ್ಲದೆ, ಇವುಗಳು ನಿರಂತರವಾಗಿ 40ರಿಂದ 60 ದಿನಗಳ ಕಾಲ ನೀರಿನಾಳದಲ್ಲಿ ಮುಳುಗಿರಬಲ್ಲವು. ಅಷ್ಟಾದರೂ ಸಿಬ್ಬಂದಿಗಳ ಅಗತ್ಯಕ್ಕೆ ಮತ್ತು ಆಹಾರ ಪೂರೈಕೆಗಾಗಿ ಇವು ಮೇಲೆ ಬರಬೇಕೇ ಹೊರತು, ಇಂಧನಕ್ಕಾಗಿ ಅಲ್ಲ! ಈ ಜಲಾಂತರ್ಗಾಮಿಗಳು ಅಸಾಧಾರಣ ವೇಗವನ್ನೂ ಹೊಂದಿದ್ದು, 24ರಿಂದ 30 ನಾಟ್‌ಗಳಷ್ಟು ವೇಗವಾಗಿ ಸಾಗಬಲ್ಲದು. ಅಂದರೆ, ಇದು ಗಂಟೆಗೆ 40ರಿಂದ 55 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇವುಗಳ ಕಾರ್ಯಾಚರಣೆಗಳಲ್ಲಿ ಶತ್ರು ಸಬ್‌ಮರೀನ್‌ಗಳ ಬೇಟೆ, ಸಮುದ್ರದ ಮೇಲ್ಮೈಯಲ್ಲಿರುವ ಹಡಗುಗಳ ಮೇಲಿನ ದಾಳಿ, ಗುಪ್ತಚರ ಮಾಹಿತಿ ಸಂಗ್ರಹಣೆ, ಮತ್ತು ವಿಶೇಷ ಕಾರ್ಯಾಚರಣೆಗಳಿಗೆ ಬೆಂಬಲಗಳು ಸೇರಿವೆ. ಎಸ್ಎಸ್ಎನ್‌ಗಳು ಸಾಮಾನ್ಯವಾಗಿ ಮಧ್ಯಮ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಲು ಬಳಸುವ ಆಯುಧಗಳಾದ ಕ್ರೂಸ್ ಕ್ಷಿಪಣಿಗಳು ಮತ್ತು ಟಾರ್ಪಿಡೋಗಳನ್ನು ಹೊಂದಿವೆ. ಆ ಮೂಲಕ ಇವು ಕಾರ್ಯತಂತ್ರದ ಪರಮಾಣು ದಾಳಿಗಳಿಗಿಂತಲೂ ಕಾರ್ಯತಂತ್ರದ ಯುದ್ಧಕ್ಕೆ ಪೂರಕವಾಗಿವೆ.

ಇನ್ನು ಚೀನಾದ ವಿಚಾರವೂ ಇಲ್ಲಿ ಕಡೆಗಣಿಸಲು ಸಾಧ್ಯವಿಲ್ಲದಂತಾಗುತ್ತದೆ. ನಮ್ಮ ಉತ್ತರದ ನೆರೆ ರಾಷ್ಟ್ರ ಚೀನಾದ ಬಳಿ ಬಹುತೇಕ 60 ಜಲಾಂತರ್ಗಾಮಿಗಳು ಕಾರ್ಯಾಚರಿಸುತ್ತಿದ್ದು, ಅವುಗಳ ಪೈಕಿ ಬಹುತೇಕ 20 ಪರಮಾಣು ಚಾಲಿತವಾಗಿವೆ. ಕಳೆದ ವರ್ಷ ಚೀನಾದ ಹೊಸದಾದ ಪರಮಾಣು ದಾಳಿ ಜಲಾಂತರ್ಗಾಮಿಗಳ ಪೈಕಿ ಒಂದು ಮುಳುಗಿಹೋಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಭಾರತದ ಬಳಿ 20ಕ್ಕೂ ಕಡಿಮೆ ಜಲಾಂತರ್ಗಾಮಿಗಳಿದ್ದು, ಕೇವಲ ಮೂರು ಪರಮಾಣು ಚಾಲಿತ ಜಲಾಂತರ್ಗಾಮಿಗಳಿವೆ. ಆದರೆ, ಗಮನಾರ್ಹ ಅಂಶವೆಂದರೆ, ನಮ್ಮ ಬಳಿ ಇರುವುದು ಎಸ್ಎಸ್‌ಬಿಎನ್ ಗಳೇ ಹೊರತು ಎಸ್ಎಸ್ಎನ್‌ಗಳಲ್ಲ.

ಎಸ್ಎಸ್‌ಬಿಎನ್ ಎನ್ನುವುದು ಶಿಪ್ ಸಬ್‌ಮರೀನ್ ಬ್ಯಾಲಿಸ್ಟಿಕ್ ನ್ಯೂಕ್ಲಿಯರ್ ಎನ್ನುವುದರ ಹೃಸ್ವರೂಪವಾಗಿದ್ದು, ಇದೊಂದು ಸಂಪೂರ್ಣ ಭಿನ್ನ ದೈತ್ಯನಾಗಿದೆ. ಇವು ದೊಡ್ಡ ಜಲಾಂತರ್ಗಾಮಿಗಳಾಗಿದ್ದು, ಪರಮಾಣು ದಾಳಿ ರಕ್ಷಣೆಗಾಗಿ ನಿರ್ಮಿತವಾಗಿವೆ. ಇವುಗಳು ದೀರ್ಘ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದ್ದು, ಅವುಗಳು ಪರಮಾಣು ಸಿಡಿತಲೆಗಳನ್ನು ಸಾವಿರಾರು ಕಿಲೋಮೀಟರ್ ದೂರದ ತನಕ ತಲುಪಿಸಬಲ್ಲವು. ಭಾರತದ ಮೊದಲ ಎರಡು ಎಸ್ಎಸ್‌ಬಿಎನ್ ಗಳಾದ, ತಲಾ 6,000 ಟನ್‌ಗಳಷ್ಟು ತೂಕ ಹೊಂದಿರುವ ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್‌ಗಳು 2018 ಮತ್ತು 2024ರಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಗೊಳಿಸಿದವು. ಮೂರನೆಯ ಎಸ್ಎಸ್‌ಬಿಎನ್ ಐಎನ್ಎಸ್ ಅರಿದಮನ್ ಇನ್ನೂ ಪರೀಕ್ಷಾ ಹಂತದಲ್ಲಿದೆ. ನಾಲ್ಕನೇ ಜಲಾಂತರ್ಗಾಮಿ 2027ರಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಗಳಿವೆ. ಈ ಜಲಾಂತರ್ಗಾಮಿಗಳು 750ರಿಂದ 1,500 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೆ-15 ಸಾಗರಿಕ, ಮತ್ತು ಹೊಸದಾದ, 3,500 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೆ-4 ಕ್ಷಿಪಣಿಗಳನ್ನು ಹೊಂದಿದೆ. ಇವು ಭಾರತಕ್ಕೆ ರಕ್ಷಣಾ ಪರಿಭಾಷೆಯಲ್ಲಿ 'ಸರ್ವೈವೆಬಲ್ ಸೆಕೆಂಡ್ ಸ್ಟ್ರೈಕ್ ಕೆಪಾಬಿಲಿಟಿ', ಅಂದರೆ, ಭಾರತ ಒಂದು ಬಾರಿ ಭೀಕರ ಅಣ್ವಸ್ತ್ರ ದಾಳಿಗೆ ತುತ್ತಾದರೂ, ಸಮುದ್ರದಾಳದಲ್ಲಿ ಕುಳಿತಿರುವ ಜಲಾಂತರ್ಗಾಮಿ ಪ್ರತಿ ಅಣ್ವಸ್ತ್ರ ದಾಳಿ ನಡೆಸಬಲ್ಲದು.

ಆದರೆ, ಎಸ್ಎಸ್‌ಬಿಎನ್ ‌ಗಳು ಮತ್ತು ಎಸ್ಎಸ್ಎನ್‌ಗಳು ಮೂಲಭೂತವಾಗಿ ಪ್ರತ್ಯೇಕ ಉದ್ದೇಶಗಳನ್ನು ಹೊಂದಿವೆ. ಎಸ್ಎಸ್‌ಬಿಎನ್ ಗಳನ್ನು ಒಂದು ಪರಮೋಚ್ಚ ವಿಮಾ ಪಾಲಿಸಿ ಎಂದುಕೊಳ್ಳಬಹುದು. ಇವು ದೊಡ್ಡದಾದ, ಅತ್ಯಂತ ಭದ್ರತೆ ಹೊಂದಿರುವ ಜಲಾಂತರ್ಗಾಮಿಗಳಾಗಿದ್ದು, ಮೌನವಾಗಿಯೇ ಸಮುದ್ರದ ಆಳದಲ್ಲಿ ಕುಳಿತಿರುತ್ತವೆ. ಒಂದು ವೇಳೆ ಪರಮಾಣು ದಾಳಿ ನಡೆದರೆ, ತಮ್ಮ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಸುತ್ತವೆ. ಆದರೆ, ಇನ್ನೊಂದೆಡೆ ಎಸ್ಎಸ್ಎನ್‌ಗಳು ಸಣ್ಣದಾದ, ಕ್ಷಿಪ್ರವಾದ, ಬೇಟೆಗಾರ ಜಲಾಂತರ್ಗಾಮಿ ನೌಕೆಗಳಾಗಿದ್ದು, ಕ್ರೂಸ್ ಕ್ಷಿಪಣಿಗಳು ಮತ್ತು ಟಾರ್ಪಿಡೋಗಳನ್ನು ಹೊಂದಿವೆ. ಇವುಗಳನ್ನು ದೈನಂದಿನ ಕಾರ್ಯತಂತ್ರದ ಕಾರ್ಯಾಚರಣೆಗಳಿಗೆ, ವಿಚಕ್ಷಣೆಗೆ, ಮತ್ತು ಕಾರ್ಯತಂತ್ರದ ಯುದ್ಧಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ವಾತಾವರಣದಲ್ಲಿ ಅತ್ಯಂತ ಎತ್ತರಕ್ಕೆ ಸಾಗಿ, ಅಲ್ಲಿಂದ ದೂರದ ಗುರಿಗಳ ಮೇಲೆ ಬೀಳುತ್ತವೆ. ಆದರೆ, ಕ್ರೂಸ್ ಕ್ಷಿಪಣಿಗಳು ನೆಲಮಟ್ಟದಲ್ಲಿ ವೇಗವಾಗಿ ಸಾಗಿ, ದಾಳಿ ಮಾಡುವ ನೌಕೆಗಳು, ಕರಾವಳಿ ವ್ಯವಸ್ಥೆಗಳು, ಅಥವಾ ಭೂ ಗುರಿಗಳ ಮೇಲೆ‌ ನಿಖರವಾಗಿ ದಾಳಿ ಮಾಡುತ್ತವೆ.

ಭಾರತೀಯ ನೌಕಾಪಡೆ ಕಳೆದ ಬಹುತೇಕ ಐದು ವರ್ಷಗಳಿಂದ, ಸಕಾರಣವಾಗಿಯೇ ಎಸ್ಎಸ್ಎನ್‌ಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿತ್ತು. ಇವುಗಳ ಹೊರತಾಗಿ, ನಮ್ಮ ಸಬ್‌ಮರೀನ್ ಬಳಗ ಅಸಮತೋಲನಗೊಳ್ಳುತ್ತದೆ. ನಮ್ಮ‌ ಬಳಿ ಪರಮಾಣು ನಿರೋಧಕತೆಗೆ ಎಸ್ಎಸ್‌ಬಿಎನ್ ಗಳಿವೆ. ಆದರೆ, ಕ್ಷಿಪ್ರ, ಬಹುಮುಖಿ ದಾಳಿ ನಡೆಸುವ, ದೈನಂದಿನ ನೌಕಾಪಡೆಯ ಕಾರ್ಯಾಚರಣೆಗಳಿಗೆ ಮತ್ತು ಸಮುದ್ರದಾಳದ ಯುದ್ಧಕ್ಕೆ ಬೇಕಾಗುವ ಎಸ್ಎಸ್ಎನ್‌ಗಳ ಕೊರತೆಯಿದೆ. ಭಾರತ ಹಿಂದೆ ಚಕ್ರ ಎನ್ನುವ ರಷ್ಯನ್ ಜಲಾಂತರ್ಗಾಮಿಯನ್ನು 2011ರಿಂದ 2021ರ ತನಕ ಗುತ್ತಿಗೆಗೆ ಪಡೆದಿದ್ದು, ಅದು ಮೌಲ್ಯಯುತ ತರಬೇತಿ ಮತ್ತು ಕಾರ್ಯಾಚರಣಾ ಅನುಭವ ಒದಗಿಸಿತ್ತು.

ಈಗಿನ ನೂತನ ಗುತ್ತಿಗೆ ಹತ್ತು ವರ್ಷಗಳ ಅವಧಿಯದಾಗಿದ್ದು, ಒಂದು ಮುಖ್ಯ ನಿಬಂಧನೆಯನ್ನು ಹೊಂದಿದೆ. ಅದೇನೆಂದರೆ, ಜಲಾಂತರ್ಗಾಮಿಯನ್ನು ನೈಜ ಕದನದಲ್ಲಿ ಬಳಸಿಕೊಳ್ಳುವಂತಿಲ್ಲ. ಇದರ ಪ್ರಾಥಮಿಕ ಉದ್ದೇಶ ತರಬೇತಿಯಾಗಿದ್ದು, ನಮ್ಮ ನಾವಿಕರಿಗೆ ಪರಮಾಣು ಚಾಲಿತ ಜಲಾಂತರ್ಗಾಮಿಯನ್ನು ಕಾರ್ಯಾಚರಿಸುವುದು ಹೇಗೆ, ಕ್ರೂಸ್ ಕ್ಷಿಪಣಿ ನಿಯೋಜನೆಗೆ ಕಾರ್ಯತಂತ್ರ ರೂಪಿಸುವುದು ಹೇಗೆ ಎಂದು ತರಬೇತಿ ನೀಡಲು ಮತ್ತು ನಮ್ಮ ದೇಶೀಯ ಎಸ್ಎಸ್ಎನ್ ಯೋಜನೆಗೆ ನೆರವಾಗಲು ರಿಯಾಕ್ಟರ್ ಕಾರ್ಯಾಚರಣೆಗಳನ್ನು ಅರ್ಥೈಸಿಕೊಳ್ಳಲು ಬಳಸಲಾಗುತ್ತದೆ. ಭಾರತ ಕ್ರಮೇಣ ತನ್ನ ಸ್ವಂತ ದಾಳಿ ಜಲಾಂತರ್ಗಾಮಿ ನಿರ್ಮಿಸುವ ಗುರಿ ಹೊಂದಿದ್ದು, ಈ ಗುತ್ತಿಗೆ ಭಾರತಕ್ಕೆ ಜಲಾಂತರ್ಗಾಮಿ ಕಾರ್ಯಾಚರಣೆಯಲ್ಲಿ ವಿಸ್ತೃತ ತರಬೇತಿಯಾಗಲಿದೆ.

ಇಂಡೋ - ಪೆಸಿಫಿಕ್ ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿದ್ದು, ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ. ಈಗ ಪರಮಾಣು ಚಾಲಿತ ದಾಳಿ ಸಬ್‌ಮರೀನ್ ಹೊಂದುವ ಭಾರತದ ಪ್ರಯತ್ನ ಕೇವಲ ಮಿಲಿಟರಿ ಆಧುನೀಕರಣ ಮಾತ್ರವಲ್ಲದೆ, ನಾವು ಹೇಗೆ ಶಕ್ತಿಯುತವಾಗಲು ಬಯಸುತ್ತೇವೆ ಮತ್ತು ವಿಶಾಲ ಹಿಂದೂ ಮಹಾಸಾಗರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇವೆ ಎನ್ನುವುದನ್ನು ಪ್ರತಿನಿಧಿಸುತ್ತದೆ. 2 ಬಿಲಿಯನ್ ಡಾಲರ್‌ಗಳ ಈ ಹೂಡಿಕೆ ಅಂತಿಮವಾಗಿ ಭಾರತ ಭವಿಷ್ಯದಲ್ಲಿ ತನ್ನ ನೌಕಾಪಡೆಯನ್ನು ಸ್ವತಂತ್ರವಾಗಿ ತನ್ನ ಹಿತಾಸಕ್ತಿಗೆ ಬೇಕಾದಂತೆ ಎಲ್ಲಿ ಬೇಕಾದರೂ ಕಾರ್ಯಾಚರಿಸುವಂತೆ ಮಾಡಲು ಅತಿಮುಖ್ಯವಾಗಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್