ಕರ್ನಾಟಕದ ಇಬ್ಬರಿಗೆ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’!

By Suvarna NewsFirst Published Jan 25, 2021, 7:34 AM IST
Highlights

ರಾಜ್ಯದ ಇಬ್ಬರಿಗೆ ಬಾಲ ಪುರಸ್ಕಾರ| ದಕ್ಷಿಣ ಕನ್ನಡದ ರಾಕೇಶ್‌ಕೃಷ್ಣ , ಬೆಂಗಳೂರಿನ ವೀರ್‌ ಕಶ್ಯಪ್‌ಗೆ ಗೌರವ| 1 ಲಕ್ಷ ನಗದಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ಕ್ಕೆ ಆಯ್ಕೆ| ವಿಜೇತರ ಜತೆ ಇಂದು ಮೋದಿ ಸಂವಾದ| ಕೊರೋನಾ ಜಾಗೃತಿಗೆ ಹಾವು-ಏಣಿ ರೀತಿಯ ವಿಶಿಷ್ಟಆಟ ಕಂಡುಹಿಡಿದ ವೀರ್‌ ಕಶ್ಯಪ್‌

ನವದೆಹಲಿ(ಜ.25): ಕರ್ನಾಟಕದ ಇಬ್ಬರು ಬಾಲಕರು ಸೇರಿ 32 ಮಕ್ಕಳು ಕೇಂದ್ರ ಸರ್ಕಾರ ನೀಡುವ 2021ನೇ ಸಾಲಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆ. ರಾಕೇಶ್‌ಕೃಷ್ಣ ಮತ್ತು ವೀರ್‌ ಕಶ್ಯಪ್‌ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಮಕ್ಕಳು. ರಾಕೇಶ್‌ ಕೃಷ್ಣ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದವರು. ವೀರ್‌ ಕಶ್ಯಪ್‌ ಬೆಂಗಳೂರಿನವರು. ಇವರಿಬ್ಬರಿಗೂ ಆವಿಷ್ಕಾರ ವಲಯದಲ್ಲಿ ಪುರಸ್ಕಾರ ಲಭಿಸಿದೆ. ಕೊರೋನಾ ವೈರಸ್‌ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ ‘ಕೊರೋನಾ ಯುಗ’ ಎಂಬ ವಿಶಿಷ್ಟಆಟ ಕಂಡುಹಿಡಿದರು ವೀರ್‌ ಕಶ್ಯಪ್‌.

ಕ್ರೀಡೆ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆ, ಶೌರ‍್ಯ, ಶಾಲಾ ಸಂಬಂಧಿ ಚಟುವಟಿಕೆ, ಆವಿಷ್ಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 18 ವರ್ಷದೊಳಗಿನ ಬಾಲ ಪ್ರತಿಭೆಗಳನ್ನು ಗುರುತಿಸಿ ಸರ್ಕಾರ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಪದಕ ಮತ್ತು 1 ಲಕ್ಷ ನಗದು ಒಳಗೊಂಡಿದೆ. ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ.

ಈ ವರ್ಷ 32 ವಿಜೇತರು:

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ‘21 ರಾಜ್ಯಗಳ 32 ಮಕ್ಕಳು ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆವಿಷ್ಕಾರ ಕ್ಷೇತ್ರದಲ್ಲಿ 9 ಮಕ್ಕಳಿಗೆ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ 7 ಮಕ್ಕಳಿಗೆ, ಶಾಲಾ ಸಂಬಂಧಿ ಚಟುವಟಿಕೆ ಕ್ಷೇತ್ರದಲ್ಲಿ ಐವರು, ಕ್ರೀಡಾ ಕ್ಷೇತ್ರದಲ್ಲಿ 7, ಶೌರ‍್ಯ ಕ್ಷೇತ್ರದಲ್ಲಿ ಮೂವರಿಗೆ ಹಾಗೂ ಸಾಮಾಜಿ ಸೇವೆ ಕ್ಷೇತ್ರದಲ್ಲಿ ಓರ್ವ ಮಗುವಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ತಿಳಿಸಿದೆ.

ಇವರನ್ನು ಅಭಿನಂದಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ‘2021ರ ಬಾಲ ಪುರಸ್ಕಾರ ಪ್ರಶಸ್ತಿ ಕೇವಲ ವಿಜೇತರಿಗೆ ಮಾತ್ರ ಪ್ರೇರಣೆಯಾಗದೆ, ತಮ್ಮ ಮಿತಿಯಲ್ಲಿಯೇ ಕನಸಿನತ್ತ ಸಾಗುತ್ತಿರುವ ಲಕ್ಷಾಂತರ ಮಕ್ಕಳಿಗೆ ಸ್ಫೂರ್ತಿಯಾಗಲಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

click me!