ಪುಣೆಯ ಜನರಲ್ಲಿ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿ ಸುಳಿವು!

By Kannadaprabha NewsFirst Published Nov 22, 2020, 8:25 AM IST
Highlights

ಪುಣೆಯಲ್ಲಿ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿ?| ಕೊರೋನಾ ತಗಲಿದ ಶೇ.85ರಷ್ಟುಜನರಲ್ಲಿ ಆ್ಯಂಟಿಬಾಡೀಸ್‌ ಪತ್ತೆ| ದೇಶದಲ್ಲೇ ಮೊದಲ ಬಾರಿ ಪುಣೆಯಲ್ಲಿ ಹೊಸ ರೀತಿಯ ಅಧ್ಯಯನ

ಪುಣೆ(ನ.22): ದೇಶದಲ್ಲೇ ಮೊದಲ ಬಾರಿ ಮಹಾರಾಷ್ಟ್ರದ ಪುಣೆಯ ಕೆಲ ಭಾಗದಲ್ಲಿ ಕೊರೋನಾ ವೈರಸ್‌ ವಿರುದ್ಧ ಹರ್ಡ್‌ ಇಮ್ಯನಿಟಿ (ಸಮುದಾಯ ರೋಗನಿರೋಧಕ ಶಕ್ತಿ) ಅಭಿವೃದ್ಧಿಯಾಗಿರುವ ಸಾಧ್ಯತೆ ಕಂಡುಬಂದಿದೆ. ನಗರದಲ್ಲಿ ಕೊರೋನಾ ಹರಡಿರುವ ರೀತಿಯ ಪತ್ತೆಗೆ ಹೊಸ ರೀತಿಯ ಅಧ್ಯಯನವೊಂದನ್ನು ನಡೆಸಲಾಗಿದ್ದು, ಅದರಲ್ಲಿ ಈ ಹಿಂದೆ ಕೊರೋನಾದಿಂದ ಬಳಲಿದ್ದ ಶೇ.85ರಷ್ಟುಜನರಲ್ಲಿ ಪ್ರೊಟೆಕ್ಟಿವ್‌ ಆ್ಯಂಟಿಬಾಡೀಸ್‌ (ಸುರಕ್ಷತಾ ಪ್ರತಿಕಾಯ) ಪತ್ತೆಯಾಗಿದೆ. ಅಂದರೆ ಅವರು ಕೊರೋನಾ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಗಳಿಸಿಕೊಂಡಿದ್ದಾರೆ.

100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!

ಇದು ಕೊರೋನಾ ವಿರುದ್ಧ ಒಂದು ಪ್ರದೇಶದ ಎಷ್ಟುಜನರಲ್ಲಿ ಆ್ಯಂಟಿಬಾಡೀಸ್‌ ಅಭಿವೃದ್ಧಿಯಾಗಿದೆ ಎಂಬುದನ್ನು ಪತ್ತೆಹಚ್ಚುವ ಸೆರೋ ಸಮೀಕ್ಷೆಗಿಂತ ವಿಭಿನ್ನವಾಗಿದೆ. ಸೆರೋ ಸರ್ವೆಯಲ್ಲಿ ಎಷ್ಟುಜನರಿಗೆ ಕೊರೋನಾ ಬಂದು-ಹೋಗಿದೆ ಎಂಬುದು ಮಾತ್ರ ತಿಳಿಯುತ್ತದೆ. ಆದರೆ, ಈಗ ನಡೆಸಿರುವ ಅಧ್ಯಯನದಲ್ಲಿ ಎಷ್ಟುಜನರಲ್ಲಿ ಪ್ರೊಟೆಕ್ಟಿವ್‌ ಆ್ಯಂಟಿಬಾಡೀಸ್‌ ಅಭಿವೃದ್ಧಿಯಾಗಿದೆ ಎಂಬುದು ತಿಳಿಯುತ್ತದೆ.

ಪುಣೆಯ ಕೆಲ ವಾರ್ಡ್‌ಗಳಲ್ಲಿ ಕೊರೋನಾದಿಂದ ಗುಣಮುಖ ಹೊಂದಿದ ಶೇ.85ರಷ್ಟುಜನರಲ್ಲಿ ಪ್ರೊಟೆಕ್ಟಿವ್‌ ಆ್ಯಂಟಿಬಾಡೀಸ್‌ ಪತ್ತೆಯಾಗಿದೆ. ಇವರಿಗೆ ಸದ್ಯಕ್ಕೆ ಕೊರೋನಾ ಬರುವ ಸಾಧ್ಯತೆ ಕಡಿಮೆ. ಒಂದು ಪ್ರದೇಶದ ಶೇ.85ರಷ್ಟುಜನರಲ್ಲಿ ಪ್ರೊಟೆಕ್ಟಿವ್‌ ಆ್ಯಂಟಿಬಾಡೀಸ್‌ ಪತ್ತೆಯಾಗಿದೆ ಅಂದರೆ ಅಲ್ಲಿ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿಯಾಗಿದೆ ಎಂದು ಊಹಿಸಬಹುದು. ಆದರೆ, ಈಗಲೇ ಅದನ್ನು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ಅಧ್ಯಯನ ನಡೆಸಿದ ತಂಡದಲ್ಲಿದ್ದ ಡಾ|ಗಗನ್‌ದೀಪ್‌ ಕಾಂಗ್‌ ತಿಳಿಸಿದ್ದಾರೆ.

ಹರ್ಡ್‌ ಇಮ್ಯುನಿಟಿ ಭಾರತಕ್ಕೆ ಸರಿ ಹೊಂದಲ್ಲ: ಕೇಂದ್ರ!

ದೇಶದಲ್ಲಿ ದೆಹಲಿ ಮತ್ತು ಬೆಂಗಳೂರು ಬಿಟ್ಟರೆ ಅತಿಹೆಚ್ಚು ಕೊರೋನಾ ಪ್ರಕರಣಗಳು (3.44 ಲಕ್ಷ) ಪತ್ತೆಯಾಗಿರುವುದು ಪುಣೆಯಲ್ಲಿ. ಈ ಹಿಂದೆ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಇಲ್ಲಿ ನಡೆಸಿದ್ದ ಸೆರೋ ಸಮೀಕ್ಷೆಯಲ್ಲಿ ನಗರದ ಶೇ.51ರಷ್ಟುಜನರಿಗೆ ಕೊರೋನಾ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಅವರಲ್ಲಿ ಎಲ್ಲರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಎಲ್ಲರೂ ಪರೀಕ್ಷೆಗೆ ಒಳಗಾಗಿರಲಿಲ್ಲ. ಈಗ ಸೋಂಕಿನ ಪರೀಕ್ಷೆಗೆ ಒಳಗಾದವರ ಪೈಕಿ ಶೇ.85ರಷ್ಟು ಜನರಲ್ಲಿ ಪ್ರೊಟೆಕ್ಟಿವ್‌ ಆ್ಯಂಟಿಬಾಡೀಸ್‌ ಪತ್ತೆಯಾಗಿರುವುದರಿಂದ ಪುಣೆಯಲ್ಲಿ ಸಮುದಾಯ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿರಬಹುದು ಎಂದು ಊಹಿಸಲಾಗುತ್ತಿದೆ.

click me!