ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲಿಯೇ ಮಹಾಘಟಬಂಧನದಲ್ಲಿ ಭಾರೀ ಬಿರುಕು!

Published : Nov 17, 2025, 01:01 PM IST
India Bloc

ಸಾರಾಂಶ

ಬಿಹಾರ ಚುನಾವಣೆಯ ಸೋಲಿನ ಬಳಿಕ ಇಂಡಿಯಾ ಒಕ್ಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಹುಲ್ ಗಾಂಧಿ ನಾಯಕತ್ವಕ್ಕೆ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿಕೂಟದ ನೇತೃತ್ವವನ್ನು ಮಮತಾ ಬ್ಯಾನರ್ಜಿ ಅಥವಾ ಅಖಿಲೇಶ್ ಯಾದವ್‌ಗೆ ವಹಿಸಬೇಕೆಂದು ಪಟ್ಟು ಹಿಡಿದಿವೆ.

ನವದೆಹಲಿ (ನ.17): ಬಿಹಾರ ಚುನಾವಣೆಯಲ್ಲಿ ಮಹಾಗಠಬಂಧನ ದಯನೀಯ ಸೋಲು ಕಂಡ ಬಳಿಕ ಭಾರೀ ಬಿರುಕು ಕಂಡು ಬಂದಿದೆ. ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ನಾಯಕತ್ವಕ್ಕೆ ಇಂಡಿಯಾ ಒಕ್ಕೂಟದ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷಗಳಾಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ನೇರವಾಗಿ ರಾಹುಲ್‌ ಗಾಂಧಿ ಅವರ ನೇತೃತ್ವಕ್ಕೆ ವಿರೋಧಿಸಿವೆ ಎನ್ನಲಾಗಿದೆ.

ಬಿಹಾರ ಚುನಾವಣೆಯಲ್ಲಿ ಇಂಡಿಯಾ ಬಣದ ಕಳಪೆ ಪ್ರದರ್ಶನದ ನಂತರ ಮತ್ತು ಬಂಗಾಳ ಚುನಾವಣೆಗಳು ಸಮೀಪಿಸುತ್ತಿರುವಾಗ, ತೃಣಮೂಲ ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅವರು ಭಾರತ ಮೈತ್ರಿಕೂಟದ ನೇತೃತ್ವ ವಹಿಸಲು ಸೂಕ್ತ ನಾಯಕಿ ಎಂದು ಪ್ರತಿಪಾದಿಸಿದೆ. ವಿರೋಧ ಪಕ್ಷದ ಬಣದಲ್ಲಿ ಸಂಭವನೀಯ ಪುನರ್ರಚನೆ ಕುರಿತು ಊಹಾಪೋಹಗಳ ನಡುವೆ ಈ ಹೇಳಿಕೆ ಬಂದಿದೆ.

ಉತ್ತರ ಪ್ರದೇಶ ಚುನಾವಣೆ ಮುಖ್ಯ

ಲೋಕಸಭೆ ಚುನಾವಣೆಯ ನಿಟ್ಟಿನಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷಗಳ ಪ್ರಾತಿನಿಧ್ಯ ಇರುವುದು ಮುಖ್ಯ. ಈಗಾಗಲೇ ಬಿಹಾರವನ್ನು ಕಳೆದುಕೊಂಡಿರುವ ಇಂಡಿಯಾ ಒಕ್ಕೂಟ, 2027ರಲ್ಲಿ ಬರುವ ಉತ್ತರ ಪ್ರದೇಶ ಚುನಾವಣೆಯ ವೇಳೆ ಅಧಿಕಾರ ಹಿಡಿದುಕೊಳ್ಳುವ ಇರಾದೆಯಲ್ಲಿದೆ. ಹಾಗೇನಾದರೂ 2027ರ ಉತ್ತರ ಪ್ರದೇಶ ಚುನಾವಣೆಯನ್ನೂ ಸಸಮಾಜವಾದಿ ಪಕ್ಷ ಸೋಲು ಕಂಡಲ್ಲಿ, 2029ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಇದು ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಆ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ಗೆ ಇಂಡಿಯಾ ಒಕ್ಕೂಟದ ಜವಾಬ್ದಾರಿ ಕೊಡಬೇಕು ಎಂದು ಎಸ್‌ಪಿ ವಾದ ಮಾಡಿದೆ.

ಆದರೆ, ಈಗ ತಕ್ಷಣದ ಮಟ್ಟಿಗೆ ಬಂಗಾಳ ಚುನಾವಣೆ ಬಹಳ ಮುಖ್ಯವಾಗಿದೆ. ಅಲ್ಲಿ ಟಿಎಂಸಿ ವ್ಯಾಪಕವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಇನ್ನೊಂದೆಡೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಿಹಾರ ಚುನಾವಣೆಯ ಬಳಿಕ ಮುಂದಿನ ಗುರಿ ಬಂಗಾಳ ಎಂದು ನೇರವಾಗಿಯೇ ಹೇಳಿದ್ದಾರೆ. ಆ ನಿಟ್ಟಿನಲ್ಲಿಇಂಡಿಯಾ ಒಕ್ಕೂಟವನ್ನು ಬಲ ಪಡಿಸಬೇಕಾದಲ್ಲಿ ಮಮತಾ ಬ್ಯಾನರ್ಜಿಗೆ ಜವಾಬ್ದಾರಿ ನೀಡಬೇಕು ಎಂದು ಟಿಎಂಸಿ ಕಾರ್ಯಕರ್ತರು ಹೇಳಿದ್ದಾರೆ.

ನಾಯಕತ್ವಕ್ಕೆ ಮತ್ತೊಮ್ಮೆ ಹೋರಾಟ

ಇದು ಇಂಡಿಯಾ ಒಕ್ಕೂಟ ಅಥವಾ ಮಹಾಗಠಬಂಧನದಲ್ಲಿ ಭಾರೀ ಬಿರುಕು ಮೂಡಿಸಲು ಕಾರಣವಾಗಿದೆ. ರಾಹುಲ್‌ ಗಾಂಧಿ ನಾಯಕತ್ವಕ್ಕೆ ಮತ್ತೊಮ್ಮೆ ಅಪಸ್ವರಗಳು ಕೇಳಿಬಂದಿವೆ. ಟಿಎಂಸಿ ನಾಯಕ ಜಯಪ್ರಕಾಶ್‌ ಮಜುಂದಾರ್‌ ಮಾತನಾಡಿದ್ದು, 'ಬಿಹಾರ ಚುನಾವಣೆಯ ಫಲಿತಾಂಶ ಎಲ್ಲವನ್ನೂ ತೋರಿಸಿದೆ. ಜನರು ಕಾಂಗ್ರೆಸ್‌ಅನ್ನು ಒಪ್ಪುತ್ತಿಲ್ಲ. ಪಕ್ಷದ ಜನಪ್ರಿಯತೆ ಕುಗ್ಗಿದೆ ಎನ್ನುವುದು ನೇರವಾಗಿ ಕಂಡಿದೆ. ಚುನಾವಣೆಯಿಂದ ಚುನಾವಣೆಗೆ ಪಕ್ಷದ ಜನಪ್ರಿಯತೆ ಕುಸಿಯುತ್ತಿರುವುದನ್ನು ಕಂಡಿದ್ದೇವೆ. ಆದರೆ, ಕಾಂಗ್ರೆಸ್‌ ಈಗ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುತ್ತಿದೆ. ಆದರೆ, ಅವರ ನಾಯಕತ್ವ ಒಳ್ಳೆಯದೋ ಅಥವಾ ಕೆಟ್ಟದ್ದೋ ಅನ್ನೋ ಪ್ರಶ್ನೆ ಈಗ ಎದುರಾಗಿದೆ. ನಮ್ಮ ಕೆಲ ನಾಯಕರು ಈಗಾಗಲೇ ಮಾತುಗಳನ್ನು ಹೇಳುತ್ತಿದ್ದಾರೆ. ಪ್ರಸ್ತುತ ಎಲ್ಲಾ ದಿಕ್ಕಿನಿಂದ ನೋಡಿದರೂ, ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟವನ್ನು ಮುನ್ನಡೆಸಲು ಸೂಕ್ತ ನಾಯಕಿ ಎಂದು ಕಾಣುತ್ತಿದೆ' ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು