ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ!

By Suvarna NewsFirst Published Sep 13, 2021, 3:37 PM IST
Highlights

* ದೇಶದಲ್ಲೇ ಮೊದಲ ಬಾರಿ ಸರ್ಕಾರದಿಂದ ಹೈಟೆಕ್‌ ಪ್ರಯೋಗ

* ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ

* 20 ವಯಲ್‌ ಲಸಿಕೆ, 12 ಕೇಜಿ ಔಷಧ ಡ್ರೋನ್‌ನಲ್ಲಿ ಸಾಗಣೆ

ಹೈದರಾಬಾದ್‌(ಸೆ.13): ಡ್ರೋನ್‌ ಸಂಚಾರ ನಿಯಮಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಸರಳಗೊಳಿಸಿದ ಬೆನ್ನಲ್ಲೇ, ಐತಿಹಾಸಿಕ ಘಟನೆಯೊಂದಕ್ಕೆ ತೆಲಂಗಾಣದ ವಿಕಾರಾಬಾದ್‌ ಜಿಲ್ಲೆ ಸಾಕ್ಷಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆರಂಭಿಸಲಾದ ‘ಮೆಡಿಸನ್‌ ಫ್ರಂ ದಿ ಸ್ಕೈ’ ಯೋಜನೆಯಡಿ 12 ಕೆ.ಜಿ. ಔಷಧ ಮತ್ತು 20 ವಯಲ್‌ (200 ಡೋಸ್‌) ಲಸಿಕೆಗಳನ್ನು ಹೊತ್ತ ಡ್ರೋನ್‌ ಒಂದು 6 ಕಿ.ಮೀ. ದೂರದ ಪ್ರದೇಶಕ್ಕೆ ಅದನ್ನು ಯಶಸ್ವಿಯಾಗಿ ತಲುಪಿಸಿದೆ. ಇಷ್ಟುದೂರಕ್ಕೆ ಔಷಧಿ ಮತ್ತು ಲಸಿಕೆ ಪೂರೈಸಿದ ದೇಶದ ಮೊದಲ ಉದಾಹರಣೆ ಇದಾಗಿದೆ. ಹೀಗಾಗಿ ಈ ಯಶಸ್ಸು ಇಡೀ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬಣ್ಣಿಸಿದ್ದಾರೆ.

ಯೋಜನೆಯನ್ನು ತೆಲಂಗಾಣದ 16 ಹಸಿರು ವಲಯದಲ್ಲಿ ಪ್ರಯೋಗಾರ್ಥವಾಗಿ ಜಾರಿಗೊಳಿಸಲಾಗಿದೆ. ಈ ಕುರಿತ 3 ತಿಂಗಳ ಅಂಕಿ ಅಂಶವನ್ನು ಆಧರಿಸಿ ಅದನ್ನು ದೇಶವ್ಯಾಪಿ ವಿಸ್ತರಿಸಲಾಗುವುದು. ಯೋಜನೆಯನ್ನು ಶೀಘ್ರವೇ 8 ರಾಜ್ಯಗಳಿಗೆ ವಿಸ್ತರಿಸಲಾಗುವುದು. 2030ರ ವೇಳೆಗೆ ಭಾರತ ಡ್ರೋನ್‌ ಹಬ್‌ ಆಗಿ ಪರಿವರ್ತನೆಯಾಗಲಿದೆ ಎಂದು ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸ ದಾಖಲೆ:

ಈ ಮೊದಲು 500 ಮೀಟರ್‌ನಿಂದ 1 ಕಿ.ಮೀ. ದೂರದವರೆಗೆ ಖಾಲಿ ಡ್ರೋನ್‌ಗಳ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಶನಿವಾರ ಮೊದಲ ಬಾರಿಗೆ ಡ್ರೋನ್‌ನಲ್ಲಿ 12 ಕೆ.ಜಿ. ಔಷಧ ಮತ್ತು 20 ವಯಲ್‌ ಲಸಿಕೆಯನ್ನು ವಿತರಣಾ ಕೇಂದ್ರವೊಂದರಿಂದ ಸಮೀಪದ ಆರೋಗ್ಯ ಸೇವಾ ಕೇಂದ್ರಕ್ಕೆ ಸಾಗಿಸಲಾಯಿತು. 6 ಕಿ.ಮೀ. ದೂರವನ್ನು ಡ್ರೋನ್‌ ಕೇವಲ 5 ನಿಮಿಷದಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ವಿಕಾರಾಬಾದ್‌ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರಗಳು ತುಂಬಾ ದೂರ ದೂರದಲ್ಲಿ ಇರುವ ಕಾರಣ, ಅಲ್ಲಿಯೇ ಪರೀಕ್ಷೆ ನಡೆಸಿದರೆ ಎದುರಾಗಬಹುದಾದ ಅಡೆತಡೆಗಳ ಕುರಿತು ಮಾಹಿತಿ ಸಂಗ್ರಹಿಸಬಹುದು ಎನ್ನುವ ಕಾರಣಕ್ಕೆ ಈ ಸ್ಥಳವನ್ನು ಅಯ್ಕೆ ಮಾಡಲಾಗಿತ್ತು.

ವಿಶ್ವ ಆರ್ಥಿಕ ವೇದಿಕೆ, ನೀತಿ ಆಯೋಗ, ಅಪೋಲೋ ಆಸ್ಪತ್ರೆ, ಕೇಂದ್ರ ಸರ್ಕಾರ, ತೆಲಂಗಾಣ ಸರ್ಕಾರಗಳ ಸಹಯೋಗದಲ್ಲಿ ಮೆಡಿಸಿನ್‌ ಫ್ರಂ ದಿ ಸ್ಕೈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.

click me!