
ನವದೆಹಲಿ (ಜ. 29): ಕಳೆದ ವರ್ಷ ದೇಶದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದ ಪೆಗಾಸಸ್ (Pegasus ) ಗೂಢಚರ್ಯೆಗೆ ಸಂಬಂಧಿಸಿದಂತೆ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ (New York Times) ಪತ್ರಿಕೆಯಲ್ಲಿ ಇದೀಗ ಪ್ರಕಟವಾದ ವರದಿಯೊಂದು ಭಾರಿ ಸಂಚಲನ ಹುಟ್ಟುಹಾಕಿದ್ದು, ಅದರಲ್ಲಿ ಇಸ್ರೇಲ್‌ನಿಂದ (Israel )ಭಾರತ ಸರ್ಕಾರ (central government) ಪೆಗಾಸಸ್ ಸ್ಪೈವೇರ್ ಖರೀದಿಸಿದ್ದು ನಿಜ ಎಂದು ಹೇಳಲಾಗಿದೆ.
2017ರಲ್ಲಿ ಭಾರತ ಸರ್ಕಾರ ಮತ್ತು ಇಸ್ರೇಲ್ ನಡುವೆ ಸುಮಾರು 15000 ಕೋಟಿ ರು. ಮೊತ್ತದ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ವಿಚಕ್ಷಣ ಉಪಕರಣಗಳ ಖರೀದಿ ವ್ಯವಹಾರ ನಡೆದಿತ್ತು. ಅದರಲ್ಲಿ ಎನ್‌ಎಸ್‌ಒ (NSO) ಕಂಪನಿಯಿಂದ ಪೆಗಾಸಸ್ ಗೂಢಚರ್ಯೆ ಉಪಕರಣ ಖರೀದಿ ಮತ್ತು ಕ್ಷಿಪಣಿ ವ್ಯವಸ್ಥೆಯ ಖರೀದಿ ಪ್ರಮುಖವಾಗಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ‘ದಿ ಬ್ಯಾಟಲ್ ಫಾರ್ ದಿ ವಲ್ಡ್$್ರ್ಸ ಮೋಸ್ಟ್ ಪವರ್‌ಫುಲ್ ಸೈಬರ್‌ವೆಪನ್’ (ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈಬರ್ ಅಸ್ತ್ರಕ್ಕಾಗಿನ ಸಮರ) ಎಂಬ ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಕೂಡ ಸಂಸತ್ ಕಲಾಪಕ್ಕೆ ಮುನ್ನಾ ದಿನಗಳಲ್ಲಿ ಇಂಥದ್ದೊಂದು ವರದಿ ಪ್ರಕಟವಾಗಿ ಇಡೀ ಅಧಿವೇಶನವನ್ನೇ ಬಲಿ ಪಡೆದಿತ್ತು. ಈಗಲೂ ಬಜೆಟ್ ಅಧಿವೇಶನಕ್ಕೆ ಮುನ್ನವೇ ಮತ್ತೆ ಅಂಥದ್ದೇ ವರದಿ ಪ್ರಕಟವಾಗಿರುವುದು ಸಾಕಷ್ಟುಕುತೂಹಲ ಮೂಡಿಸಿದೆ.
ಈ ನಡುವೆ ಅಮೆರಿಕದ ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ‘ಕೇಂದ್ರ ಸರ್ಕಾರ ಸಂಸತ್ತಿನ ದಿಕ್ಕು ತಪ್ಪಿಸಿದೆ, ಸುಪ್ರೀಂಕೋರ್ಟ್ ಅನ್ನು ವಂಚಿಸಿದೆ, ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿದೆ ಮತ್ತು ದೇಶದ್ರೋಹದ ಕೆಲಸದಲ್ಲಿ ತೊಡಗಿಸಿಕೊಂಡಿದೆ’ ಎಂದು ಕಿಡಿಕಾರಿದೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ (Gen V K Singh), ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಸುಪಾರಿ ಮೀಡಿಯಾ ಎಂದು ಟೀಕಿಸಿದ್ದಾರೆ.
ಇಸ್ರೇಲ್‌ನ ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಭಾರತ ಸರ್ಕಾರ ಕೆಲ ಮಂತ್ರಿಗಳು, ಪ್ರಮುಖ ರಾಜಕಾರಣಿಗಳು, ಗಣ್ಯರು ಹಾಗೂ ಪತ್ರಕರ್ತರ ಫೋನ್‌ಗಳನ್ನು ಕದ್ದಾಲಿಸಿದೆ ಎಂದು ಕಳೆದ ವರ್ಷ ಆರೋಪ ಕೇಳಿಬಂದಿತ್ತು. ಇದು ದೊಡ್ಡ ವಿವಾದವಾದಾಗ ಕೇಂದ್ರ ಗೃಹ ಸಚಿವಾಲಯವು ತಾನು ಇಂಥ ಯಾವುದೇ ಸ್ಪೈವೇರ್ ಖರೀದಿಸಿಲ್ಲ ಎಂದಿತ್ತು. ನಂತರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ತನ್ನ ಯಾವುದೇ ತನಿಖಾ ಸಂಸ್ಥೆಗಳು ಸ್ಪೈವೇರ್ ಬಳಸಿದ್ದವೇ? ಇಲ್ಲವೇ ಎಂಬುದನ್ನು ತಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅಂಥ ಯಾವುದೇ ಹೇಳಿಕೆ ದೇಶದ ಭದ್ರತೆಗೆ ಧಕ್ಕೆ ತರಬಲ್ಲದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಬಳಿಕ ಇಡೀ ಪ್ರಕರಣದ ಮೇಲೆ ಬೆಳಕು ಚೆಲ್ಲಲು ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು.
ಮೋದಿ-ನೆತನ್ಯಾಹು ಬೆಚ್ಚಗಿನ ಭೇಟಿ: 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅವರು ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ. ಆಗ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು (benjamin netanyahu) ಜೊತೆ ಸಮುದ್ರದ ದಂಡೆಯಲ್ಲಿ ಬರಿಗಾಲಿನಲ್ಲಿ ನಡೆದಿದ್ದರು. ಅಂತಹ ಭಾವನಾತ್ಮಕ ಭೇಟಿಗೆ ಕಾರಣಗಳಿದ್ದವು. ಅವರ ನಡುವೆ ಭರ್ಜರಿ 15000 ಕೋಟಿ ರು. ಮೊತ್ತದ ರಕ್ಷಣಾ ವ್ಯವಹಾರ ಅಂತಿಮಗೊಂಡಿತ್ತು. ಅದರಲ್ಲಿ ಪೆಗಾಸಸ್ ಖರೀದಿ ಕೂಡ ಸೇರಿತ್ತು. ಕೆಲ ತಿಂಗಳ ನಂತರ ನೆತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ನಂತರ 2019ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್‌ನ ಪರ ಭಾರತ ಮತ ಹಾಕಿತ್ತು ಎಂದು ನ್ಯೂಯಾರ್ಕ್ ಟೈಮ್ಸ್‌ನ ವರದಿ ಹೇಳಿದ್ದು, ಈ ಎಲ್ಲ ಘಟನೆಗಳಿಗೂ ಪರಸ್ಪರ ಸಂಬಂಧವಿದೆ ಎಂಬಂತೆ ಬಿಂಬಿಸಿದೆ.
Report on Pegasus : ನ್ಯೂಯಾರ್ಕ್ ಟೈಮ್ಸ್ ಅಲ್ಲ ಅದು, ಸುಪಾರಿ ಮೀಡಿಯಾ!
ಅಮೆರಿಕದ ಎಫ್‌ಬಿಐ ಕೂಡ ಪೆಗಾಸಸ್ ಸ್ಪೈವೇರ್ ಖರೀದಿಸಿದೆ. ಆದರೆ ಅದನ್ನು ಬಳಸದೆ ಧೂಳು ಹಿಡಿಯಲು ಬಿಟ್ಟಿದೆ. ಯುರೋಪಿಯನ್ ದೇಶಗಳು ಭಯೋತ್ಪಾದಕರನ್ನು ಮಟ್ಟಹಾಕಲು ಇದನ್ನು ಬಳಸುತ್ತಿವೆ ಎಂದೂ ವರದಿ ಹೇಳಿದೆ.
ಪೆಗಾಸಸ್: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿ ಬಗ್ಗೆ ಇಂದು ಸುಪ್ರೀಂ ತೀರ್ಪು!
ಮೋದಿ ವಿರುದ್ಧ ರಾಹುಲ್, ಖರ್ಗೆ ಕಿಡಿ: ಮೋದಿ ಸರ್ಕಾರ ಪೆಗಾಸಸ್ ಸಾಫ್ಟ್‌ವೇರ್ ಖರೀದಿಸಿ ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು, ರಾಜಕಾರಣಿಗಳು ಹಾಗೂ ಜನರ ಮೇಲೆ ಗೂಢಚರ್ಯೆ ನಡೆಸಿದೆ. ಸರ್ಕಾರಿ ಅಧಿಕಾರಿಗಳು, ವಿರೋಧಪಕ್ಷದ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗ ಹೀಗೆ ಎಲ್ಲರೂ ಈ ಫೋನ್ ಟ್ಯಾಪಿಂಗ್‌ಗೆ ಗುರಿಯಾಗಿದ್ದಾರೆ. ಇದು ದೇಶದ್ರೋಹ. ಮೋದಿ ದೇಶದ್ರೋಹ ಎಸಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಏಕೆ ಭಾರತೀಯರ ವಿರುದ್ಧವೇ ಸಮರಾಸ್ತ್ರಗಳನ್ನು ಬಳಸುವ ಮೂಲಕ ಭಾರತದ ಶತ್ರುವಿನಂತೆ ವರ್ತಿಸಿದೆ? ಪೆಗಾಸಸ್ ಬಳಸಿ ಅಕ್ರಮವಾಗಿ ಫೋನ್ ಕದ್ದಾಲಿಸುವುದು ದೇಶದ್ರೋಹ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ವಿಷಯದಲ್ಲಿ ನ್ಯಾಯ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ