
ನವದೆಹಲಿ (ಜು.25): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡನೆ ಮಾಡಿದ ಕೇಂದ್ರದ ಬಜೆಟ್ ವಿರುದ್ಧ ಪ್ರತಿಪಕ್ಷಗಳ ಕೂಟವಾದ ‘ಇಂಡಿಯಾ’ ಆಕ್ರೋಶ ಮುಂದುವರಿಸಿದ್ದು, ಬುಧವಾರ ಸಂಸತ್ತಿನ ಹೊರಗೆ ಹಾಗೂ ಒಳಗೆ ಪ್ರತಿಭಟನೆ ನಡೆಸಿವೆ. ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಮಾತ್ರ ಒತ್ತು ನೀಡಿ, ಉಳಿದ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಕಲಾಪ ಬದಿಗೊತ್ತಿ ಚರ್ಚೆ ನಡೆಸಬೇಕು ಎಂಬ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಎರಡೂ ಕಲಾಪಗಳಿಂದ ಸಭಾತ್ಯಾಗ ಮಾಡಿ ತಮ್ಮ ಸಿಟ್ಟು ಹೊರಹಾಕಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ ಇಂಡಿಯಾ ಕೂಟದ ಪಕ್ಷಗಳ ನಾಯಕರು ಬಜೆಟ್‌ನಲ್ಲಿ ತಾರತಮ್ಯವಾಗಿದ್ದು, ಈ ಬಗ್ಗೆ ಪ್ರತಿಭಟನೆ ನಡೆಸಬೇಕು ಎಂಬ ತೀರ್ಮಾನವನ್ನು ಕೈಗೊಂಡರು. ಬಳಿಕ ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ ಹಾಗೂ ಎಡರಂಗದ ನಾಯಕರು ಪ್ರತಿಭಟನೆ ಮಾಡಿದರು.
ಕೇಂದ್ರ ಬಜೆಟ್ 2024: ಸಮಾಜದ ಎಲ್ಲ ವರ್ಗಕ್ಕೂ ಯೋಜನೆ, ಸಾಮಾಜಿಕ ನ್ಯಾಯ
ಈ ವೇಳೆ ಮಾತನಾಡಿದ ಖರ್ಗೆ ಅವರು, ಕೇಂದ್ರದ ಬಜೆಟ್ ಜನವಿರೋಧಿಯಾಗಿದೆ. ಯಾರೊಬ್ಬರಿಗೂ ನ್ಯಾಯ ಸಿಕ್ಕಿಲ್ಲ. ಇದೊಂದು ವಂಚಕ ಬಜೆಟ್ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಆಂಧ್ರ ಹಾಗೂ ಬಿಹಾರಕ್ಕೆ ಅನುದಾನ ನೀಡುವುದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಇತರೆ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ‘ನಮಗೆ ಇಂಡಿಯಾ ಬಜೆಟ್ ಬೇಕು, ಎನ್‌ಡಿಎ ಬಜೆಟ್ ಅಲ್ಲ’, ‘ಇಂಡಿಯಾ ಬಜೆಟ್‌ಗೆ ಎನ್‌ಡಿಎ ವಂಚನೆ ಮಾಡಿದೆ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಸಂಸದರು ಪ್ರತಿಭಟನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ