24 ತಾಸಲ್ಲಿ ಉಲ್ಟಾ ಹೊಡೆದ ಬಿಜೆಪಿ ಸಂಸದ, ರಾಜೀನಾಮೆ ವಾಪಸ್‌!

By Kannadaprabha NewsFirst Published Dec 31, 2020, 8:11 AM IST
Highlights

ಉಚಿತ ಚಿಕಿತ್ಸೆಗಾಗಿ ಗುಜರಾತ್‌ ಸಂಸದನ ರಾಜೀನಾಮೆ ವಾಪಸ್‌!| 24 ತಾಸಲ್ಲಿ ಉಲ್ಟಾಹೊಡೆದ ಮನ್‌ಸುಖ್‌ ವಸಾವಾ

ಅಹಮದಾಬಾದ್‌(ಡಿ.31): ಭರೂಚ್‌ನ 121 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೇಸತ್ತು ಮಂಗಳವಾರವಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ಆದಿವಾಸಿ ಮುಖಂಡ ಹಾಗೂ ಬಿಜೆಪಿ ಸಂಸದ ಮನ್‌ಸುಖ್‌ ವಸಾವಾ ಬುಧವಾರ ಏಕಾಏಕಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಬಿಜೆಪಿಗೆ ನೀಡಿದ ರಾಜೀನಾಮೆ ಹಿಂಪಡೆದಿರುವ ಅವರು, ಲೋಕಸಭೆ ಸದಸ್ಯತ್ವಕ್ಕೆ ನೀಡಲು ಉದ್ದೇಶಿಸಿದ್ದ ರಾಜೀನಾಮೆ ನಿರ್ಧಾರದಿಂದಲೂ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.

ಬುಧವಾರ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಪರಿಸರ ವಲಯ ವಿವಾದಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರಲಿಲ್ಲ. ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೆ. ನನಗೆ ತುಂಬಾ ಬೆನ್ನು ಹಾಗೂ ಕುತ್ತಿಗೆ ನೋವಿದೆ. ಒಮ್ಮೆ ನಾನು ರಾಜೀನಾಮೆ ನೀಡಿದರೆ ಉಚಿತ ಚಿಕಿತ್ಸೆ ಸಿಗದು.

ಸಂಸದನಾಗಿದ್ದರೆ ಮಾತ್ರ ಸಿಗುತ್ತದೆ ಎಂದು ಮುಖಂಡರು ಹೇಳಿದರು. ವಿಶ್ರಾಂತಿ ಪಡೆಯಿರಿ ಎಂದು ಬಿಜೆಪಿ ನಾಯಕರು ಸಲಹೆ ನೀಡಿದ್ದು, ಎಲ್ಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಹಿಂಪಡೆದು ಸಂಸದನಾಗಿ ಮುಂದುವರಿಯುವೆ’ ಎಂದು ತಿಳಿಸಿದರು.

click me!