
ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾನೂನಿಗೆ ಸಂಬಂಧಿಸಿದಂತೆ ಭಾರಿ ಚರ್ಚೆ ನಡೆಯುತ್ತಿದೆ. ಅದು ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಕೋರ್ಟ್ ಆದೇಶಿಸಿದೆ. ಆದರೆ ಜೈಲು ಶಿಕ್ಷೆಗೆ ಒಳಗಾಗಿರುವವರ ಜೈಲು ವೆಚ್ಚವನ್ನು, ಅವರ ಅಗತ್ಯವನ್ನು ನೋಡಿಕೊಳ್ಳುವ ಹಣವನ್ನು ಅರ್ಜಿದಾರರೇ ಅರ್ಥಾತ್ ಅವರ ವಿರುದ್ಧ ದೂರು ದಾಖಲು ಮಾಡಿರುವವರೇ ಭರಿಸಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಈ ರೀತಿ ಆದೇಶ ಹೊರಡಿಸುವುದು ಹೊಸತೇನಲ್ಲ. ಏಕೆಂದರೆ ಇದು ಕಾನೂನಿನಲ್ಲಿಯೇ ಇರುವಂಥದ್ದು. ಆದರೆ, ಈ ಪ್ರಕರಣ ಮೀಡಿಯಾ ಅಟೆನ್ಷನ್ ತೆಗೆದುಕೊಂಡಿದ್ದರಿಂದ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ಕೋರ್ಟ್ ಈ ರೀತಿ ಆದೇಶ ಹೊರಡಿಸಿದೆ ಎಂದು ಬರೆದದ್ದರಿಂದ ಭಾರಿ ಚರ್ಚೆಗಳು ಶುರುವಾಗಿದೆ. ದೂರುದಾರರೇ ಜೈಲುಪಾಲಾದವರ ಜೈಲಿನ ವೆಚ್ಚವನ್ನು ಭರಿಸಬೇಕು ಎನ್ನುವುದು ಸರಿಯೆ? ಈ ರೀತಿ ಕಾನೂನು ಉಂಟೆ? ದೂರುದಾರ ಹಣ ಕೊಡದಿದ್ರೆ ಏನಾಗುತ್ತೆ? ಇದು ಯಾರ ರೀತಿಯ ಕಾನೂನು ಎನ್ನುವ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಸಿವಿಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಆಗುವುದು ಅಪರೂಪ. ಏಕೆಂದರೆ ಇದು ಕ್ರಿಮಿನಲ್ ಪ್ರಕರಣಗಳಿಗಿಂತಲೂ ಭಿನ್ನ. ಸಿವಿಲ್ ಪ್ರಕರಣಗಳು, ವಿವಾದಗಳನ್ನು ಪರಿಹರಿಸುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವುದರ ಮೇಲೆ ಕೇಂದ್ರೀತವಾಗಿರುತ್ತವೆ. ಇದರ ಉದ್ದೇಶ ಜೈಲು ಶಿಕ್ಷೆ ಅಲ್ಲವೇ ಅಲ್ಲ. ಆದರೆ ಜೈಲು ಶಿಕ್ಷೆ ಕೊನೆಯ ಹಂತವಾಗಿ ಬರುತ್ತದೆ. ಅದು ಹೆಚ್ಚಾಗಿ ನಡೆಯುವುದು, ಕೋರ್ಟ್ ಆದೇಶದ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ. ಹಾಗೊಮ್ಮೆ ಜೈಲು ಶಿಕ್ಷೆಯಾದರೆ ದೂರುದಾರರು, ಅಪರಾಧಿಗಳ ಜೈಲು ವೆಚ್ಚವನ್ನು ಭರಿಸುವಂತೆ ಕೋರ್ಟ್ ಆದೇಶಿಸುತ್ತದೆ. ಸುಲಭದಲ್ಲಿ ಹೇಳಬೇಕು ಎಂದರೆ, ಯಾರಾದರೂ ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಕೇಳಿಕೊಂಡಾಗ ಅದರ ವೆಚ್ಚವನ್ನು ಹೇಗೆ, ರಕ್ಷಣೆ ಕೇಳಿದವರು ಭರಿಸಬೇಕೋ, ಅದೇ ರೀತಿ ಸಿವಿಲ್ ಪ್ರಕರಣದಲ್ಲಿ ಕೂಡ ಅದನ್ನೇ ಕಾನೂನಿನಲ್ಲಿ ಅಳವಡಿಸಲಾಗಿದೆ. ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲುಶಿಕ್ಷೆಯಾದರೆ, ಅದರ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲೆ ಇರುತ್ತದೆ. ಅದಕ್ಕಾಗಿಯೇ ಸಿವಿಲ್ ಪ್ರಕರಣಗಳಲ್ಲಿ ಕೂಡ ಯಾರು ಅರ್ಜಿ ಸಲ್ಲಿಸಿರುತ್ತಾರೆಯೋ ಅವರೇ ಮೊದಲು ಕೋರ್ಟ್ಗೆ ಫೀಸ್ ಅನ್ನು ಕಟ್ಟಿಸಿಕೊಳ್ಳುವ ಉದ್ದೇಶವೂ ಇದೇ ಆಗಿದೆ.
ಹೇಳಿ ಕೇಳಿ ನಮ್ಮದು ಬ್ರಿಟಿಷ್ ಕಾನೂನು. ನಮ್ಮ ಸಿವಿಲ್ ದಂಡ ಸಂಹಿತೆ 1908(Civil Procedure Code- CPC) ರ ಸೆಕ್ಷನ್ 57 ಮತ್ತು ಆದೇಶ XXI ನಿಯಮ 39 ರಲ್ಲಿ ಶಿಕ್ಷೆ ಹಾಗೂ ದೂರುದಾರ ಅದರ ವೆಚ್ಚ ಭರಿಸುವ ಬಗ್ಗೆ ಉಲ್ಲೇಖವಾಗಿದೆ. ಇದರ ಪ್ರಕಾರ ಡಿಕ್ರಿ ಹೋಲ್ಡರ್ ಅರ್ಥಾತ್ ಕೋರ್ಟ್ಗೆ ಅರ್ಜಿ ಸಲ್ಲಿಸಿರುವಾತ ಸಿವಿಲ್ ಕೇಸ್ನಲ್ಲಿ ಜೈಲಿನಲ್ಲಿ ಬಂಧಿಸಲ್ಪಟ್ಟವರಿಗೆ ಜೀವನಾಧಾರ ಭತ್ಯೆ ಎಂದು ಕರೆಯಲ್ಪಡುವ ಜೈಲು ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಬಂಧನದ ಸಮಯದಲ್ಲಿ ಜೈಲಿನಲ್ಲಿ ಇರುವವರ ಮೂಲಭೂತ ಅಗತ್ಯತೆಗಳಿಗಾಗಿ ಈ ಭತ್ಯೆಯನ್ನು ಪಾವತಿಸಬೇಕು.
ಕೇಸ್ ಹಾಕಿದವರು ಎಷ್ಟು ಹಣ ನೀಡಬೇಕು ಎನ್ನುವುದನ್ನು ಕೋರ್ಟ್ ನಿಗದಿಪಡಿಸುತ್ತದೆ. ಆರೋಪಿಗೆ ಜೈಲು ಶಿಕ್ಷೆ ವಿಧದಿಸಿದಾಗ, ಕೋರ್ಟ್ ಮೊದಲು ಅವರ ಜೀವನೋಪಾಯಕ್ಕಾಗಿ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಲೆಕ್ಕ ಹಾಕಿ ಮಾಸಿಕ ಭತ್ಯೆಯನ್ನು ನಿರ್ಧರಿಸುತ್ತದೆ. ಇದು ದೂರು ಸಲ್ಲಿಸಿದವರ ಆದಾಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೋರ್ಟ್ ಹೇಳಿರುವ ಹಣವನ್ನು ಮೊದಲು ದೂರುದಾರರು ಕೋರ್ಟ್ನಲ್ಲಿ ಠೇವಣಿ ಇಡಬೇಕಾಗುತ್ತದೆ. ಈ ಹಣವನ್ನು ಪ್ರತಿತಿಂಗಳು ಕೋರ್ಟ್ ನಿಗದಿಪಡಿಸಿರುವ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅವರು ಅಂಥ ಅಪರಾಧಿಯ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಾರೆ.
ಒಂದು ವೇಳೆ ದೂರು ಸಲ್ಲಿಸಿದವರು ಕೋರ್ಟ್ಗೆ ಹಣ ನೀಡಲು ಅಂದರೆ ನ್ಯಾಯಾಲಯ ನಿಗದಿಪಡಿಸಿರುವ ಭತ್ಯೆಯನ್ನು ಪಾವತಿಸಲು ವಿಫಲವಾದರೆ ಅಪರಾಧಿಗೆ ನೀಡಿರುವ ಜೈಲುಶಿಕ್ಷೆ ರದ್ದಾಗುತ್ತದೆ. ಅಷ್ಟಕ್ಕೂ ದೂರುದಾರ ಇಷ್ಟಪಟ್ಟಲ್ಲಿ ಮತ್ತೊಮ್ಮೆ ಕೇಸ್ ಹಾಕುವ ಮೂಲಕ, ತಾವು ನೀಡಿರುವ ಜೀವನಾಧಾರ ವೆಚ್ಚಗಳನ್ನು ಮರುಪಾವತಿ ಮಾಡಿಕೊಳ್ಳಲೂ ಕಾನೂನು ಅವಕಾಶ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ