
ನೀಟ್ ಪೇಪರ್ ಲೀಕ್ ಹಗರಣ ಪ್ರಕರಣದಲ್ಲಿ ಸಿಜೆಪಿ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ಕೊಡುತ್ತಿದ್ದಂತೆ ಪ್ರತಿಭಟನೆ ನಿಲ್ಲುತ್ತದೆನ್ನುವ ಕೇಂದ್ರ ಸರ್ಕಾರ ನಂಬಿಕೆ ಸುಳ್ಳಾಗಿದೆ. ಇದೀಗ ಪ್ರಧಾನ್ ರಾಜೀನಾಮೆ ಬಳಿಕ ಇಂಡಿ ಒಕ್ಕೂಟ ಮತ್ತೆ ಮೈಕೊಡವಿ ಎದ್ದು ನಿಂತಿದ್ದು ಇದೇ ಅವಕಾಶವೆಂದು ಕೇಂದ್ರದ ವಿರುದ್ಧ ಮುಗಿಬಿಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ಇಂದು ಬೆಳಗ್ಗೆ 10 ಗಂಟೆಗೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
ಸಭೆಯಲ್ಲಿ 'ಇಂಡಿಯಾ' ಒಕ್ಕೂಟದ ನಾಯಕರು ಭಾಗಿಯಾಗಿದ್ದು ಸಂಸತ್ ಕಲಾಪದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಒಗ್ಗಟ್ಟಿನಿಂದ ಹೋರಾಡಲು ಕಾರ್ಯತಂತ್ರ ರೂಪಿಸಲಿದ್ದಾರೆ. ನೀಟ್ ಪೇಪರ್ ಲೀಕ್ ವಿವಾದದಿಂದಾಗಿ ಸಂಸತ್ತಿನ ಹೊರಗೆ ಪ್ರತಿಭಟನೆ ಮುಂದುವರಿದಿದ್ದರೆ, ಸಂಸತ್ತಿನ ಕಲಾಪದಲ್ಲೂ ವಿರೋಧ ಪಕ್ಷಗಳು ನೀಟ್ ವಿಚಾರವನ್ನೇ 'ಪ್ರಧಾನ'ವಾಗಿಟ್ಟುಕೊಂಡು ಹೋರಾಟಕ್ಕೆ ಮುಂದಾಗಿವೆ. ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಬಗ್ಗೆ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದಿರುವುದರಿಂದ ಕಲಾಪ ಪದೇ ಪದೇ ಮುಂದೂಡಲ್ಪಡುತ್ತಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ, 2026' ಅನ್ನು ಮಂಡಿಸಿದರು. ದೇಶಾದ್ಯಂತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಮಸೂದೆಯನ್ನು ಮಂಡಿಸಲಾಯಿತು. ಅದರಲ್ಲೂ ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲೆ ಎಕೆ-47 ಬಳಸಿದ ವಿಚಾರ ಸಂಸತ್‌ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು
ಮೂಲಗಳ ಪ್ರಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪ್ರಯತ್ನದ ಫಲವಾಗಿ, ಮಂಗಳವಾರ ಈ ಮಸೂದೆಯ ಬಗ್ಗೆ ಚರ್ಚೆ ನಡೆಸಲು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಹೀಗಾಗಿ, ಸಂಸತ್‌ನಲ್ಲಿನ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆಯಿದೆ. ನೀಟ್-ಯುಜಿ ಪೇಪರ್ ಲೀಕ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಾಂತ ಪ್ರತಿಭಟನೆಗಳು ನಡೆದ ನಂತರ ಈ ಮಸೂದೆಯನ್ನು ಜಾರಿಗೆ ಬಂದಿದೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ ಈಗಿರುವ 3 ರಿಂದ 5 ವರ್ಷಗಳ ಜೈಲು ಶಿಕ್ಷೆಯನ್ನು, ಕನಿಷ್ಠ 5 ವರ್ಷದಿಂದ 10 ವರ್ಷಗಳವರೆಗೆ ವಿಸ್ತರಿಸುವ ಪ್ರಸ್ತಾಪ ಈ ಹೊಸ ಮಸೂದೆಯಲ್ಲಿದೆ.
ಇದೇ ವೇಳೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಮೊದಲು, ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲಿನ 'ಕ್ರೌರ್ಯ'ಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಕಳೆದ 12 ವರ್ಷಗಳಿಂದ ನರೇಂದ್ರ ಮೋದಿ ನಿದ್ದೆ ಮಾಡುತ್ತಿದ್ದರಾ? ಅವರ ಸರ್ಕಾರ ನಿದ್ದೆ ಮಾಡುತ್ತಿತ್ತಾ? ಈ ಕಾನೂನನ್ನು ಮೊದಲೇ ಯಾಕೆ ತರಲಿಲ್ಲ? ಇಂದು ಯುವಕರ ಮೇಲಿನ ದೌರ್ಜನ್ಯದ ಪ್ರಶ್ನೆ ಎದ್ದಿದೆ. ಬ್ರಿಟಿಷರು ಕೂಡ ಮಾಡದ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಮೊದಲು ಅದಕ್ಕೆ ಉತ್ತರ ಕೊಡಿ. ರಾಹುಲ್ ಗಾಂಧಿ ಅವರ ಪತ್ರಕ್ಕೆ ಅವರು ಪ್ರತಿಕ್ರಿಯಿಸಬೇಕು. ಇಂತಹ ತಪ್ಪಿತಸ್ಥ ಸರ್ಕಾರವನ್ನು ನಾವು ಕ್ಷಮಿಸಿ, ಅವರಿಂದ ಉತ್ತರ ಕೇಳದೇ ಇರಬೇಕಾ? ಎಂದು ಅವರು ಪ್ರಶ್ನಿಸಿದ್ದಾರೆ.
ಪೆಲ್ಲೆಟ್ ಗನ್ ಬಳಕೆಯನ್ನು ಪ್ರಸ್ತಾಪಿಸಿದ ಟಿಎಂಸಿ ಸಂಸದೆ
ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ರೂಲ್ 267ರ ಅಡಿ ನೋಟಿಸ್ ನೀಡಿರುವ ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಸರ್ಕಾರದ ಮುಂದೆ ಒಂದು ಗಂಭೀರ ವಿಷಯವಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಯುವಕರ ಮೇಲೆ ಪೆಲ್ಲೆಟ್ ಗನ್‌ಗಳನ್ನು ಬಳಸಲಾಗಿದೆ. ಕನ್ನಾಟ್ ಪ್ಲೇಸ್‌ನಲ್ಲಿ 7 ಸುತ್ತು ಪೆಲ್ಲೆಟ್ ಗನ್ ಫೈರ್ ಮಾಡಲಾಗಿದೆ ಎಂದು ವರದಿಗಳಿವೆ. ಒಬ್ಬ ಯುವಕನ ಕಣ್ಣಿಗೆ ಗಾಯವಾಗಿ, ದೃಷ್ಟಿ ಕಳೆದುಕೊಂಡಿದ್ದಾನೆ. ಇದು ತುಂಬಾನೇ ಗಂಭೀರ ಮತ್ತು ಅಪಾಯಕಾರಿ ವಿಷಯ. ಶಾಂತಿಯುತ ಪ್ರತಿಭಟನೆಗಳ ವಿರುದ್ಧ ಮಾರಣಾಂತಿಕ ಗನ್‌ಗಳನ್ನು ಬಳಸಿದರೆ ಅದರ ಅರ್ಥವೇನು? ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ. ಗೃಹ ಸಚಿವರು, ಪ್ರಧಾನಿ ಇದಕ್ಕೆ ಜವಾಬ್ದಾರಿ ಹೊರಬೇಕು. ನಿರಾಯುಧ ಯುವಕರ ಮೇಲೆ ಪೆಲ್ಲೆಟ್ ಗನ್ ಹೇಗೆ ಬಳಸಲಾಯಿತು ಎಂದು ಅವರು ಉತ್ತರ ಕೊಡಬೇಕು. ಯಾರು ಆದೇಶಿಸಿದ್ದು? ಯಾರು ಅಧಿಕಾರ ಕೊಟ್ಟಿದ್ದು? ಗೃಹ ಸಚಿವರು ಸ್ಪಷ್ಟಪಡಿಸಬೇಕು" ಎಂದು ಹೇಳಿದ್ದಾರೆ. (ANI)
(ಈ ಸುದ್ದಿಯ ಶೀರ್ಷಿಕೆ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ