
ನವದೆಹಲಿ (ಮೇ.27): ಬಿಹಾರ ರಾಜ್ಯದ ಅರಾರಿಯಾದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವು ಪತ್ತೆಯಾಗಿದೆ. ಶನಿವಾರ ಮಧ್ಯಾಹ್ನದ ಬಿಸಿಯೂಟ ಬಡಿಸಿದಾಗ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಯೊಬ್ಬನ ಪ್ಲೇಟ್‌ನಲ್ಲಿ ಹಾವು ಪತ್ತೆಯಾಗಿದೆ. ಆತ ಇದನ್ನು ತಿಳಿಸುವ ವೇಳೆಗಾಗಲೇ 100ಕ್ಕೂ ಹೆಚ್ಚಿ ವಿದ್ಯಾರ್ಥಿಗಳು ಅದಾಗಲೇ ಊಟ ಸೇವಿಸಿದ್ದರು. ಅರಾರಿಯಾ ಜಿಲ್ಲೆಯ ಫೋರ್ಬೆಸ್‌ಗಂಜ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಾಹ್ನದ ಊಟವನ್ನು ಸೇವಿಸಿದ ನಂತರ 12ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಏನಾದರೂ ಸೋಂಕು ತಗುಲಿರಬಹುದೇ ಎನ್ನುವ ಎಚ್ಚರಿಕೆಯಲ್ಲಿ ಅವರುನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಮಧ್ಯಾಹ್ನದ ಬಿಸಿಯೂಟವನ್ನು ಖಾಸಗಿ ಎನ್‌ಜಿಓ ನೀಡಿತ್ತು. ಖಿಚಡಿಯನ್ನು ಮಧ್ಯಾಹ್ನದ ಊಟಕ್ಕೆ ನೀಡಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬನ ಪ್ಲೇಟ್‌ನಲ್ಲಿ ಹಾವು ಪತ್ತೆಯಾಗಿದೆ.
ಈ ಸುದ್ದಿ ಇಡೀ ಶಾಲೆಯಾದ್ಯಂತ ಹರಡಿದ ಬಳಿಕ, ಊಟ ವಿತರಣೆಯನ್ನು ನಿಲ್ಲಿಸಲಾಗಿದೆ. ಆದರೆ, ಅದಾಗಲೇ ಊಟ ಸೇವಿಸಿದ್ದ ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಮಧ್ಯಾಹ್ನದ ಊಟ ವಿತರಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಪಾಲಕರು ಕೂಡ ಶಾಲಾ ಆವರಣದಲ್ಲಿ ಜಮಾಯಿಸಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಎನ್‌ಜಿಒ ಅವರು ಸಿದ್ಧಪಡಿಸಿದ ಊಟವನ್ನು ಬೆಳಿಗ್ಗೆ 9 ಗಂಟೆಗೆ ಶಾಲೆಗೆ ತಂದಿದ್ದರು. ಮಧ್ಯಾಹ್ನದ ವೇಳೆಗೆ ಸುಮಾರು 150 ಮಕ್ಕಳು ಆಹಾರವನ್ನು ಸೇವಿಸಿದ್ದಾರೆ, ಆದರೆ ಹಲವಾರು ವಿದ್ಯಾರ್ಥಿಗಳು ಇನ್ನೂ ಎನ್‌ಜಿಒದ ಸೇವೆಯ ಪಾತ್ರೆಗಳಿಂದ ಆಹಾರವನ್ನು ಸ್ವೀಕರಿಸುತ್ತಿರುವಾಗ ಊಟದಲ್ಲಿ ಸತ್ತ ಹಾವು ಕಂಡುಬಂದಿದೆ. ಮಾಹಿತಿ ಪಡೆದ ಫೋರ್ಬ್ಸ್‌ಗಂಜ್ ಎಸ್‌ಡಿಒ ಸುರೇಂದ್ರ ಕುಮಾರ್ ಅಲ್ಬೆಲಾ ಮತ್ತು ಡಿಎಸ್‌ಪಿ ಖುಶ್ರು ಸಿರಾಜ್ ಶಾಲೆಗೆ ಧಾವಿಸಿದರು.
ಇದಕ್ಕೂ ಮೊದಲು ಮೇ 18 ರಂದು ಬಿಹಾರದ ಸರನ್ ಜಿಲ್ಲೆಯ ಸದರ್ ಬ್ಲಾಕ್‌ನ ಡುಮ್ರಿಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟದಲ್ಲಿ ಸತ್ತ ಹಲ್ಲಿಗಳು ಪತ್ತೆಯಾದ ನಂತರ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಮಧ್ಯಾಹ್ನದ ಊಟ ಸೇವಿಸಿ 35 ವಿದ್ಯಾರ್ಥಿಗಳು ಅಂದು ಅಸ್ವಸ್ಥಗೊಂಡಿದ್ದರು.
ಮಕ್ಕಳ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸೇ ಇಲ್ಲ, 4 ಗಂಟೆ ಶಿಕ್ಷಕರನ್ನು ಕೂಡಿಹಾಕಿದ ಪೋಷಕರು
ಶಾಲೆಯ ಮುಖ್ಯೋಪಾಧ್ಯಾಯಿನಿ ಪೂನಂ ಕುಮಾರಿ, 'ಎನ್‌ಜಿಒವೊಂದು ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ವಿತರಿಸುತ್ತಿದೆ. ವಿದ್ಯಾರ್ಥಿಗಳು ಮಧ್ಯಾಹ್ನದ ಊಟದಲ್ಲಿ ಹಲ್ಲಿಯನ್ನು ಕಂಡ ತಕ್ಷಣ ಆಹಾರ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು ಮತ್ತು ಎಲ್ಲಾ ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಅವರು ಹೇಳಿದ್ದರು.
ಬಿಸಿಯೂಟದಲ್ಲಿ ಹಾವು: 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಪೋಷಕರಿಂದ ತೀವ್ರ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ