ಯುದ್ಧನೌಕೆಗೆ ಮಹಿಳಾ ಪ್ರವೇಶ, ಇತಿಹಾಸದಲ್ಲೇ ಮೊದಲ ಬಾರಿಗೆ ಹುದ್ದೆ!

By Suvarna NewsFirst Published Sep 22, 2020, 11:58 AM IST
Highlights

ಯುದ್ಧನೌಕೆಗೆ ಮಹಿಳಾ ಪ್ರವೇಶ| ಇತಿಹಾಸದಲ್ಲೇ ಮೊದಲ ಬಾರಿಗೆ ಹುದ್ದೆ| ಕಾಪ್ಟರ್‌ ಅಬ್ಸರ್ವರ್‌ ಉದ್ಯೋಗ

ನವದೆಹಲಿ(ಸೆ.22): ದೇಶದ ರಕ್ಷಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಯುದ್ಧ ನೌಕೆಯಲ್ಲಿನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಬ್‌ ಲೆಫ್ಟಿನೆಂಟ್‌ ಕುಮುದಿನಿ ತ್ಯಾಗಿ ಮತ್ತು ಸಬ್‌ ಲೆಫ್ಟಿನೆಂಟ್‌ ರಿತಿ ಸಿಂಗ್‌ ಅವರೇ ಆ ಅಧಿಕಾರಿಗಳು. ಇವರು ಯುದ್ಧನೌಕೆಯಿಂದ ಕಾರ್ಯಾಚರಣೆ ನಡೆಸುವ ಹೆಲಿಕಾಪ್ಟರ್‌ಗಳಲ್ಲಿ ‘ಅಬ್ಸರ್ವರ್‌’ ಕೆಲಸ ಮಾಡಲಿದ್ದಾರೆ.

ನೌಕಾಪಡೆಯಲ್ಲಿ ಮಹಿಳೆಯರಿಗೆ ಕರ್ತವ್ಯ ನಿರ್ವಹಿಸಲು ಈ ಹಿಂದೆಯೇ ಅವಕಾಶ ನೀಡಿದ್ದರೂ ಅವರನ್ನು ಸಮರ ನೌಕೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುತ್ತಿರಲಿಲ್ಲ. ಸಮರ ನೌಕೆಗಳಲ್ಲಿ ಮಹಿಳೆಯರಿಗೆ ಬೇಕಾದ ಖಾಸಗಿತನದ ವ್ಯವಸ್ಥೆ, ಮಹಿಳಾ ಶೌಚಾಲಯ ಇತ್ಯಾದಿಗಳು ಇಲ್ಲ ಎಂಬ ಕಾರಣಕ್ಕೆ ಅವರನ್ನು ಭೂಮಿಯ ಮೇಲಿನ ಕರ್ತವ್ಯಕ್ಕಷ್ಟೇ ನಿಯೋಜಿಸಲಾಗುತ್ತಿತ್ತು. ಇದೀಗ ಮೊದಲ ಬಾರಿ ಸೋಮವಾರ ಇಬ್ಬರು ಮಹಿಳಾ ಅಧಿಕಾರಿಗಳನ್ನು ಐಎನ್‌ಎಸ್‌ ಗರುಡ ನೌಕೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವರು ಶತ್ರು ರಾಷ್ಟ್ರಗಳ ಯುದ್ಧನೌಕೆಗಳನ್ನು ಹಾಗೂ ಜಲಾಂತರ್ಗಾಮಿಗಳನ್ನು ಪತ್ತೆಹಚ್ಚುವ ಮತ್ತು ಅವುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಅತ್ಯಾಧುನಿಕ ಎಂಎಚ್‌-60 ಆರ್‌ ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ನಡೆಸಲಿದ್ದಾರೆ.

ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾ, ಜರ್ಮನಿ, ಫ್ರಾನ್ಸ್‌ನಂತಹ ದೇಶಗಳ ಯುದ್ಧ ನೌಕೆಗಳಲ್ಲಿ ಮಹಿಳೆಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ.

click me!