ಇಂದು ಕೆಂಪುಕೋಟೆಯಿಂದ ಮೋದಿ ಸ್ವಾತಂತ್ರ್ಯ ದಿನದ ಭಾಷಣ

Kannadaprabha News   | Kannada Prabha
Published : Aug 15, 2025, 04:50 AM IST
Narendra Modi Red Fort

ಸಾರಾಂಶ

ಇಂದು ಪ್ರಧಾನಿ ನರೇಂದ್ರ ಮೋದಿ ಸತತ 12ನೇ ಬಾರಿ ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆಪರೇಷನ್ ಸಿಂದೂರ ಕೈಗೊಂಡು ವಿಜಯ ಸಾಧಿಸಿದ ಬಳಿಕ ಇದು ಮೊದಲ ಸ್ವಾತಂತ್ರ್ಯ ದಿನವಾಗಿದ್ದು, ಆಪರೇಷನ್‌ ಸಿಂದೂರ ಆಧರಿಸಿ ನವ ಭಾರತ ಥೀಮ್‌ನಲ್ಲಿ ದಿನಾಚರಣೆ ನಡೆಯಲಿದೆ.

ನವದೆಹಲಿ : 79ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ, ಇಂದು ಪ್ರಧಾನಿ ನರೇಂದ್ರ ಮೋದಿ ಸತತ 12ನೇ ಬಾರಿ ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಶತ್ರುರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂದೂರ ಕೈಗೊಂಡು ವಿಜಯ ಸಾಧಿಸಿದ ಬಳಿಕ ಇದು ಮೊದಲ ಸ್ವಾತಂತ್ರ್ಯ ದಿನವಾಗಿದ್ದು, ಆಪರೇಷನ್‌ ಸಿಂದೂರ ಆಧರಿಸಿ ನವ ಭಾರತ ಥೀಮ್‌ನಲ್ಲಿ ದಿನಾಚರಣೆ ನಡೆಯಲಿದೆ. ಅಲ್ಲದೆ, ಪ್ರಧಾನಿಗಳ ಭಾಷಣದ ಮೇಲೆ ಹಲವು ನಿರೀಕ್ಷೆಗಳು ಮೂಡಿವೆ.ಆಪರೇಷನ್ ಸಿಂದೂರ ಸಂಭ್ರಮಾಚರಣೆಯ ದೃಷ್ಟಿಯಿಂದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆದಿದೆ. ಪ್ರಧಾನಿ ಮೋದಿಯವರು ಬೆಳಗ್ಗೆ ಸುಮಾರು 7.30ಕ್ಕೆ ಧ್ವಜಾರೋಹಣ ನಡೆಸಲಿದ್ದಾರೆ.

ಬಳಿಕ ಸಿಂದೂರ ಕಾರ್ಯಾಚರಣೆ ಕುರಿತು ವಿಸ್ತೃತ ಮಾಹಿತಿ ನೀಡುವ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಸರ್ಕಾರ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸುವ ನಿರೀಕ್ಷೆಯಿದೆ.

ಸಿಂದೂರ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಧನೆ ತೋರಿದ ರಕ್ಷಣಾ ಪಡೆಗಳಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿ, ಅವರ ಸಾಧನೆಯನ್ನು ಕೊಂಡಾಡುವ ಸಾಧ್ಯತೆಯಿದೆ. ದೇಶದ ಆರ್ಥಿಕ ಪ್ರಗತಿ, ಕಲ್ಯಾಣ ಕಾರ್ಯಕ್ರಮಗಳು, 2047ರ ಹೊತ್ತಿಗೆ ಸಾಧಿಸಬೇಕಿರುವ ‘ವಿಕಸಿತ ಭಾರತ’, ಆತ್ಮನಿರ್ಭರ ಭಾರತ ದೃಷ್ಟಿಕೋನ, ಉಗ್ರವಾದ ಹಾಗೂ ಮಾವೋವಾದದ ನಿರ್ಮೂಲನೆ ಮೊದಲಾದ ವಿಚಾರಗಳನ್ನು ಸಹ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಹಲವು ಮುಖ್ಯ ವಿಚಾರಗಳ ಪ್ರಸ್ತಾಪ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೊಳಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹಲವು ಬಾರಿ ಉಚ್ಚರಿಸಿದ್ದಾರೆ. ಭಾರತ ಈ ಸಂಗತಿಯನ್ನು ನಿರಾಕರಿಸಿದರೂ ಟ್ರಂಪ್ ಜಪ ನಿಂತಿಲ್ಲ. ಇದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಮೋದಿಯವರ ಭಾಷಣದಲ್ಲಿ ಈ ವಿಚಾರದ ಕುರಿತು ಮಾತನಾಡುವ ಸಾಧ್ಯತೆ ಇದೆ.

ಇದಲ್ಲದೆ, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಿಹಾರ ಮತಪಟ್ಟಿ ತೀವ್ರ ಪರಿಷ್ಕರಣೆ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸುತ್ತಿರುವ ಮತಗಳ್ಳತನದ ಕುರಿತಾಗಿಯೂ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷೆಯಿದೆ.

ಆರ್ಟಿಕಲ್ 370 ರದ್ದತಿ ಬಳಿಕ ತೆಗೆದುಹಾಕಲಾಗಿದ್ದ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃ ಜಾರಿಗೊಳಿಸುವ ಕುರಿತಾಗಿಯೂ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಇಂದಿರಾ ಹಿಂದಿಕ್ಕಿ ಮತ್ತೊಂದು ಸಾಧನೆ: ಇತ್ತೀಚೆಗಷ್ಟೇ ಅತಿ ದೀರ್ಘ ಅವಧಿ ಭಾರತ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿ ಮೋದಿ ದಾಖಲೆ ಬರೆದಿದ್ದರು. ಇದೀಗ ಸತತ 12ನೇ ಬಾರಿ ಪ್ರಧಾನಿಯಾಗಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡುವ ಮೂಲಕ ಇಂದಿರಾ ಗಾಂಧಿಯವರ ಮತ್ತೊಂದು ದಾಖಲೆ ಮುರಿಯಲಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿ ಸತತ 11 ಬಾರಿ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣ ಮಾಡಿದರೆ, ಮೋದಿ 12ನೇ ಬಾರಿ ಮಾಡಿ ದಾಖಲೆ ನಿರ್ಮಿಸಲಿದ್ದಾರೆ. ಪಂ.ಜವಾಹರಲಾಲ್‌ ನೆಹರು 17 ಸಲ ಭಾಷಣ ಮಾಡಿದ್ದರು.

ಸಿಂದೂರದ ಸಂಭ್ರಮಾಚರಣೆ:

ಈ ವರ್ಷದ ಸ್ವಾತಂತ್ರ್ಯದಿನವನ್ನು ಆಪರೇಷನ್ ಸಿಂದೂರದ ವಿಜಯದ ಮೇಲೆ ಗಮನ ಕೇಂದ್ರೀಕರಿಸಿ, ‘ನವ ಭಾರತ’ ಎಂಬ ಥೀಮ್‌ನಡಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮ ನಡೆಯಲಿರುವ ಜ್ಞಾನಪಥ ಮಾರ್ಗವನ್ನು ಆಪರೇಷನ್ ಸಿಂದೂರದ ಲೋಗೊ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಆಹ್ವಾನಪತ್ರದಲ್ಲಿಯೂ ಸಿಂದೂರದ ಲೋಗೊ ಹಾಕಲಾಗಿದ್ದು, ನವಭಾರತದ ಸಂಕೇತವಾಗಿ ಚೆನಾಬ್ ಸೇತುವೆಯ ಗುರುತನ್ನು ಹಾಕಲಾಗಿದೆ.

ಪ್ರಧಾನಿಗಳು ಧ್ವಜಾರೋಹಣ ಮಾಡಿದ ಬೆನ್ನಲ್ಲೇ, 2 ಎಂಐ-17 ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಇವುಗಳ ಪೈಕಿ ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಹಾರಿಸಿದರೆ, ಇನ್ನೊಂದು ಆಪರೇಷನ್ ಸಿಂದೂರವನ್ನು ಪ್ರತಿಬಿಂಬಿಸುವ ಧ್ವಜವನ್ನು ಹಾರಿಸುತ್ತದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು 5,000ಕ್ಕೂ ಅಧಿಕ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಮೋದಿ ಭಾಷಣದಲ್ಲಿ ಏನಿರಬಹುದು?

-ಕದನ ವಿರಾಮದಲ್ಲಿ ಟ್ರಂಪ್ ಮಧ್ಯಸ್ಥಿಕೆ, ಮತಪಟ್ಟಿ ಪರಿಷ್ಕರಣೆ ಪ್ರಸ್ತಾಪ ಸಾಧ್ಯತೆ-ಸಿಂದೂರ ವಿಜಯ, ವಿಕಸಿತ ಭಾರತದ ಕುರಿತಾಗಿಯೂ ಮೋದಿ ಮಾತು

-ಜಮ್ಮು-ಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡುವ ಬಗ್ಗೆ ಘೋಷಣೆ ನಿರೀಕ್ಷೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್
ಉರ್ವಶಿ ರೌಟೇಲಾ, ಯುವರಾಜ್ ಸಿಂಗ್, ಸೋನು ಸೂದ್‌ಗೆ ಇಡಿ ಶಾಕ್, ₹7.9ಕೋಟಿ ಆಸ್ತಿ ಮುಟ್ಟುಗೋಲು