ದೇಶದ 80 ಕೋಟಿ ಜನರಿಗೆ ಲಸಿಕೆ, ಬಾಕಿ ಹರ್ಡ್‌ ಇಮ್ಯುನಿಟಿ?

By Suvarna NewsFirst Published Dec 5, 2020, 9:04 AM IST
Highlights

80 ಕೋಟಿ ಜನರಿಗೆ ಲಸಿಕೆ, ಬಾಕಿ ಹರ್ಡ್‌ ಇಮ್ಯುನಿಟಿ?| ಲಸಿಕೆ ಕಾಯ್ದಿರಿಸುವಲ್ಲಿ ಭಾರತ ವಿಶ್ವದಲ್ಲೇ ನಂ.1| ಭಾರತದ ನಂತರ ಸ್ಥಾನದಲ್ಲಿ ಯುರೋಪ್‌, ಅಮೆರಿಕ

ನವದೆಹಲಿ(ಡಿ.05): ಕೊರೋನಾ ಲಸಿಕೆ ಕಾಯ್ದಿರಿಸುವಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ನವೆಂಬರ್‌ 30ರ ಅಂಕಿ-ಅಂಶಗಳ ಪ್ರಕಾರ ಭಾರತವು 160 ಕೋಟಿ ಡೋಸ್‌ಗಳನ್ನು ಕಾಯ್ದಿರಿಸಿದೆ. ಈ ಲಸಿಕೆಯು ಸುಮಾರು 80 ಕೋಟಿ ಜನ(ಭಾರತದ ಶೇ.80ರಷ್ಟು ಜನಸಂಖ್ಯೆಗೆ)ರಿಗೆ ಆಗಲಿದ್ದು, ‘ಸಮೂಹ ರೋಗನಿರೋಧಕ ಶಕ್ತಿ’ (ಹರ್ಡ್‌ ಇಮ್ಯುನಿಟಿ) ಉತ್ಪಾದಿಸುವಷ್ಟುಶಕ್ತಿ ಹೊಂದಿದೆ. ಅಂದರೆ 80 ಕೋಟಿ ಜನರಿಗೆ ಲಸಿಕೆ ನೀಡಿದರೆ ಉಳಿದ 50 ಕೋಟಿ ಜನರಿಗೆ ಹರ್ಡ್‌ ಇಮ್ಯುನಿಟಿ ಮೂಲಕವೇ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡ್ಯೂಕ್‌ ವಿಶ್ವವಿದ್ಯಾಲಯವು ಈ ಕುರಿತು ಮಾಹಿತಿ ಕ್ರೋಡೀಕರಿಸಿದ್ದು, ಲಸಿಕೆ ಕಾಯ್ದಿರಿಸುವಿಕೆಯಲ್ಲಿ ಯುರೋಪ್‌ ಒಕ್ಕೂಟ 2ನೇ ಸ್ಥಾನ ಹಾಗೂ ಅಮೆರಿಕ 3ನೇ ಸ್ಥಾನ ಸಂಪಾದಿಸಿದೆ.

ವಿಶ್ಲೇಷಣೆ ಪ್ರಕಾರ, ಭಾರತವು 3 ಲಸಿಕೆ ಉತ್ಪಾದಕರ ಜತೆ ಒಪ್ಪಂದ ಮಾಡಿಕೊಂಡಿದೆ. ಯುರೋಪ್‌ ಒಕ್ಕೂಟ ಹಾಗೂ ಅಮೆರಿಕ 6 ಲಸಿಕೆ ಉತ್ಪಾದಕರ ಜತೆ, ಕೆನಡಾ ಹಾಗೂ ಬ್ರಿಟನ್‌ ತಲಾ 7 ಉತ್ಪಾದಕರ ಜತೆ ಒಪ್ಪಂದ ಮಾಡಿಕೊಂಡಿವೆ. ಒಮ್ಮೆ ಲಸಿಕೆಗೆ ಅನುಮೋದನೆ ದೊರೆತರೆ ಎಂಬ ಷರತ್ತಿನೊಂದಿಗೆ ಈ ಒಪ್ಪಂದಗಳು ಏರ್ಪಟ್ಟಿವೆ.

ಭಾರತವು ಆಕ್ಸ್‌ಫರ್ಡ್‌ ವಿವಿಯ ಆಸ್ಟ್ರಾ ಜೆನೆಕಾ ಲಸಿಕೆಯ 500 ದಶಲಕ್ಷ, ಅಮೆರಿಕದ ನೋವಾವ್ಯಾಕ್ಸ್‌ ಕಂಪನಿಯಿಂದ 100 ಕೋಟಿ, ಸ್ಪುಟ್ನಿಕ್‌ ಲಸಿಕೆ ತಯಾರಿಸಿದ ರಷ್ಯಾದ ಗ್ಯಾಮಲೆಯಾ ಕಂಪನಿಯ 100 ದಶಲಕ್ಷ ಡೋಸ್‌ಗಳಿಗೆ ಆರ್ಡರ್‌ ನೀಡಿದೆ.

2021ರ ಜುಲೈ-ಆಗಸ್ಟ್‌ ವೇಳೆಗೆ ಭಾರತ 500 ದಶಲಕ್ಷ ಡೋಸ್‌ಗಳನ್ನು ತರಿಸಿಕೊಳ್ಳುವ ಬಗ್ಗೆ ಲಸಿಕೆ ತಯಾರಕರೊಂದಿಗೆ ಮಾತುಕತೆಯಲ್ಲಿದೆ ಎಂದು ಭಾರತದ ಕೇಂದ್ರ ಸಚಿವ ಡಾ| ಹರ್ಷವರ್ಧನ್‌ ಹೇಳಿದ್ದರು.

click me!