
ಪಶ್ಚಿಮ ಬಂಗಾಳದಲಿ ದುರ್ಗಾ ಪೂಜೆಗೂ ಮುನ್ನ ಆಹಾರ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹೊಸ ಚರ್ಚೆ ಭುಗಿಲೆದ್ದಿದೆ. ಇತ್ತೀಚೆಗೆ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಒಂದು ಹೇಳಿಕೆಯನ್ನ ನೀಡಿದ್ದಾರೆ. ದುರ್ಗಾ ಪೂಜೆಯ ಸಮಯದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರದಿಂದ ದೂರವಿರಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ, ಅಲ್ಲಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೌಶಿಕಿ ಅಮವಾಸ್ಯೆಯ ಸಂದರ್ಭದಲ್ಲಿ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಮೀನು ನೈವೇದ್ಯವನ್ನು ಸೇವಿಸಲು ನೆಲದ ಮೇಲೆ ಕುಳಿತರು. ಬೆನ್ನಲ್ಲೇ ಶಾಸ್ತ್ರಿಗಳ ಈ ಹೇಳಿಕೆಯು ಮತ್ತಷ್ಟು ವಿವಾದವನ್ನು ಹೆಚ್ಚಿಸಿತು.
ವಿವಾದ ಏನೇ ಇರಲಿ. ದೇಶದಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಮಾಂಸಾಹಾರವನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅಂಥ ದೇಗುಲಗಳು ಯಾವ್ಯಾವುದು ಅನ್ನೋ ವಿವರ ಇಲ್ಲಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ಕಾಳಿ ದೇವಾಲಯ ಇದೆ. ಇದು ದೇಶದ ಅತ್ಯಂತ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದು. ಕಾಳಿ ದೇವಿಗೆ ಮೇಕೆಯನ್ನು ಬಲಿ ನೀಡಲಾಗುತ್ತದೆ. ಇದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ದೇವಾಲಯದ ಒಂದು ಜಾಗದಲ್ಲಿ ಬಲಿಗೆ ಮೀಸಲಾದ ಸ್ಥಳ ಇದೆ. ಮೇಕೆ ಕಡಿದ ನಂತರ ಮಾಂಸವನ್ನು ಬೇಯಿಸಿ ದೇವಿಗೆ ಅರ್ಪಿಸಲಾಗುತ್ತದೆ. ನಂತರ ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಭಕ್ತರು ಬಲಿ ನೀಡುವ ಬದಲು ತೆಂಗಿನಕಾಯಿ, ಕುಂಬಳಕಾಯಿ ಅರ್ಪಿಸುತ್ತಾರೆ. ಹೀಗಿದ್ದೂ ಮಾಂಸವನ್ನು ಅರ್ಪಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡೇ ಬಂದಿದೆ.
ಅಸ್ಸಾಂನ ಗುವಾಹಟಿಯಲ್ಲಿ ಮಾ ಕಾಮಾಕ್ಯ ದೇವಾಲಯ ಇದೆ. ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಇದೂ ಒಂದು. ಈ ದೇಗುಲ ತಾಂತ್ರಿಕ ಪದ್ಧತಿಗಳಿಗೂ ಹೆಸರುವಾಸಿ. ಅಂಬುಬಾಚಿ ಜಾತ್ರೆಯ ಸಮಯದಲ್ಲಿ ಮತ್ತು ನಿಯಮಿತ ಸಂದರ್ಭಗಳಲ್ಲಿ ಮೇಕೆ ಮತ್ತು ಪಾರಿವಾಳಗಳನ್ನ ಬಲಿಯಾಗಿ ನೀಡಲಾಗುತ್ತದೆ. ದುರ್ಗಾ ಪೂಜೆಯ ಸಮಯದಲ್ಲಿ ಕೋಣಗಳು ಮತ್ತು ಬಾತುಕೋಳಿಗಳನ್ನು ಸಹ ಬಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಬಲಿ ಪಡೆದ ನಂತರ ಮಾಂಸವನ್ನು ದೇವಿಗೆ ನೈವೇದ್ಯವೆಂದು ಅರ್ಪಿಸಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ನರಬಲಿಯಂತಹ ಪ್ರಾಚೀನ ಪದ್ಧತಿಗಳನ್ನು ಈಗ ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದರೂ ಪ್ರಾಣಿ ಬಲಿಯ ಸಂಪ್ರದಾಯ ಮುಂದುವರೆದಿದೆ..
ಪಶ್ಚಿಮ ಬಂಗಾಳದಲ್ಲಿ ಇನ್ನೊಂದು ದೇಗುಲ ಬಿರ್ಭುಮ್ ಜಿಲ್ಲೆಯಲ್ಲಿದೆ. ಅದುವೇ ತಾರಾಪೀಠ ದೇವಾಲಯ. ತಾರಾ ದೇವಿಗೆ ಮಾಂಸಾಹಾರ ಸಮರ್ಪಿತ. ಈ ದೇಗುಲ ತಾಂತ್ರಿಕ ಪದ್ಧತಿಗೆ ಹೆಸರುವಾಸಿ. ಇಲ್ಲಿ ಮೇಕೆಯನ್ನು ಬಲಿ ನೀಡುವ ಸಂಪ್ರದಾಯವಿದೆ. ಬಲಿದಾನದ ನಂತರ ಮಾಂಸವನ್ನು ದೇವಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಕಾಲಕಾಲಕ್ಕೆ ದೇವಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಆಹಾರ ದೇಣಿಗೆಗಳನ್ನು ಆಯೋಜಿಸಲಾಗುತ್ತದೆ.
ಕೇರಳದಲ್ಲಿ ಒಂದು ಭದ್ರಕಾಳಿ ದೇವಸ್ಥಾನವಿದೆ. ಇದನ್ನು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಸ್ಥಾನಗಳ ಮೂಲವೆಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಾಣಿ ಬಲಿ ಇಲ್ಲಿ ಒಂದು ಸಂಪ್ರದಾಯವಾಗಿತ್ತು. ಕಾನೂನು ಅದನ್ನು ನಿಷೇಧಿಸಿದ ನಂತರ ಈ ದೇವಸ್ಥಾನದಲ್ಲಿ ನಿತ್ಯ ಕೋಳಿಯನ್ನು ಅರ್ಪಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ