ಅ.10 ಕೊನೆಯ ದಿನ, ಅಷ್ಟರೊಳಗೆ ಭಾರತ ಬಿಟ್ಟು ಹೊರಡಿ; ಕೆನಡಾ ರಾಜತಾಂತ್ರಿಕರಿಗೆ ಕೇಂದ್ರದ ಖಡಕ್‌ ಆದೇಶ!

Published : Oct 03, 2023, 04:36 PM IST
ಅ.10 ಕೊನೆಯ ದಿನ, ಅಷ್ಟರೊಳಗೆ ಭಾರತ ಬಿಟ್ಟು ಹೊರಡಿ; ಕೆನಡಾ ರಾಜತಾಂತ್ರಿಕರಿಗೆ ಕೇಂದ್ರದ ಖಡಕ್‌ ಆದೇಶ!

ಸಾರಾಂಶ

ದೇಶದಲ್ಲಿರುವ ಕೆನಡಾದ 62 ರಾಜತಾಂತ್ರಿಕರ ಪೈಕಿ 41 ಅಧಿಕಾರಿಗಳು ಭಾರತ ಬಿಟ್ಟು ಹೊರಡಬೇಕು. ಅದಕ್ಕೆ ಅಕ್ಟೋಬರ್‌ 10 ಕೊನೆಯ ದಿನ ಎಂದು ಕೇಂದ್ರ ಸರ್ಕಾರ ಕೆನಡಾ ರಾಯಭಾರ ಕಚೇರಿಗೆ ಸೂಚನೆ ನೀಡಿದೆ.

ನವಹದೆಲಿ (ಅ.3): ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಬೆನ್ನಲ್ಲಿಯೇ ಭಾರತದ ಜೊತೆಗಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿಕೊಂಡಿರುವ ಕೆನಡಾ ಸರ್ಕಾರಕ್ಕೆ ಭಾರತ ಮತ್ತೊಂದು ಆಘಾತ ನೀಡಿದೆ. ಭಾರತದಲ್ಲಿರುವ 41 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಾಸ್‌ ಕರೆಸಿಕೊಳ್ಳುವಂತೆ ಕೆನಡಾ ರಾಯಭಾರ ಕಚೇರಿ ಹಾಗೂ ಕೆನಡಾ ಸರ್ಕಾರಕ್ಕೆ ಭಾರತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಕ್ಟೋಬರ್ 10ರ ಒಳಗಾಗಿ ಇವರೆಲ್ಲರೂ ಭಾರತವನ್ನು ತೊರೆಯಬೇಕು ಎಂದು ಸೂಚನೆ ನೀಡಿದೆ. ಹಾಗೇನಾದರೂ ಅಕ್ಟೋಬರ್‌ 10ರ ನಂತರವೂ ಈ 41 ರಾಜತಾಂತ್ರಿಕರ ಪೈಕಿ ಯಾರಾದರೂ ಉಳಿದುಕೊಂಡಲ್ಲಿ ಅವರಿಗೆ ರಾಜತಾಂತ್ರಿಕ ವಿನಾಯಿತಿ ಹಾಗೂ ಇತರ ಪ್ರಯೋಜನಗಳನ್ನು ಭಾರತ ಸರ್ಕಾರ ನಿಲ್ಲಿಸಲಿದೆ ಎಂದು ಸೂಚನೆ ನೀಡಿದೆ. ಪ್ರಸ್ತುತ ಭಾರತದಲ್ಲಿ ಕೆನಡಾ 62 ರಾಜತಾಂತ್ರಿಕ ಅಧಿಕಾರಿಗಳು ಕೆಲಸ ಮಾಡುತ್ತಿದ್ದ, ಅಕ್ಟೋಬರ್‌ 10ರ ಬಳಿಕ ಕೆನಡಾದ 21 ಅಧಿಕಾರಿಗಳು ಮಾತ್ರವೇ ದೇಶದಲ್ಲಿ ಇರಲಿದ್ದಾರೆ.

ಏನಿದು ರಾಜತಾಂತ್ರಿಕ ವಿನಾಯಿತಿ: ವಿಯೆನ್ನಾ ಒಪ್ಪಂದದ ಅಡಿಯಲ್ಲಿ ರಾಜತಾಂತ್ರಿಕ ಸಂಬಂಧಗಳು ಮತ್ತು ವಿದೇಶದಲ್ಲಿ ರಾಜತಾಂತ್ರಿಕರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿಸುತ್ತದೆ. ಇದರ ಅಡಿಯಲ್ಲಿ, ರಾಜತಾಂತ್ರಿಕರನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಅಥವಾ ಅವರನ್ನು ಯಾವುದೇ ಕಾರಣಕ್ಕೂ ಬಂಧಿಸುವಂತಿಲ್ಲ. ಹಾಗಿದ್ದರೂ, ಆತಿಥೇಯ ದೇಶದ ಕಾನೂನುಗಳ ಪ್ರಕಾರ ರಾಜತಾಂತ್ರಿಕರು ಯಾವುದೇ ಅಪರಾಧವನ್ನು ಮಾಡಿದರೆ, ಅವರನ್ನು ಅವರ ತಾಯ್ನಾಡಿಗೆ ಹಿಂತಿರುಗಿಸಲಾಗುತ್ತದೆ, ಅಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೇ ರಾಜತಾಂತ್ರಿಕರ ಮನೆಗಳನ್ನೂ ಶೋಧಿಸುವಂತಿಲ್ಲ. ಅವರನ್ನು ಯಾವುದೇ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲು ಸಾಧ್ಯವಿಲ್ಲ.

ಎರಡೂ ದೇಶಗಳಲ್ಲಿ ಸಮಾನವಾದ ಅಧಿಕಾರಿಗಳು ಇರಬೇಕು ಎಂದು ಹೇಳಿದ್ದ ಭಾರತ: ಎರಡೂ ದೇಶಗಳಲ್ಲಿ ರಾಜತಾಂತ್ರಿಕರ ಸಂಖ್ಯೆ ಸಮಾನವಾಗಿರಬೇಕು ಎಂದು ನಾವು ಕೆನಡಾಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿತ್ತು. ವಿಯೆನ್ನಾ ಕನ್ವೆನ್ಷನ್ ಅಡಿಯಲ್ಲಿ ಇದು ಅವಶ್ಯಕವಾಗಿದೆ. ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಟ್ರುಡೊ ಸೆಪ್ಟೆಂಬರ್ 18ರಂದು ಆರೋಪಿಸಿದ್ದರು. ಅದರ ಬೆನ್ನಲ್ಲಿಯೇ ಭಾರತ ಈ ನಿಯಮವನ್ನು ಇನ್ನಷ್ಟು ಬಿಗಿಯಾಗಿ ಹಿಡಿದಿದೆ. ಭಾರತದ ಮೇಲೆ ಟ್ರುಡೋ ಆರೋಪದ ಬಳಿಕ, ಕೆನಡಾ ಭಾರತೀಯ ರಾಜತಾಂತ್ರಿಕರನ್ನು ಹೊರಕಳಿಸಿತ್ತು. ಕೆನಡಾದ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಭಾರತ ಕೂಡ ತನ್ನ ರಾಜತಾಂತ್ರಿಕರೊಬ್ಬರು ದೇಶವನ್ನು ತೊರೆಯುವಂತೆ ಕೇಳಿಕೊಂಡಿತ್ತು. ಇದರ ನಂತರ, ಭಾರತವು ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಸಹ ನಿಲ್ಲಿಸಿದೆ.

ನಿಜ್ಜರ್ ಹತ್ಯೆಯ ಸಾಕ್ಷ್ಯ ಭಾರತಕ್ಕೆ ಕೊಡಲ್ಲ ಕೋರ್ಟಿಗೆ ಕೊಡೇವೆ: ಕೆನಡಾ

ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಗೆ ಇಳಿಯಬೇಡಿ: ಸೆಪ್ಟೆಂಬರ್ 26 ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು. ಈ ವೇಳೆ ಕೆನಡಾ ಹೆಸರನ್ನು ಹೇಳದೆ ರಾಜಕೀಯಕ್ಕಾಗಿ ಭಯೋತ್ಪಾದನೆಯನ್ನು ಉತ್ತೇಜಿಸುವುದು ತಪ್ಪು ಎಂದು ಹೇಳಿದ್ದರು. ಸಾರ್ವಭೌಮತ್ವಕ್ಕೆ ಗೌರವವು ಮುಖ್ಯವಾಗಿದೆ ಎಂದು ನಾವು ನಂಬುತ್ತೇವೆ, ಆದರೆ ಈ ಗೌರವವು ಆಯ್ಕೆಯಾಗಿರಬಾರದು. ರಾಜಕೀಯ ಅನುಕೂಲಕ್ಕೆ ತಕ್ಕಂತೆ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದರು. ಇದಾದ ನಂತರ ವಿದೇಶಾಂಗ ಸಂಬಂಧಗಳ ಮಂಡಳಿಯಲ್ಲಿ ನಡೆದ ಚರ್ಚೆಯಲ್ಲಿ ಕೆನಡಾಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೂ ಜೈಶಂಕರ್ ಉತ್ತರಿಸಿದರು. ಕೆನಡಾದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳು, ಹಿಂಸಾಚಾರ ಮತ್ತು ಉಗ್ರವಾದಕ್ಕೆ ಸಂಬಂಧಿಸಿದ ಅಪರಾಧಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಜೈಶಂಕರ್ ಹೇಳಿದ್ದರು.

ಒಂದೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ 17 ಮೋಸ್ಟ್ ವಾಂಟೆಡ್ ಉಗ್ರರ ನಿಗೂಢ ಸಾವು

ಕೆನಡಾದಲ್ಲಿ ನಮ್ಮ ರಾಜತಾಂತ್ರಿಕರನ್ನು ಬೆದರಿಸಲಾಗಿತ್ತು. ನಮ್ಮ ಕಾನ್ಸುಲೇಟ್‌ಗಳ ಮೇಲೆ ದಾಳಿ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹೀಗೇ ಆಗುತ್ತದೆ ಎಂದು ಹೇಳುವ ಮೂಲಕ ಇದನ್ನೆಲ್ಲ ಕೆನಡಾ ಸಮರ್ಥನೆ ಕೂಡ ಮಾಡಿಕೊಂಡಿತ್ತು. ನಿಜ್ಜರ್‌ ಹತ್ಯೆಯಲ್ಲಿ ಸರ್ಕಾರವಾಗಿ ನನಗೆ ಕೆಲವು ಮಾಹಿತಿ ನೀಡಿದರೆ, ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!