ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ!

By Kannadaprabha NewsFirst Published Jun 3, 2020, 9:18 AM IST
Highlights

ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ ರೆಮ್‌ಡೆಸಿವಿರ್‌| ಭಾರತದಲ್ಲಿ ಮಾರಾಟಕ್ಕೆ ಸರ್ಕಾರದ ಅನುಮತಿ

ನವದೆಹಲಿ(ಜೂ.03): ಕೊರೋನಾ ವೈರಸ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಅಮೆರಿಕದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ರೆಮ್‌ಡೆಸಿವಿರ್‌ ಔಷಧವನ್ನು ಭಾರತದಲ್ಲೂ ಮಾರಾಟ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಈ ಔಷಧವನ್ನು ತಯಾರಿಸುವ ಅಮೆರಿಕದ ಗಿಲಿಯಡ್‌ ಸೈನ್ಸಸ್‌ ಕಂಪನಿಯಿಂದ ಮುಂಬೈನ ಕ್ಲಿನೆರಾ ಗ್ಲೋಬಲ್‌ ಸವೀರ್‍ಸಸ್‌ ಕಂಪನಿ ರೆಮ್‌ಡೆಸಿವಿರ್‌ ಔಷಧ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಗೆ ಪೂರೈಸಲಿದೆ.

ನಂಜನಗೂಡಿನಲ್ಲಿರುವ ಜ್ಯುಬಿಲೆಂಟ್‌ ಲೈಫ್‌ ಸೈನ್ಸಸ್‌ ಹಾಗೂ ಸಿಪ್ಲಾ ಮತ್ತು ಹೆಟೆರೋ ಲ್ಯಾಬ್‌ ಕಂಪನಿಗಳಲ್ಲೂ ಈ ಔಷಧ ಉತ್ಪಾದನೆ ಮಾಡಲು ಗಿಲಿಯಡ್‌ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಕಂಪನಿಗಳಿಗೆ ರೆಮ್‌ಡೆಸಿವಿರ್‌ ಔಷಧ ಉತ್ಪಾದಿಸಲು ಇನ್ನೂ ಭಾರತ ಸರ್ಕಾರ ಪರವಾನಗಿ ನೀಡಿಲ್ಲ.

ರೆಮ್‌ಡೆಸಿವಿರ್‌ ಇಂಜೆಕ್ಷನ್‌ ರೂಪದಲ್ಲಿ ನೀಡುವ ತುರ್ತು ಔಷಧವಾಗಿದ್ದು, ಮಧ್ಯಮ ತೀವ್ರತೆಯ ಕೊರೋನಾ ರೋಗಿಗಳಿಗೆ ಐದು ದಿನಗಳ ಕಾಲ ಇದನ್ನು ನೀಡಬಹುದಾಗಿದೆ. ತಜ್ಞ ವೈದ್ಯರ ಶಿಫಾರಸಿನ ಮೇಲೆ ಆಸ್ಪತ್ರೆಯಲ್ಲಿ ಮಾತ್ರ ಇದನ್ನು ರೋಗಿಗಳಿಗೆ ನೀಡಬೇಕು. ಗಿಲಿಯಡ್‌ ಕಂಪನಿ ಮೇ 29ರಂದು ಭಾರತದಲ್ಲಿ ಇದನ್ನು ಮಾರಾಟ ಮಾಡಲು ಸರ್ಕಾರದ ಬಳಿ ಅನುಮತಿ ಕೇಳಿತ್ತು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತ್ವರಿತವಾಗಿ ಒಪ್ಪಿಗೆ ನೀಡಲಾಗಿದೆ.

click me!